ಉತ್ತರ ಭಾರತದಲ್ಲಿ ಕನ್ಯಾಕುಬ್ಜ ಹಿಂದೊಮ್ಮೆ ಇಂದಿಗಿಂತಲೂ ಶಿಕ್ಷಣ, ಸಂಸ್ಕøತಿಯ ವಿಚಾರದಲ್ಲಿ ವಿಖ್ಯಾತವೆನಿಸಿತ್ತು. ಅಲ್ಲೊಬ್ಬ ಬ್ರಾಹ್ಮಣ. ತುಂಬಾ ಜ್ಞಾನಿ. ವೇದಶಾಸ್ತ್ರ ವಿಚಾರದಲ್ಲಿ ಪರಿಣತ. ಬ್ರಾಹ್ಮಣ ಧರ್ಮಕ್ಕೆ ಒಂದಿಷ್ಟೂ ಲೋಪ ಬಾರದ ರೀತಿಯಲ್ಲಿ ಆಚರಿಸುತ್ತಾ, ತನ್ನ ಹೆಂಡತಿ ಮಕ್ಕಳೊಂದಿಗೆ ಕಾಲಹರಣ ಮಾಡುತ್ತಿದ್ದ. ಇವನ ಹೆಸರೇ ಅಜಾಮಿಳ.
ಒಂದು ಬಾರಿ ದರ್ಭೆ ಹುಲ್ಲುಗಳನ್ನು ತರಲು ಕಾಡಿಗೆ ಹೋದ. ಅಲ್ಲೊಂದು ಬೇಟೆಗಾರರ ತಂಡ. ಅವರಲ್ಲಿ ಒಬ್ಬ ಬೇಟೆಗಾತಿ, ತುಂಬಾ ಸುಂದರ ಸ್ವರೂಪಿಣಿಯಂತೆ ಈ ಅಜಾಮಿಳನಿಗೆ ಕಂಡುಬಂದಳು. ಅವಳ ದೇಹ-ಸೌಂದರ್ಯವನ್ನುಕಂಡ ಅಜಾಮಿಳ ಮಾರುಹೋದ, ಮೋಹಗೊಂಡ, ಅವಳೊಂದಿಗೇ ಕಾಡಿನಲ್ಲಿ ವಾಸಿಸತೊಡಗಿದ. ತನ್ನ ಹೆಂಡತಿ ಮಕ್ಕಳ ನೆನಪೇ ಈಗ ಇವನಿಗೆ ಇಲ್ಲದಂತಾಯಿತು. ಬ್ರಾಹ್ಮಣ ಧರ್ಮವೇ ಮರೆತುಹೋಯಿತು. ಕಾಮಾಂಧನಾಗಿ ಅವಳೊಂದಿಗೆ ಜೀವಿಸತೊಡಗಿದ. ಮಾಂಸಾಹಾರ, ಮದ್ಯಪಾನ ಇವನ ಅನುದಿನದ ಆಹಾರ-ಪಾನೀಯಗಳಾದುವು.
