ಭಗವದ್ರಾಮಾನುಜರ ದಿವ್ಯ ಚರಿತೆಯ ಕೆಲವು ಮುಖ್ಯ ಪ್ರಸಂಗಗಳು
ಶ್ರೀ ಯಾಮುನ ಮುನಯೇ ನಮ
ಶ್ರೀಮತೇ ರಾಮಾನುಜಾಯ ನಮ

ಯಸ್ಯ ಪ್ರಸಾದ ಕಲಯಾ ಬಧಿರಃ ಶೃಣೋತಿ,
ಪಂಗುಃ ಪ್ರಧಾವತಿ ಜವೇನ ಚ ವಕ್ತಿ ಮೂಕಃ,
ಅಂಧಃ ಪ್ರಪಶ್ಯತಿ,
ಸುತಂ ಲಭತೇ ಚ ವಂಧ್ಯಾ,
ತಂ ದೇವದೇವ ವರದಂ ಶರಣಂ ಗತೋ$ಸ್ಮಿ.
ಭಾವಾನುವಾದ:

ಹೇ ವರದ!!!

ನೀನೊಲಿದು ಉಲಿಯೆ ಕಿವುಡನೂ ಕೇಳುವನು,
ಕಾಲಿಲ್ಲದವ ಧಾವಿಸುವ ವೇಗದಿ,
ಮೂಕ ಮಾತಾಡುವನು,
ನೀ ನಿನ್ನ ಕಣ್ತೆರೆಯೆ, ಬಂಜೆ ಹಡೆವಳು ಮಗನ,
ದೇವದೇವರಿಗೆ ವರ ಕೊಡುವ ಹೇ ವರದ,
ನಿನ್ನ ಮೊರೆ ಹೊಕ್ಕಿರುವೆ, ಇನ್ನಾರೂ ಬೇಡೆನಗೆ,
ವರ ಬೇಡದಂತೆನ್ನ ಪೊರೆ,
ಕಾಯೋ ಹೇ ತಂದೆ.

ಇದು ಈ ಶ್ಲೋಕದ ಮೇಲ್ನೋಟದ ಅನುವಾದ.

ಇದನ್ನು ಆಳವಂದಾರರೆನಿಸಿದ ಯಾಮುನಾಚಾರ್ಯರು ರಚಿಸಿದ ಸಂದರ್ಭ, ಉದ್ದೇಶವನ್ನು ಆಳವಾಗಿ ನೋಡಿದಾಗ ಇನ್ನಷ್ಟು ಅರ್ಥಗಳು ಸ್ಫುರಿಸುತ್ತವೆಂದು ವಿದ್ವಾಂಸರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ಬನ್ನಿ ನೋಡೋಣ.

ರಾಮಾನುಜರ ಬಗ್ಗೆ ಬಹಳವಾಗಿ ಕೇಳಿ ತಿಳಿದ ಯಾಮುನರು ಇವರೇ ತಮ್ಮ ಉತ್ತರಾಧಿಕಾರಿ ಎಂಬ ನಿರ್ಧಾರಕ್ಕೆ ಬಂದಿದ್ದರು. ಒಮ್ಮೆ ದೂರದಿಂದ ರಾಮನುಜರನ್ನು ನೋಡಿಯೂ ಇದ್ದರು. ಅವರ ಆಕರ್ಷಕ ಭವ್ಯ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದರು. ಆದರೆ ಈ ಇಬ್ಬರೂ ಮಹಾನುಭಾವರು ಮುಖತಃ ಭೇಟಿಯಾಗಲೇ ಇಲ್ಲ ಎಂಬುದು ಒಂದು ದುರ್ದೈವದ ಸಂಗತಿ.

ರಾಮಾನುಜರು ಯಾದವ ಪ್ರಕಾಶರ ಬಳಿ ವ್ಯಾಸಂಗ ಮಾಡುತ್ತಿದ್ದುದೂ ಯಾಮುನಾಚಾರ್ಯರಿಗೆ ತಿಳಿದಿತ್ತು. ಅವರಿಬ್ಬರಲ್ಲಿ ಆಗಾಗ ವೇದಾಂತದ ವಿಷಯಗಳಲ್ಲಿ ಚರ್ಚೆ ಆಗಿ ರಾಮಾನುಜರಿಗೆ ಮನಃಕ್ಲೇಶ ಉಂಟಾದುದೂ ತಿಳಿದಿತ್ತು. ಇಂಥಾ ಒಂದು ಸಂನ್ನಿವೇಶದಲ್ಲಿ ಅವರ ಬಾಯಿಂದ ಅನಾಯಾಸವಾಗಿ ಹೊರಟ ಒಂದು ಸ್ತುತಿ ಈ ಶ್ಲೋಕ. ಕಂಚೀ ವರದನನ್ನು ಕುರಿತು ಮಾಡಿದ ಪ್ರಾರ್ಥನೆ.

