ಬಾಲಕಿ ಭಕ್ತಿಗೆ ಮನಸೋತ ಗೋವಿಂದ
ಒಡಿಸ್ಸಾ ರಾಜ್ಯದ ಒಂದು ಹಳ್ಳಿಯಲ್ಲಿ ಬಡಕುಟುಂಬವಿತ್ತು. ಗಂಡ- ಹೆಂಡತಿ ಮತ್ತು ಮಗಳು. ಹೊಲದಲ್ಲಿ ಬೆಳೆದ ತರಕಾರಿಗಳನ್ನು ಮಾರಿ ಜೀವನ ಮಾಡುತ್ತಿದ್ದರು. ಮಗಳು ಕೃಷ್ಣವೇಣಿ. ವ್ಯಾಪಾರದಲ್ಲಿ ತಂದೆಗೆ ಸಹಾಯ ಮಾಡುತ್ತಿದ್ದಳು. ಆಯಾ ಹವಾಮಾನಕ್ಕನುಗುಣವಾಗಿ ತರಕಾರಿಗಳನ್ನು ಬೆಳೆದು ಮಾರುತ್ತಿದ್ದರು. ಅದು ಬದನೆಕಾಯಿ ಕಾಲವಾದ್ದರಿಂದ ಸಾಕಷ್ಟು ಬದನೆಕಾಯಿಗಳನ್ನು ಬೆಳೆದಿದ್ದರು. ಮಗಳು ಕೃಷ್ಣವೇಣಿ ಬದನೆಕಾಯಿಗಳನ್ನು ತಾನೇ ವ್ಯಾಪಾರ ಮಾಡುತ್ತೇನೆಂದು ತಂದೆಗೆ ಹೇಳಿದಳು.

ಕೃಷ್ಣವೇಣಿ ಹೆಸರಿಗೆ ತಕ್ಕಂತೆ ಕೃಷ್ಣನ ಭಕ್ತಳಾಗಿದ್ದಳು. ಲೋಕದ ದೃಷ್ಟಿಯಲ್ಲಿ, ಕೃಷ್ಣವೇಣಿ ಗೆ, ರೂಪವಿಲ್ಲ, ಹಣವಿಲ್ಲ, ಅವಳ ಬಳಿ ಒಳ್ಳೆಯದು ಎಂಬುದು ಯಾವುದೂ ಇರಲಿಲ್ಲ. ಅಂದರೆ ಇವಳು ಲೋಕದ ದೃಷ್ಟಿಯಲ್ಲಿ ನಗಣ್ಯ.
ಒರಿಸ್ಸಾ ರಾಜ್ಯದಲ್ಲಿ 12ನೇ ಶತಮಾನದಲ್ಲಿ ಸಂತ ಜಯದೇವ್ ಎಂಬ ಸುಪ್ರಸಿದ್ಧ ಸಂಸ್ಕೃತ ಕವಿ ಇದ್ದರು. ಇವರು "ಗೀತ ಗೋವಿಂದ" ಬರೆದ ಕರ್ತೃ. ಇದು ರಂಗ ಕಾವ್ಯವಾಗಿ, ಅಥವಾ ಚಿತ್ರ ರಾಗ ಕಾವ್ಯವಾಗಿ ಬಳಕೆಯಲ್ಲಿದೆ.
ಇದನ್ನು ಯಕ್ಷಗಾನ ಕಥೆಗಳು ಭಾಗವತ ಮೇಳ ಮುಂತಾದವುಗಳಲ್ಲಿ ಹೆಚ್ಚು ಬಳಸಿಕೊಳ್ಳುತ್ತಾರೆ. ಗೀತಗೋವಿಂದ ಪದಗಳನ್ನು ಕೃಷ್ಣವೇಣಿ ಯಾವಾಗಲೂ ಅಂದರೆ ದಿನರಾತ್ರಿಯೂ ಗುನುಗುನಿಸುತ್ತಿದ್ದಳು.