ಈ ಬೇಟೆಗಾತಿಯು ಅಜಾಮಿಳನ ಕಾಮುಕತೆಯ ಸಂಪರ್ಕದಲ್ಲಿ ಮುಳುಗಿ, ಹತ್ತು ಗಂಡು ಮಕ್ಕಳಿಗೆ ಜನ್ಮ ನೀಡಿದಳು. ಇವರಲ್ಲಿ ಕಡೆಯವನೇ ನಾರಾಯಣ ಎಂಬ ಹುಡುಗ. ಅಜಾಮಿಳನಿಗೆ ಈ ಹುಡುಗನ ಬಗ್ಗೆ ತುಂಬಾ ಪ್ರೀತಿ, ವಾತ್ಸಲ್ಯ. ಸದಾ ಅವನನ್ನು ತನ್ನ ಬಳಿಯೇ ಇರಿಸಿಕೊಂಡಿರುತ್ತಿದ್ದ. ಅವನ ಆಟೋಟಗಳನ್ನು ಕಂಡು ನಲಿಯುತ್ತಾ, ಮೈ ಮರೆಯುತ್ತಿದ್ದ. ಹೀಗೆಯೇ ದಿನಗಳುರುಳಿದುವು. ಅಜಾಮಿಳನಿಗೆ ಮುಪ್ಪು ಅಡರಿತು. ದೇಹಶಕ್ತಿ ಕುಂದಿತು. ಆಗಲೂ ಅವನಿಗೆ ದೇವರ ಧ್ಯಾನದ ಬಗ್ಗೆ ಗಮನವೇ ಬರಲಿಲ್ಲ. ಅವನ ಸಕಲ ಸಂಪತ್ತೂ ಈ ಕಿರಿಯ ಪೋರ, ನಾರಾಯಣನೇ ಆಗಿಹೋಗಿದ್ದ. ಸಾಯುವ ಸಮಯ ಬಂತು. ಮರಣಶಯ್ಯೆಯಲ್ಲಿ ತೂಗಾಡುತ್ತಿದ್ದಾಗ, ಅವನ ಕಣ್ಣು ಮುಂದೆ ಯಮದೂತರು ಕಾಣಿಸಿಕೊಂಡರು. ಅವನಿಗೆ ಮರಣದ ಭೀತಿ ಇರಲಿಲ್ಲ. ತನ್ನ ಪ್ರೀತಿಯ ಮುದ್ದು ಮಗನಾದ ನಾರಾಯಣನ ಬಗ್ಗೆ ಚಿಂತೆ ಕಾಡತೊಡಗಿತು. “ನಾನು ಸತ್ತ ಬಳಿಕ, ಏನೂ ಅರಿಯದ ಈ ಕಂದನಿಗೆ ದಿಕ್ಕು ಯಾರು? ಇವನ ಮುಂದಿನ ಗತಿ ಏನು?” ಎಂದು ಹಲುಬುತ್ತಾ, “ನಾರಾಯಣಾ” ಎಂದು ಅವನನ್ನು ಕರೆಯತೊಡಗಿದ.
ಯಮದೂತರು ತಮ್ಮ ಕರ್ತವ್ಯ ಧರ್ಮದಂತೆ, ಅವನ ಕೊರಳಿಗೆ ಪಾಶ ಬಿಗಿದರು. ಇನ್ನೇನು ಅವನನ್ನು ಎಳೆದುಕೊಂಡು ತಮ್ಮ ಲೋಕಕ್ಕೆ ಹೋಗಬೇಕು! ಅನ್ನುವಷ್ಟರಲ್ಲಿ ವಿಷ್ಣುದೂತರೂ ಸಹ ದೈವಿಕ ವಿಮಾನದಲ್ಲಿ ಅದೇ ಜಾಗದಲ್ಲಿ ಬಂದಿಳಿದರು. ಯಮದೂತರನ್ನು ತಡೆದು, ಹೇಳಿದರು :