"ಹೇ ವರದ! ನಿನ್ನ ದಯೆ ಇದ್ದರೆ, ಕಿವುಡನೂ ಕೇಳುವನು. ಆದರೆ ರಾಮಾನುಜರು ಕೇಳಬಾರದ ವಿಷಯಗಳನ್ನು ಯಾದವ ಪ್ರಕಾಶರಿಂದ ಮತ್ತೆ ಮತ್ತೆ ಕೇಳದಂತಾಗಲಿ. ಅಲ್ಲದೇ ಶ್ರೀವೈಷ್ಣವ ಸಂಪ್ರದಾಯದ ಸೂಕ್ಷ್ಮ ಅರ್ಥಗಳನ್ನೇ ಹೆಚ್ಚು ಹೆಚ್ಚಾಗಿ ಕೇಳುವಂತಾಗಲಿ.

ನಿನ್ನ ದಯೆಯಿಂದ ಕುಂಟನೂ ಓಡುವನು. ಹಾಗೆಯೇ, ರಾಮಾನುಜರೂ ಈ ವಿಶಾಲ ಭಾರತದಲ್ಲೆಲ್ಲ ಸಂಚರಿಸಿ, ಶ್ರೀವೈಷ್ಣವ ಧರ್ಮವನ್ನು ಪಸರಿಸಲಿ.

ನಿನ್ನ ದಯೆಯಿದ್ದರೆ ಮೂಕನೂ ಮಾತಾಡುವನು. ಅಂತೆಯೇ, ರಾಮಾನುಜರೂ ಶ್ರೀವೈಷ್ಣವ ಸಂಪ್ರದಾಯದ ಗ್ರಂಥಗಳನ್ನು ಅಭ್ಯಸಿಸಿ, ಪಾಮರರಿಗೂ ತಿಳಿಯುವಂತೆ ಪ್ರವಚನಗಳನ್ನು ನೀಡುವಂತಾಗಲಿ.

ನಿನ್ನ ದಯೆಯಿದ್ದರೆ, ಸಾಮಾನ್ಯ ಕುರುಡನೂ ನೋಡಲು ಕಣ್ಣುಗಳನ್ನು ಪಡೆದು ಜಗವನ್ನೆಲ್ಲ ನೋಡುವಂತಾಗುವನು. ಆದರೆ ರಾಮಾನುಜರು ನಿನ್ನ ದಯೆಯಿಂದ ಶ್ರೀವೈಷ್ಣವ ಸಂಪ್ರದಾಯದ, ವಿಶಿಷ್ಟಾದ್ವೈತ ದರ್ಶನವನ್ನು ಕಾಣುವಂತಾಗಲಿ.

ನಿನ್ನ ದಯೆಯಿದ್ದರೆ, ಮಕ್ಕಳಿಲ್ಲದ ಬಂಜೆಯೂ ಕೂಡ ಮಕ್ಕಳನ್ನು ಪಡೆದು ತಾಯಿ ಎನಿಸಿಕೊಳ್ಳುವಳು. ಅಂತೆಯೇ ರಾಮಾನುಜರೂ ನೂರಾರು, ಸಾವಿರಾರು ಶಿಷ್ಯರನ್ನು ಪಡೆದು ಅವರನ್ನೆಲ್ಲಾ ತಾಯಿಯಂತೆ ಪೋಷಿಸಲಿ. ಅವರಿಗೆ ರಕ್ಷೆಯಾಗಿರಲಿ.

ಹೇ ವರದ! ನಿನ್ನ ಅನುಗ್ರಹವೊಂದಿದ್ದರೆ ಇವೆಲ್ಲಾ ಖಂಡಿತ ಸಾಧ್ಯ. ಆದ್ದರಿಂದಲೇ ನಾನು ನಿನ್ನನ್ನೇ ಶರಣು ಹೊಕ್ಕಿದ್ದೇನೆ. ದಯಮಾಡಿ ರಾಮಾನುಜರನ್ನು ನನ್ನ ಕಡೆಗೆ ತಿರುಗುವಂತೆ ಮಾಡು. "

ಹೀಗೆಂದು ಆಳವಂದಾರರು ಶ್ರೀ ವರದರಾಜಸ್ವಾಮಿಯನ್ನು ಪ್ರಾರ್ಥಿಸುತ್ತಾರೆ.

ಹೀಗೆ ಪ್ರಾರ್ಥಿಸಿದ ಯಾಮುನಾಚಾರ್ಯರು ಮುಂದೆ ಸುಮ್ಮನೆ ಕುಳಿತುಕೊಳ್ಳಲಿಲ್ಲ. ರಾಮಾನುಜರು ಎಂದಾದರೂ ಯಾದವ ಪ್ರಕಾಶರನ್ನು ಬಿಟ್ಠು ತಮ್ಮೆಡೆಗೆ ಬರುವರೆಂದೇ ದೃಢವಾಗಿ ನಂಬಿದ್ದ ಅವರು ರಾಮಾನುಜರ ವಿದ್ಯಾಭ್ಯಾಸಕ್ಕೂ ಏರ್ಪಾಡು ಮಾಡಿದರು. ಪೆರಿಯ ನಂಬಿಗಳೆಂದೇ ಖ್ಯಾತರಾದ ಮಹಾಪೂರ್ಣರನ್ನೂ, ತಿರುಕ್ಕೋಷ್ಠಿಯೂರ್ ನಂಬಿಗಳೆಂಬ ಗೋಷ್ಠೀ ಪೂರ್ಣರನ್ನೂ, ಪೆರಿಯ ತಿರುಮಲೈ ನಂಬಿಗಳಾದ ಶ್ರೀಶೈಲಪೂರ್ಣರನ್ನೂ, ತಿರುಮಾಲೈಯಾಂಡಾನ್ ಎಂಬ ಮಾಲಾಧರರನ್ನೂ ತಿರುವರಂಗ ಪ್ಪೆರುಮಾಳ್ ಅರೈಯರ್ ಎಂಬ ಈ ಎಲ್ಲ ವಿದ್ವಾಂಸರನ್ನೂ ರಾಮಾನುಜರಿಗೆ ವಿದ್ಯಾಭ್ಯಾಸ ಮಾಡಿಸಲು ನೇಮಿಸಿದರು.

ಮುಂದೆ ರಾಮಾನುಜರು ಪೆರಿಯ ನಂಬಿಗಳಿಂದ ಪಂಚ ಸಂಸ್ಕಾರಗಳನ್ನು ಪಡೆದು ಅವರಿಂದ ಮಂತ್ರೋಪದೇಶವನ್ನು ಪಡೆದರು. ತಿರುಕ್ಕೋಷ್ಠಿಯೂರ್ ನಂಬಿಗಳಿಂದ ಅಷ್ಟಾಕ್ಷರ ಮಂತ್ರಾರ್ಥವನ್ನೂ, ದ್ವಯಮಂತ್ರ, ಚರಮಶ್ಲೋಕಗಳ ಅರ್ಥವನ್ನೂ ಆಳವಾಗಿ ಅಭ್ಯಾಸ ಮಾಡಿದರು. ಪೆರಿಯ ತಿರುಮಲೈ ನಂಬಿಗಳ ಬಳಿ ರಾಮಾಯಣ ಕಾಲಕ್ಷೇಪವನ್ನು ವಿಸ್ತಾರವಾಗಿ ಮಾಡಿದರು. ತಿರುಮಾಲೈಯಾಂಡಾನ್ ಎಂಬ ಆಚಾರ್ಯರಿಂದ ನಮ್ಮಾಳ್ವಾರರ ತಿರುವಾಯ್ಮೊಳಿಯನ್ನು ಬಹುಕಾಲ ಉಪದೇಶವಾಗಿ ಪಡೆದರು. ತಿರುವರಂಗ ಪ್ಪೆರುಮಾಳ್ ಅರೈಯರ್ ಅವರಿಂದ ತಿರುವಾಯ್ಮೊಳಿ ಪ್ರಬಂಧದ ನಿಗೂಢ ಸಂಪ್ರದಾಯಾರ್ಥಗಳನ್ನು ಅಭ್ಯಾಸ ಮಾಡಿದರು.

ರಾಮಾನುಜರೇ ಬ್ರಹ್ಮಸೂತ್ರಗಳಿಗೆ ಭಾಷ್ಯವನ್ನು ಬರೆಯಬೇಕೆಂದು ಯಾಮುನಾಚಾರ್ಯರು ಮನದಲ್ಲೇ ತೀವ್ರವಾದ ಹಂಬಲವನ್ನು ಬೆಳೆಸಿಕೊಂಡರು.
ಕೊನೆಗೂ ಅವರು ರಾಮಾನುಜರನ್ನು ನೋಡದೆಯೇ ಭಗವಂತನ ಪರಂಧಾಮಕ್ಕೆ ತೆರಳುವ ದಿನವೂ ಬಂದುಬಿಟ್ಟಿತು. ರಾಮಾನುಜರು ಪೆರಿಯ ನಂಬಿಗಳೊಡನೆ ಧಾವಿಸಿ ಬರುವ ವೇಳೆಗೆ, ಯಾಮುನಾಚಾರ್ಯರು ಭಗವಂತನ ಪಾದಗಳನ್ನು ಸೇರಿಯಾಗಿತ್ತು. ಆದರೆ ಅವರ ಬಲಗೈನ ಮೂರು ಬೆರಳುಗಳು ಮಾತ್ರ ಭದ್ರವಾಗಿ ಮಡಿಸಿದ್ದು, ಯಾರಿಂದಲೂ ಬಿಡಿಸಲಾಗಲಿಲ್ಲ. ರಾಮಾನುಜರು ಅವರ ಅಂತಿಮ ಅಪೂರ್ಣ ಆಸೆಗಳನ್ನು ಅಲ್ಲಿ ನೆರೆದಿದ್ದ ಶಿಷ್ಯರಿಂದ ಕೇಳಿ ತಿಳಿದು, ತಾನೇ ಆ ಆಸೆಗಳನ್ನು ಪೂರೈಸುವೆನೆಂದು ವಚನವಿತ್ತ ಮೇಲೆ ಆ ಮೂರೂ ಬೆರಳುಗಳು ನೇರವಾದವು.
ಆ ಆಸೆಗಳಾವುವೆಂದರೆ,

1. ಮಹರ್ಷಿ ವೇದವ್ಯಾಸರು ರಚಿಸಿದ ಬ್ರಹ್ಮಸೂತ್ರಗಳಿಗೆ ವಿಶಿಷ್ಟಾದ್ವೈತ ಸಿದ್ಧಾಂತಕ್ಕೆ ಅನುಗುಣವಾಗಿ ಭಾಷ್ಯ ಬರೆಯುವುದು.
ಇದನ್ನು ರಾಮಾನುಜರು ಸಮರ್ಪಕವಾಗಿ ಮುಗಿಸಿ, ಆ ಭಾಷ್ಯವನ್ನು ಕಾಶ್ಮೀರದಲ್ಲಿ ಸಾಕ್ಷಾತ್ ಸರಸ್ವತೀದೇವಿಯೇ ಶ್ರೀಭಾಷ್ಯವೆಂದು ಕರೆದು ಅನುಗ್ರಹಿಸಿದಳು.

