ಸನಾತನ ಧರ್ಮ ಮಸಕಾಗುತ್ತಿದ್ದ ಸಂಧಿಕಾಲದಲ್ಲಿ ತಮಿಳುನಾಡಿನಲ್ಲಿ ಭಕ್ತಿಯ ಆವೇಶವನ್ನು ಹುಟ್ಟಿಸಿ ಶ್ರೀವೈಷ್ಣವ ಮತವನ್ನು ಪ್ರಚಾರ ಮಾಡಿದವರು ಆಳ್ವಾರರು.
ಆಳ್ವಾರರು ಎಂದರೆ ಭಕ್ತಿ ಸಾಗರದಲ್ಲಿ ಮುಳುಗುವವರು ಎಂದರ್ಥ. ಸುಮಾರು ಏಳನೆಯ ಶತಮಾನದಲ್ಲಿ ಕಾಣಿಸಿಕೊಂಡ ಪೊಯ್‌ಗೈ ಆಳ್ವಾರರು, ಭೂತತ್ತಾಳ್ವಾರರು ಮತ್ತು ಪೇಯ್ ಆಳ್ವಾರರು ಮೊದಲ ಆಳ್ವಾರರೆಂದೇ ಪ್ರಸಿದ್ಧರು.
ಪೊಯ್‌ಗೈ ಆಳ್ವಾರರು ಶ್ರೀವಿಷ್ಣುವಿನ ಪಾಂಚಜನ್ಯ ಶಂಖದ ಅಂಶದವರು, ಭೂತತ್ತಾಳ್ವರರು ವಿಷ್ಣುವಿನ ಕೌಮೋದಕೀ ಗದೆಯ ಅಂಶದಿಂದ ಬಂದವರು ಹಾಗೂ ಪೇಯ್ ಆಳ್ವಾರರು ವಿಷ್ಣುವಿನ ಖಡ್ಗವಾದ ನಂದಕಿಯ ಅಂಶದಿಂದ ಬಂದವರು ಎಂಬ ನಂಬಿಕೆ. ಮೂವರೂ ಆಳ್ವಾರರು ಭಗವಂತನ ಹಿರಿಮೆಯ ಬಗ್ಗೆ ಸುಂದರವಾದ ಕೀರ್ತನೆಗಳನ್ನು ಬರೆದು ಹಾಡಿ ಊರಿಂದ ಊರಿಗೆ ಸಂಚರಿಸಿ ಭಕ್ತಿ ಪ್ರಸಾರ ಮಾಡುತ್ತಿದ್ದರು.
ಮೂವರೂ ಒಂದೇ ಸಮಯದಲ್ಲಿ ಬದುಕಿದ್ದರೂ ಒಬ್ಬರನ್ನೊಬ್ಬರು ಭೆಟ್ಟಿಯಾಗಿರಲಿಲ್ಲ, ಒಬ್ಬರಿಗೆ ಇನ್ನೊಬ್ಬರ ಪರಿಚಯವೂ ಇರಲಿಲ್ಲ. ಒಂದು ಬಾರಿ ಭಗವಂತನಿಗೂ ಈ ಮೂವರೂ ಭಕ್ತ ಶಿರೋಮಣಿಗಳಿಂದ ಏಕಕಾಲಕ್ಕೆ ತನ್ನ ಗುಣಗಾನ ಮಾಡಿಸಿಕೊಳ್ಳಬೇಕು ಎನ್ನಿಸಿತೋ ಏನೋ. ಮೂವರೂ ಆಳ್ವಾರರು ಒಂದೇ ದಿನ ಬೇರೆ ಬೇರೆ ಸಮಯದಲ್ಲಿ ತಿರುಕ್ಕೋವಿಲೂರಿಗೆ ಬರುತ್ತಾರೆ.
ಅಂದು ಭಾರಿ ಮಳೆ. ಮೊದಲು ಬಂದ ಪೊಯ್‌ಗೈ ಆಳ್ವಾರರು ಮಳೆಯಿಂದ ಪಾರಾಗಲು ದೇವಸ್ಥಾನದ ಹತ್ತಿರವೇ ಇದ್ದ ಮನೆಯ ಜಗುಲಿಯ ಮೇಲೆ ಬಂದು ಕೂಡ್ರುತ್ತಾರೆ. ನಂತರ ಆಯಾಸದಿಂದ ಅಲ್ಲಿಯೇ ಮಲಗಿಕೊಳ್ಳುತ್ತಾರೆ. ಆಗ ಅಲ್ಲಿಗೆ ಭೂತತ್ತಾಳ್ವಾರರು ಆಶ್ರಯಕ್ಕೆ ಬಂದು ಮಲಗಿದ್ದ ಪೊಯ್‌ಗೈ ಆಳ್ವಾರರನ್ನು ಎಬ್ಬಿಸಿ ತಮಗೂ ಸ್ವಲ್ಪ ಅವಕಾಶ ದೊರೆತೀತೇ ಎಂದು ಕೇಳುತ್ತಾರೆ.