“ಅಜಾಮಿಳ ವಿಷ್ಣು ಭಗವಂತನ ಕೃಪೆಗೆ ಪಾತ್ರನಾಗಿದ್ದಾನೆ. ಅವನನ್ನು ಬಿಟ್ಟುಬಿಡಿ. ನಾವು ಅವನನ್ನು ವಿಷ್ಣುಲೋಕಕ್ಕೆ ಕರೆದೊಯ್ಯಲು ಬಂದಿದ್ದೇವೆ.” ಯಮದೂತರು ಆಶ್ಚರ್ಯದಿಂದ ಕೇಳಿದರು:
“ಇದೆಂತಹ ಸೋಜಿಗದ ಸಂಗತಿ! ಅಜಾಮಿಳ ಧರ್ಮಭ್ರಷ್ಟ. ಬ್ರಾಹ್ಮಣ ಜನ್ಮದಲ್ಲಿ ಹುಟ್ಟಿದ್ದರೂ, ಮಾಡಬಾರದ ಅಧರ್ಮದ ಕಾರ್ಯಗಳೆಲ್ಲವನ್ನೂ ಮಾಡಿದ್ದಾನೆ. ಅವನಿಗೆ ನರಕಸುಖವೇ ಸಲ್ಲುವಂತಹುದು.” ವಿಷ್ಣುದೂತರೂ ವಾದಿಸಿದರು:
“ಅವನೆಷ್ಟೇ ಅಧರ್ಮಿ ಎನಿಸಿದ್ದರೂ, ಕಾಮುಕತೆಯಲ್ಲಿ ಲೋಲುಪನೆನಿಸಿದ್ದರೂ, ಸಾಯುವ ಸಮಯದಲ್ಲಿ ಶ್ರೀಮನ್ನಾರಾಯಣನ ಸ್ಮರಣೆ ಮಾಡಿದ್ದಾನೆ. ದೇವರ ನಾಮಸ್ಮರಣೆ ಅವನನ್ನು ಸಕಲ ಪಾಪಗಳಿಂದಲೂ ಮುಕ್ತಗೊಳಿಸಿದೆ. ಆದ್ದರಿಂದ ಅವನ ಕೊರಳಿಗೆ ನೀವು ಹಾಕಿರುವ ಪಾಶವನ್ನು ಹಿಂದೆಗೆದುಕೊಳ್ಳಿ.” ಯಮದೂತರಿಗೆ ವಿಷ್ಣುದೂತರ ಮಾತು ಸಮಂಜಸ ಎನಿಸಲಿಲ್ಲ. ಈರ್ವರಲ್ಲೂ ವಾದ-ವಿವಾದಗಳು ತುಂಬಾ ಕಾಲ ನಡೆದುವು. ತಮ್ಮ ವಾದವನ್ನು ಸಮರ್ಥಿಸುತ್ತಾ, ಯಮದೂತರು ಹೇಳಿದರು: “ಅವನು ತನ್ನ ಜೀವನದ ಕೊನೆ ಘಳಿಗೆಯಲ್ಲಿ ಸ್ಮರಣೆ ಮಾಡಿಕೊಂಡದ್ದು, ಶ್ರೀಮನ್ನಾರಾಯಣನನ್ನಲ್ಲ. ತನ್ನ ಕಿರಿಯ ಮಗನಾದ ನಾರಾಯಣನನ್ನು. ಅವನೊಬ್ಬ ಕಾಮುಕ, ಕಡುಪಾಪಿ. ಅವನಿಗೆ ವೈಕುಂಠವಾಸವಾಗಲಿ, ಸ್ವರ್ಗಸುಖವಾಗಲಿ ಸಲ್ಲ. ನೀವು ವಿಷ್ಣುಭಕ್ತರಾಗಿದ್ದೂ, ಹೀಗೆಲ್ಲಾ ವಾದಿಸುವುದು ಸರಿಯೇ?” ವಿಷ್ಣುದೂತರು ಸಮಾಧಾನದಿಂದಲೇ ಹೇಳಿದರು:
“ಅವನೆಂತಹ ಕಡುಪಾಪಿ ಆದರೂ, ಕಾಮಾಂಧನೆನಿಸಿದ್ದರೂ, ಸಾಯುವ ಸಮಯದಲ್ಲಿ ಅವನ ಬಾಯಿಂದ ದೇವರ ನಾಮಸ್ಮರಣೆ ಹೊರಬಂದಿದೆ. ದೇವರ ನಾಮದ ಮಹಿಮೆ ಅಪಾರ. ಅದು ಪಾಪಿ ಆದವನ ಪಾಪ ದೋಷಗಳೆಲ್ಲವನ್ನೂ ನಿವಾರಣೆ ಮಾಡುತ್ತದೆ. ಆದ್ದರಿಂದ ನಮ್ಮ ವಾದವೇ ಸರಿ. ಬೇಕಾದರೆ ನಿಮ್ಮ ಒಡೆಯನಾದ ಯಮಧರ್ಮರಾಜನ ಬಳಿಗೇ ಹೋಗಿ, ಈ ಧರ್ಮ ರಹಸ್ಯದ ಬಗ್ಗೆ ವಿಚಾರಿಸಿ” ಅನ್ನುತ್ತಾ ಅಜಾಮಿಳನ ಕೊರಳಿಗೆ ಬಿಗಿದಿದ್ದ ಪಾಶವನ್ನು ಸಡಿಲಿಸಿ, ಹೊರತೆಗೆದರು. ಅವನನ್ನು ದೈವಿಕ ವಿಮಾನದಲ್ಲಿ ಕುಳ್ಳಿರಿಸಿಕೊಂಡು, ವಿಷ್ಣು ಲೋಕದತ್ತ ನಡೆದರು. ಇವರೀರ್ವರ ವಾದ-ವಿವಾದವನ್ನು ಕೇಳುತ್ತಿದ್ದ ಅಜಾಮಿಳನಿಗೆ ಈಗ ಜ್ಞಾನೋದಯವಾಯಿತು.
ತಾನು ಗೈದಿರುವ ಪಾಪಕರ್ಮಗಳ ಬಗ್ಗೆ ತನಗೇ ನಾಚಿಕೆ ಉಂಟಾಯಿತು. ದೈವಭಕ್ತಿಯ ಬಗ್ಗೆ ಹೃದಯಾಂತರಾಳದಿಂದ ಹೊರಚಿಮ್ಮಿತು. ಭಕ್ತಿಯ ಪರಾಕಾಷ್ಠತೆಯಲ್ಲಿ ಪರಮಾತ್ಮನನ್ನು ಪರಿತಾಪದೊಂದಿಗೆ ಭಜಿಸತೊಡಗಿದ್ದ. ಪರಿಶುದ್ಧ ವಿಷ್ಣುಭಕ್ತನೇ ಆಗಿಹೋದ. ಇತ್ತ ಯಮದೂತರೂ ಧರ್ಮರಾಜನೆನಿಸಿದ್ದ ತಮ್ಮ ಒಡೆಯ ಯಮನ ಬಳಿಗೆ ಬಂದರು. ಕೈ ಜೋಡಿಸಿಕೊಂಡು ವಿಧೇಯತೆಯೊಂದಿಗೆ ನಡೆದುದೆಲ್ಲವನ್ನೂ ಆಮೂಲಾಗ್ರವಾಗಿ ತಿಳಿಸಿದರು. ಯಮಧರ್ಮರಾಜ ತನ್ನ ದೂತರ ಅವಿವೇಕವನ್ನು ಕಂಡು, ನಸುನಗುತ್ತಾ ಹೇಳಿದ:
“ದೂತರೇ, ವಿಷ್ಣುದೂತರ ಮಾತು ಸತ್ಯ. ಹರಿನಾಮದ ಬಲ ಅಮೋಘ. ಅದು ಭವರೋಗ ನಿವಾರಣೆಗೆ ದಿವ್ಯೌಷಧಿ. ಅಂತಹವರಿಗೆ ಯಾವುದೇ ಪಾಪದ ಸೋಂಕೂ ಅಂಟದು. ಇನ್ನು ಮುಂದೆ ಹರಿಭಕ್ತರು ಹಾಗೂ ವಿಷ್ಣುದೂತರೊಂದಿಗೆ ಹಾಗೆಲ್ಲ ಅವಿವೇಕದ ವಾದ ಮಾಡಲು ಹೋಗಬೇಡಿ” ಎಂದು ಬುದ್ಧಿಮಾತು ಹೇಳಿದ.