2. ನಮ್ಮಾಳ್ವಾರರು ರಚಿಸಿದ ತಿರುವಾಯ್ಮೊಳಿ ಎಂಬ ದಿವ್ಯ ಪ್ರಬಂಧಕ್ಕೆ ವ್ಯಾಖ್ಯಾನವನ್ನು ರಚಿಸುವುದು.
ಈ ಕಾರ್ಯವನ್ನು ರಾಮಾನುಜರೇ ಸ್ವತಃ ಮಾಡಬಹುದಾಗಿತ್ತು. ಆದರೆ, ಅವರದು ದೊಡ್ಡ ಮನಸ್ಸು ಮತ್ತು ವಿಶಿಷ್ಟ ಚಿಂತನೆ. ನಮ್ಮಾಳ್ವಾರರ ತಿರುವಾಯ್ಮೊಳಿಯೋ ನಿತ್ಯ ನೂತನ. ಓದಿದಷ್ಟೂ ಹೊಸ ಹೊಸ ಅರ್ಥಗಳನ್ನು ಹೊಮ್ಮಿಸುತ್ತಲೇ ಇರುವ ಅಮೃತ ಸಾಗರ. ಒಂದು ವೇಳೆ ತಾನೇನಾದರೂ ಇದರ ವ್ಯಾಖ್ಯಾನವನ್ನು ರಚಿಸಿದರೆ, ತನ್ನದೇ ಜೀವಿತ ಕಾಲದಲ್ಲೋ ಅಥವಾ ನಂತರ ಬರುವ ಜ್ಞಾನೀ ಭಕ್ತರು ತಮಗೆ ಅದರಲ್ಲಿ ಹೊಸ ಹೊಸ ವಿಶೇಷಾರ್ಥಗಳು ಗೋಚರಿಸಿದರೂ, ರಾಮಾನುಜರ ಮೆಲಿನ ಭಕ್ತಿ, ಗೌರವಗಳಿಂದ ತಾವು ಮತ್ತೆ ವ್ಯಾಖ್ಯಾನ ಮಾಡುವುದನ್ನು ನಿಲ್ಲಿಸಿಬಿಡುವರೆನೋ ಎಂದೇ ಅವರು ಯೋಚಿಸಿದರು. ಹಾಗೆಂದು ಅವರು ಸುಮ್ಮನೆ ಇರಲಿಲ್ಲ. ಈ ಘನಕಾರ್ಯಕ್ಕೆ ಯೋಗ್ಯ ವಿದ್ವಾಂಸರನ್ನು ಹುಡುಕುತ್ತಲೇ ಇದ್ದರು. ಏತನ್ಮಧ್ಯೆ, ಅವರ ಸೋದರಮಾವ ಹಾಗೂ ಆಚಾರ್ಯರಾದ ಪೆರಿಯ ತಿರುಮಲೈ ನಂಬಿಗಳ ಸುಪುತ್ರರಾದ ತಿರುಕ್ಕುರುಹೈ ಪ್ಪಿರಾನ್ ಪಿಳ್ಳಾನ್ ಎಂಬವರು ತಮ್ಮ ವಿದ್ವತ್ತು, ವಿನಯಪೂರ್ವಕ ನಡತೆಯಿಂದ ರಾಮಾನುಜರ ಮನವನ್ನು ಸೂರೆಗೊಂಡಿದ್ದರು. ಅವರನ್ನು ರಾಮಾನುಜರು ತನ್ನ ಮಗನಂತೆಯೇ ಪ್ರೀತಿಸುತ್ತಿದ್ದರು. ಹಲವು ಸಂದರ್ಭಗಳಲ್ಲಿ ತಿರುವಾಯ್ಮೊಳಿಯಲ್ಲಿ ಪಿಳ್ಳಾನ್ ರವರಿಗಿದ್ದ ಆಳವಾದ ಪಾಂಡಿತ್ಯವನ್ನೂ ಆಚಾರ್ಯರು ಗಮನಿಸಿಯೂ ಇದ್ದರು. ಆದ್ದರಿಂದ ಪಿಳ್ಳಾನ್ ರವರನ್ನು ಕರೆದು, ತಿರುವಾಯ್ಮೊಳಿಗೆ ವ್ಯಾಖ್ಯಾನವನ್ನು ಬರೆಯುವಂತೆ ಆದೇಶಿಸಿದರು. ಶ್ರೀ ವಿಷ್ಣುಪುರಾಣದಲ್ಲಿ 6000 ಶ್ಲೋಕಗಳಿರುವಂತೆ, ಈ ವ್ಯಾಖ್ಯಾನವೂ 6000 ವಾಕ್ಯಗಳನ್ನೊಳಗೊಂಡಿರಬೇಕೆಂದೂ ಸೂಚಿಸಿದರು. ಅದೇ ಈಗ ನಾವೆಲ್ಲ ಕೇಳಿರುವ ಆರಾಯಿರಪ್ಪಡಿ ವ್ಯಾಖ್ಯಾನ. ಈ ಗ್ರಂಥವನ್ನು ತಾವೇ ಸ್ವತಃ ಪರಾಮರ್ಶಿಸಿ, *ಭಗವದ್ವಿಷಯಂ* ಎಂಬ ಹೆಸರನ್ನೂ ಅದಕ್ಕೆ ದಯಪಾಲಿಸಿದರು. ರಾಮಾನುಜರ ಆಶಯದಂತೆ ಇದರ ನಂತರವೂ ತಿರುವಾಯ್ಮೊಳಿಗೆ ಅನೇಕ ವ್ಯಾಖ್ಯಾನಗಳು ರಚಿತವಾಗಿವೆ.