ತಕ್ಷಣವೇ ಪೊಯ್‌ಗೈಯವರು ಎದ್ದು ಕುಳಿತು ಒಬ್ಬರು ಮಲಗುವ ಜಾಗದಲ್ಲಿ ಇಬ್ಬರು ಕುಳಿತುಕೊಳ್ಳಬಹುದು ಎಂದು ತಾವೂ ಎದ್ದು ಭೂತತ್ತಾಳ್ವಾರರನ್ನು ಕೂಡ್ರಿಸಿಕೊಳ್ಳುತ್ತಾರೆ. ಪರಸ್ಪರ ಪರಿಚಯಿಸಿಕೊಂಡು ಸಂತೋಷಪಡುತ್ತಾರೆ. ಇಬ್ಬರೂ ಸೇರಿ ಭಗವಂತನ ಗುಣಗಾನ ಮಾಡತೊಡಗುತ್ತಾರೆ.
ಮಳೆ ನಿಲ್ಲುವುದಿಲ್ಲ, ಇನ್ನೂ ಧಾರಾಕಾರವಾಗಿಯೇ ಸುರಿಯುತ್ತಿದೆ. ಆ ಹೊತ್ತಿಗೆ ಪೇಯ್ ಆಳ್ವಾರರೂ ಅದೇ ಸ್ಥಳಕ್ಕೆ ಬಂದು ಇಬ್ಬರನ್ನು ನೋಡಿ ತನಗೂ ಸ್ವಲ್ಪ ಸ್ಥಳ ದೊರೆತೀತೇ ಎಂದು ಕೇಳುತ್ತಾರೆ. ಆಗ ಮೊದಲಿಗೆ ಜೊತೆಯಾಗಿದ್ದ ಇಬ್ಬರೂ ಏಕಕಾಲದಲ್ಲಿ `ಇಬ್ಬರು ಕುಳಿತುಕೊಳ್ಳಬಹುದಾದ ಜಾಗದಲ್ಲಿ ಮೂವರು ನಿಲ್ಲಬಹುದು` ಎಂದು ನಿಂತುಕೊಳ್ಳುತ್ತಾರೆ.
ಪೇಯ್ ಆಳ್ವಾರರೂ ಅವರೊಂದಿಗೇ ನಿಂತುಕೊಂಡು ದೇವರ ಗುಣಗಾನ ಮಾಡತೊಡಗಿದರು. ಆಗ ಯಾರೋ ಅವರನ್ನೆಲ್ಲ ಒತ್ತಿ ಹಿಡಿದಂತಾಯಿತು. ನಂತರ ಅತ್ಯಂತ ಪ್ರಕಾಶಮಾನವಾದ ಬೆಳಕು ಹೊಳೆದು ಅಲ್ಲಿ ಶಂಖ, ಚಕ್ರ, ಗದಾ, ಪದ್ಮಗಳಿಂದ ಅಲಂಕೃತನಾದ ಮಹಾವಿಷ್ಣು ಅವತರಿಸಿ ಅವರಿಗೆ ಆಶೀರ್ವದಿಸಿದನಂತೆ.
ಆನಂತರ ಮೂವರೂ ಆಳ್ವಾರರು ಜೊತೆಯಾಗಿಯೇ ದೇಶದಾದ್ಯಂತ ದೇವಾಲಯಗಳನ್ನು ಸಂದರ್ಶಿಸುತ್ತ ಭಕ್ತಿಯ ಪೂರವನ್ನೇ ಹರಿಸಿದರು. ತಿರುಪತಿಗೆ ಬಂದಾಗ ಅವರಿಗೆ ಇಡೀ ಪರ್ವತವೇ ಭಗವಂತನ ದೇವಾಲಯದಂತೆ ಕಂಡುಬಂದಿತು. ಇಂಥ ಪವಿತ್ರವಾದ ಬೆಟ್ಟವನ್ನು ಕಾಲಿನಿಂದ ತುಳಿಯುವುದು ಸರಿಯಲ್ಲ ಎಂದು ಹಿಂದಿರುಗಿದಾಗ ಸಾಕ್ಷಾತ್ ವೆಂಕಟೇಶ್ವರನೇ ಕೆಳಗಿಳಿದು ಬಂದು ದರ್ಶನಕೊಟ್ಟನಂತೆ. ಆ ಸ್ಥಳವನ್ನೂ ಇಂದಿಗೂ ಆಳ್ವಾರ್ ತೀರ್ಥವೆಂದೇ ಕರೆಯುತ್ತಾರೆ.
ಮೂವರೂ ಆಳ್ವಾರರು ಭಕ್ತಿಯ ಸಾಗರದಲ್ಲಿ ಮಿಂದವರು, ಜ್ಞಾನದ ತವನಿಧಿಯಾಗಿದ್ದವರು. ಅದಲ್ಲದೇ ವಿನಯವನ್ನು ಸದಾಕಾಲ ನಡೆದು ತೋರಿದವರು. ಎಲ್ಲಿ ಭಕ್ತಿ, ಜ್ಞಾನ ಮತ್ತು ವಿನಯದ ಸಂಗಮವಿದೆಯೋ ಅದೇ ಭಗವಂತನ ಆವಾಸ ಸ್ಥಾನ ಎಂಬುದು ಈ ಮೂವರು ಆಳ್ವಾರರ ಜೀವನದ ಸಂದೇಶ ನಮಗೆ.