ವೈರವನ್ನು ಕೃತಜ್ಞತೆಯಾಗಿ ಬದಲಿಸಿಕೊಳ್ಳುವ ಸಾಧ್ಯತೆಯ ಹತ್ತು ಅಂಶಗಳು
ವೈರ ಅನ್ನುವ ಭಾವನೆಯೇ ನಮ್ಮ ಸಕಾರಾತ್ಮಕ ಚಿಂತನೆಗೆ ಬಹಳ ದೊಡ್ಡ ಕೊಡಲಿ ಪೆಟ್ಟು. ನಮಗೆ ಮತ್ತೊಬ್ಬರಿಂದ ತೊಂದರೆ ಆಗುತ್ತಿದ್ದರೆ, ಅವರ ಮೇಲೆ ಅಸಹನೀಯ ದ್ವೇಷ ಬೆಳೆಸಿಕೊಂಡುಬಿಡುತ್ತೇವೆ. ಇದರಿಂದ ನಮ್ಮ ಅಂತಃಸತ್ವ ಕುಗ್ಗುತ್ತದೆ. ನಮ್ಮ ಬೆಳವಣಿಗೆಗೆ ಹಿನ್ನಡೆ ಉಂಟು ಮಾಡುತ್ತದೆ. ಅದೇ ನಾವು ನಮ್ಮ ದೃಷ್ಟಿಕೋನ ಬದಲಿಸಿಕೊಂಡು ನಮಗೆ ಒಡ್ಡಲಾಗುವ ಪ್ರತಿಯೊಂದು ಅಡ್ಡಿಯನ್ನೂ ಕಲಿಕೆಯ ಸವಾಲಾಗಿ ಸ್ವೀಕರಿಸಿದರೆ, ವೈರ ಭಾವದ ಬದಲು ಕೃತಜ್ಞತೆ, ಹಿನ್ನಡೆಯ ಬದಲು ಬೆಳವಣಿಗೆ ಸಾಧ್ಯ ಆಗುತ್ತವೆ.

ಇಂಥಾ ಸಾಧ್ಯತೆಯ ಹತ್ತು ಅಂಶಗಳು ಇಲ್ಲಿವೆ…

1. ಯಾರಾದರೂ ನಿಮಗೆ ಕಿರಿಕಿರಿ ಮಾಡುತ್ತಿದ್ದರೆ, ಅವರು ನಿಮಗೆ ಸಹನೆ ಮತ್ತು ಸಮಾಧಾನವನ್ನು ಕಲಿಸುತ್ತಿದ್ದಾರೆ

2. ಯಾರಾದರೂ ನಿಮ್ಮನ್ನು ಸಿಟ್ಟಿಗೇಳಿಸುತ್ತಿದ್ದರೆ, ಅವರು ನಿಮಗೆ ಕ್ಷಮೆ ಮತ್ತು ಕಾರುಣ್ಯವನ್ನು ಕಲಿಸುತ್ತಿದ್ದಾರೆ.

3. ಯಾರಾದರೂ ನಿಮ್ಮನ್ನು ದೂರ ಮಾಡಿದ್ದರೆ, ಅವರು ನಿಮಗೆ ನಿಮ್ಮ ಕಾಲ ಮೇಲೆ ನಿಲ್ಲುವುದನ್ನು ಹೇಳಿಕೊಡುತ್ತಿದ್ದಾರೆ.

4. ನೀವು ಏನನ್ನಾದರೂ ದ್ವೇಷಿಸುತ್ತಿದ್ದರೆ, ಅದು ನಿಮಗೆ ಬೇಷರತ್ತಾದ ಪ್ರೀತಿಯನ್ನು ಹೇಳಿಕೊಡುತ್ತಿದೆ.

5. ನೀವು ಯಾವುದರ ಕುರಿತಾದರೂ ಹೆದರಿಕೆ ಇಟ್ಟುಕೊಂಡಿದ್ದರೆ, ಅದು ನಿಮಗೆ ಅಂಜಿಕೆಯನ್ನು ಎದುರಿಸುವ ಧೈರ್ಯವನ್ನು ಕಲಿಸಿಕೊಡುತ್ತಿದೆ

6. ಯಾವುದನ್ನಾದರೂ ನಿಯಂತ್ರಿಸುವುದು ನಿಮಗೆ ಸಾಧ್ಯವಾಗುತ್ತಿಲ್ಲವಾದರೆ, ಅದು ನಿಮಗೆ ಅನಾಸಕ್ತಿಯನ್ನು (Let go) ಹೇಳಿಕೊಡುತ್ತಿದೆ.

7. ಯಾರಾದರೂ ನಿಮಗೆ NO ಹೇಳುತ್ತಿದ್ದಾರಾದರೆ, ಅವರು ನಿಮಗೆ ಸ್ವತಂತ್ರವಾಗಿರುವುದನ್ನ ಕಲಿಸುತ್ತಿದ್ದಾರೆ.

8. ನೀವು ಯಾವುದಾದರೂ ಸಮಸ್ಯೆಯನ್ನು ಎದುರಿಸುತ್ತಿದ್ದೀರಾದರೆ, ಅದು ನಿಮಗೆ ಪರಿಹಾರ ಹೇಗೆ ಕಂಡುಕೊಳ್ಳುವುದು ಎನ್ನುವುದನ್ನ ತೋರಿಸಿಕೊಡುತ್ತಿದೆ.

9. ಯಾರಾದರೂ ನಿಮ್ಮ ಮೇಲೆ ಆಕ್ರಮಣ ಮಾಡುತ್ತಿದ್ದಾರಾದರೆ, ಅವರು ನಿಮಗೆ ನಿಮ್ಮನ್ನು ರಕ್ಷಣೆ ಮಾಡಿಕೊಳ್ಳುವುದನ್ನ ಹೇಳಿಕೊಡುತ್ತಿದ್ದಾರೆ.

10. ಯಾರಾದರೂ ನಿಮ್ಮನ್ನು ಕೀಳಾಗಿ ನೋಡುತ್ತಿದ್ದಾರಾದರೆ, ಅವರು ನಿಮಗೆ ತಲೆ ಎತ್ತಿ ನಿಲ್ಲುವುದನ್ನ ಹೇಳಿಕೊಡುತ್ತಿದ್ದಾರೆ

ಆದ್ದರಿಂದ, ವೈರ ಭಾವ ಬೇಡ, ದ್ವೇಷ ಬೇಡ… ಅವರಿಗೆ ನೀವು ಕೃತಜ್ಞರಾಗಿರಿ ಮತ್ತು ಸವಾಲುಗಳನ್ನು ಮೀರಿ ಬೆಳೆಯಿರಿ, ಮುನ್ನಡೆಯಿರಿ.