3. ವ್ಯಾಸ ಹಾಗೂ ಪರಾಶರ ಮಹರ್ಷಿಗಳು ನಮ್ಮ ಸನಾತನ ಧರ್ಮ, ಸಂಸ್ಕೃತಿಗೆ ನೀಡಿರುವ ಕೊಡುಗೆಯನ್ನು ಸ್ಮರಿಸಿ ಅವರ ಹೆಸರುಗಳು ಅಜರಾಮರವಾಗಿರುವಂತೆ ಮಾಡುವುದು.
ರಾಮಾನುಜರು ತಮ್ಮ ಅತ್ಯಂತ ಪ್ರೀತಿಯ ಶಿಷ್ಯರಾದ ಕೂರತ್ತಾಳ್ವಾರರ ಮಕ್ಕಳಿಗೆ ವ್ಯಾಸ ಮತ್ತು ಪರಾಶರರೆಂದು ನಾಮಕರಣ ಮಾಡಿದರು. ಇವರಿಬ್ಬರೂ ಪ್ರಕಾಂಡ ಪಂಡಿತರೇ. ಪರಾಶರ ಭಟ್ಟರು ವಿಷ್ಣು ಸಹಸ್ರನಾಮಕ್ಕೆ ಭಗದ್ಗುಣದರ್ಪಣವೆಂಬ ಭಾಷ್ಯವನ್ನು ರಚಿಸಿದರು.

ಈ ರೀತಿಯಲ್ಲಿ, ಯಾಮುನಾಚಾರ್ಯರ ಮೂರೂ ಮಹದಾಸೆಗಳನ್ನು ರಾಮಾನುಜರು ಸಮರ್ಪಕವಾಗಿ ಈಡೇರಿಸಿದರು. ಅವರು ಬಾಯಿಬಿಟ್ಟು ಹೇಳದಿದ್ದ ಇನ್ನೂ ಅನೇಕ ಮಹತ್ಕಾರ್ಯಗಳನ್ನು ರಾಮಾನುಜರು ದಕ್ಷತೆಯಿಂದ ನೆರವೇರಿಸಿದರು. ಅವರು ಬರೀ ದರ್ಶನಕಾರರೋ, ಸಿದ್ಧಾಂತ ಪ್ರವರ್ತಕರೋ ಮಾತ್ರ ಆಗಿರದೇ, ಸಮರ್ಥ ಆಡಳಿತಗಾರರೂ ಆಗಿದ್ದರೆಂಬುದು ಅವರು ಶ್ರೀರಂಗದ ದೇವಸ್ಥಾನದಲ್ಲಿ ಏರ್ಪಡಿಸಿದ ಸಂಪ್ರದಾಯ, ಉತ್ಸವಗಳು ಮತ್ತು ಆಚರಣೆಗಳಿಂದ ತಿಳಿದು ಬರುತ್ತದೆ.

ಯಸ್ಯ ಪ್ರಸಾದ ಕಲಯಾ... ಎಂಬ ಯಾಮುನಾಚಾರ್ಯರಿಂದ ರಚಿತವಾದ ಈ ಬಿಡಿ ಶ್ಲೋಕವು ಅವರು ರಾಮಾನುಜರ ಮೇಲಿಟ್ಟಿದ್ದ ಅಪಾರ ಪ್ರೀತಿಯನ್ನೂ ಭರವಸೆಯನ್ನೂ ತೋರಿಸುತ್ತದೆ. ಇದು ಕಂಚೀವರದನಲ್ಲಿ ಅವರು ಮಾಡಿದ ಶರಣಾಗತಿ. ಅದೆಂದೂ ವ್ಯರ್ಥವಾಗದು. ಅವರ ಮನದಾಳದ ಪ್ರಾರ್ಥನೆಯಿಂದಲೇ ವರದರಾಜಸ್ವಾಮಿಯು ಸುಪ್ರೀತನಾಗಿ ರಾಮಾನುಜರನ್ನು ಶ್ರೀರಂಗಕ್ಕೆ ಕಳಿಸಿಕೊಟ್ಟು ವಿಶಿಷ್ಟಾದ್ವೈತ ಮತಕ್ಕೇ ಅಲ್ಲದೆ ನಮ್ಮ ಭಾರತ ದೇಶಕ್ಕೇ ಒಂದು ಅಪೂರ್ವ ಕೊಡುಗೆಯನ್ನು ನೀಡಿದ್ದಾನೆ.

ಯಾಮುನ, ರಾಮಾನುಜರ ದಿವ್ಯಚರಣಗಳಿಗೆ ಸಮರ್ಪಿತ.