ತರಕಾರಿ ಬೆಳೆಯುವಾಗ, ಗಿಡದಿಂದ ತರಕಾರಿ ಕೀಳುವಾಗ, ತರಕಾರಿ ಮಾರುವಾಗಲೂ, ಅವಳಿಗೆ ಇನ್ಯಾವುದರ ಕಡೆಯೂ ಲಕ್ಷ ವಿರಲಿಲ್ಲ. ಕೃಷ್ಣವೇಣಿ ನಿತ್ಯವೂ ಭಗವಂತನ ಭಕ್ತಿ ಪ್ರೇಮದಲ್ಲಿ ಮುಳುಗೇಳುತ್ತಿದ್ದಳು. ಮನೆಯ ಕೆಲಸಗಳನ್ನು ಮಾಡುವಾಗಲೂ ಗೀತಗೋವಿಂದ ಪದ್ಯವನ್ನು ಗುಣಗುಣಿಸುತ್ತಿದ್ದಳು. ತಂದೆ-ತಾಯಿ ಸೇವೆ ಮಾಡುತ್ತಾ ದಿನವಿಡೀ ರಾತ್ರಿ ಮಲಗುವ ತನಕವೂ, ಗೀತ ಗೋವಿಂದ ಪದ್ಯಗಳನ್ನು ನೆನಪು ಮಾಡಿಕೊಳ್ಳುತ್ತಾ ಸದಾ ಗುನುಗುನಿಸುತ್ತಿದ್ದಳು.

ಅಂದು ಹುಣ್ಣಿಮೆ ದಿನ. ಆಕಾಶದಲ್ಲಿ ಚಂದ್ರ ಪ್ರಕಾಶಮಾನವಾಗಿದ್ದ. ಕೃಷ್ಣವೇಣಿಯ ತಂದೆ, ಮಗಳಿಗೆ, ಮಗು ಆಕಾಶದಲ್ಲಿ ಚಂದ್ರ ಬೆಳಗುತ್ತಿದ್ದಾನೆ. ಭೂಮಿಯಲ್ಲಿ ಬೆಳಕು ತುಂಬಿದೆ. ಈ ಬೆಳಕಿನಲ್ಲಿಯೇ ಬದನೆಕಾಯಿಗಳನ್ನು ಕಿತ್ತು ಬಿಡು. ಮುಂಜಾನೆ ಎದ್ದು ಮಾರಲು ಸುಲಭವಾಗುತ್ತದೆ ಎಂದನು. ತಂದೆಯ ಮಾತಿನಂತೆ, ಕೃಷ್ಣವೇಣಿ ಸಂತೋಷದಿಂದ ಬದನೆಕಾಯಿ ಕೀಳಲು ಹೊಲಕ್ಕೆ ಬಂದಳು. ಗಿಡಗಳ ತುಂಬಾ ಬದನೆಕಾಯಿಗಳು ಬಿಟ್ಟಿದ್ದವು. ಬಾಲಕಿ ಆಡಾಡುತ್ತಾ, ಆ ಗಿಡದಿಂದ ಈ ಗಿಡಕ್ಕೆ ,ಈ ಗಿಡದಿಂದ ಆ ಗಿಡಕ್ಕೆ, ಸಂತೋಷದಿಂದ ಗೀತ ಗೋವಿಂದ ಬಾಯಿಯಲ್ಲಿ ಗುಣು ಗುಣಿಸಿ ಬದನೆಕಾಯಿಗಳನ್ನು ಕೀಳುತ್ತಿದ್ದಳು. ಗೀತ ಗೋವಿಂದಂ ಪದ ಹೇಳಿಕೊಳ್ಳುತ್ತಾ, ಮೈಮರೆತು ಕೃಷ್ಣನ ಪ್ರೇಮ ಭಕ್ತಿಯಲ್ಲಿ ಮುಳುಗಿದ್ದಳು. ಅದೆಷ್ಟು ಎಂದರೆ, ಅವಳ ಗುಣುಗುಣಿಸುವ ಗೀತಗೋವಿಂದ ಪದಗಳು ಬೆಳದಿಂಗಳ ರಾತ್ರಿಯಲ್ಲಿ ಯಾರಿಗೆ ಆದರೂ ಮೈ ರೋಮಾಂಚನಗೊಂಡು ಮನಸ್ಸು ಆಹ್ಲಾದದಿಂದ ನಲಿದಾಡುವಂತಾಗುತಿತ್ತು. ಇಂತಹ ಅಮೋಘ ಭಕ್ತಿ-ಭಾವ, ಮಾಧುರ್ಯದ ಪದ್ಯ ಕೇಳಿ ಮನಸೋತ "ಜಗನ್ನಾಥ" ರಾತೋರಾತ್ರಿ ಗುಡಿಯನ್ನೇ ಬಿಟ್ಟು ಬಾಲಕಿ ಕೃಷ್ಣವೇಣಿ ಇರುವಲ್ಲಿ ಪ್ರಕಟನಾದನು. ಪೀತಾಂಬರ ದಾರಿ ಜಗನ್ನಾಥ ತಾನು ಅವಳ ಹಿಂದೆ-ಮುಂದೆ ಸುಳಿದಾಡಿದರೂ ಅವಳಿಗೆ ಗಮನವಿರಲಿಲ್ಲ. ಶ್ರೀಕೃಷ್ಣನು ಅವಳನ್ನೆ ಅನುಸರಿಸಿ ಆನಂದದಿಂದ ನಲಿದಾಡಿ ಓಡಾಡುತ್ತಿದ್ದರೆ, ಅವನು ಉಟ್ಟಿದ್ದ ಪೀತಾಂಬರವು ಬದನೆಕಾಯಿ ಮುಳ್ಳಿನ ಗಿಡಗಳ ಮೇಲೆ ಸಿಕ್ಕಿಕೊಂಡು ಪೀತಾಂಬರವೆಲ್ಲ ಅಲ್ಲಲ್ಲಿ ಕಿತ್ತುಹೋಗಿತ್ತು. ಆದರೆ ಇದಾವುದರ ಗಮನವಿಲ್ಲದೇ ಅನ್ ಸಮಯ ಕೃಷ್ಣವೇಣಿ ಹಿಂದೆ ಮುಂದೆ ಓಡಾಡಿದ ಜಗನ್ನಾಥನು ಬೆಳಗಾಗುತ್ತಲೇ ಅವಳಿಗೆ ಗೊತ್ತಿಲ್ಲದಂತೆ ಮರೆಯಾಗಿ ಮಂದಿರದ ವಿಗ್ರಹದೊಳಗೆ ಸೇರಿದ.

ಮರುದಿನ ಆ ದೇಶದ ರಾಜ ಜಗನ್ನಾಥನ ದರ್ಶನಕ್ಕೆ ಬಂದು ನಮಸ್ಕರಿಸಿ ತಲೆಯೆತ್ತಿ ಭಗವಂತನನ್ನು ನೋಡಿದಾಗ, ಜಗನ್ನಾಥನ ಮೈಮೇಲಿದ್ದ ಹರಿದ ಪಿತಾಂಬರ ನೋಡಿ, ಅವನಿಗೆ ತುಂಬಾ ದುಃಖವಾಯಿತು ಪೂಜಾರಿಗೆ ಹಿಂದಿನ ದಿನ ಸಂಜೆ ಜಗನ್ನಾಥ ನಿಗಾಗಿ ಹೊಸ ಪೀತಾಂಬರದ ಉಡುಗೆ ಯನ್ನು ಕೊಟ್ಟಿದ್ದನು. ಪೂಜಾರಿ ಜಗನ್ನಾಥನಿಗೆ ಹೊಸದನ್ನು ಉಡಿಸದೆ ಅಲ್ಲಲ್ಲಿ ಹರಿದ ಹಳೆಯ ಚಿಂದಿ ಉಡುಪನ್ನು ಹಾಕಿದ್ದಾನಲ್ಲ, ಯೋಚಿಸಿ ಪೂಜಾರಿಯನ್ನು ಕರೆಸಿ ಕೇಳಿದನು. ಪೂಜಾರಿ ಒಳ್ಳೆಯ ಸ್ವಭಾವದವನು. ಬಂದು ಕೃಷ್ಣನನ್ನು ನೋಡಿ ಅವಾಕ್ಕಾಗಿ ನಿಲ್ಲುತ್ತಾನೆ. ಏಕೆಂದರೆ ಹೊಸ ಪೀತಾಂಬರವನ್ನು ಜಗನ್ನಾಥನಿಗೆ ಉಡಿಸಿದ್ದನು ಆದರೆ ಆ ಪೀತಾಂಬರ ಅಲ್ಲಲ್ಲಿ ಕಿತ್ತು ಹರಿದು ಚಿಂದಿಯಾಗಿದೆ. ಪೂಜಾರಿ ಗಾಬರಿಯಿಂದ, ರಾಜನನ್ನು ನೋಡಿ ಮಹಾಪ್ರಭು ನೀವು ಕೊಟ್ಟ ಪೀತಾಂಬರವನ್ನೇ ನಾನು ಭಗವಂತನಿಗೆ ಹಾಕಿದ್ದು ಆದರೆ ಹೇಗಾಯಿತೆಂದು ನನಗೆ ಗೊತ್ತಿಲ್ಲ ಎಂದು ಕೈಮುಗಿದು ಹೆದರಿ ತಲೆತಗ್ಗಿಸಿ
ನಿಂತನು.‌ ರಾಜ ಅವನ ಮಾತನ್ನು ನಂಬಲಿಲ್ಲ ಪೂಜಾರಿ ಮೋಸ ಮಾಡಿದ್ದಾ ನೆಂದು ಜೈಲಿಗೆ ಹಾಕಿಸಿದ.

ನಿರ್ದೊಷಿ ‌ ಬ್ರಾಹ್ಮಣ ಜೈಲಿನಲ್ಲಿ ಕುಳಿತು ಕಣ್ಣೀರು ಹಾಕುತ್ತಾ, ಎಡೆಬಿಡದೆ ಭಗವಂತನ ನಾಮಸ್ಮರಣೆ ಮಾಡುತ್ತಿದ್ದನು. ಮಂದಿರದಿಂದ ಅರಮನೆಗೆ ಬಂದ ರಾಜನು ವಿಶ್ರಮಿಸಿಕೊಳ್ಳುತ್ತಾ, ಕೃಷ್ಣನ ಪೀತಾಂಬರ ಹರಿಯಲು ಕಾರಣವೇನು ಎಂದು ಯೋಚಿಸುತ್ತಾ ಹಾಗೇ ನಿದ್ದೆ ಹೋದನು. ಕನಸಿನಲ್ಲಿ ಭಗವಾನ್ ವಿಷ್ಣುವು ಪ್ರಕಟಗೊಂಡನು. ರಾಜನೆ, ಮಂದಿರದ ಪೂಜಾರಿ ಬ್ರಾಹ್ಮಣ ನಿರ್ದೋಷಿ ಅವನ ತಪ್ಪಿಲ್ಲ ಅವನನ್ನು ಬಿಡಿಸಿ ಸನ್ಮಾನ ಮಾಡು. ನನ್ನ ಪೀತಾಂಬರದ ಹರಿದ ಚೂರುಗಳು ನಿನಗೆ ಬೇಕೆಂದರೆ, ಬದನೆಕಾಯಿ ಬೆಳೆಯುವ ಹೊಲಕ್ಕೆ ಹೋಗಿ ನೋಡು ಅಲ್ಲಿನ ಗಿಡದ ಮುಳ್ಳುಗಳ ಮೇಲೆ ಪೀತಾಂಬರದ ಚೂರು ಸಿಕ್ಕಿಕೊಂಡಿರುತ್ತೆ. ನಾನು ಬಾಲಕಿಯ ಪ್ರೇಮದಲ್ಲಿ ಬಂಧಿಯಾಗಿ ಬದನೆಕಾಯಿ ಹೊಲಕ್ಕೆ ಹೋದೆ, ಆ ಬಾಲಕಿ ಭಕ್ತಿಭಾವ ಪರವಶಳಾಗಿ ನನ್ನನ್ನು ಸ್ಮರಿಸುತ್ತಾ ಬದನೆಕಾಯಿ ಕೀಳುತ್ತಿದ್ದಳು. ಮೈಮರೆತ ಬಾಲಕಿ ಗುಣಗಾನ ಮಾಡುವ ಪದವನ್ನು ಹೇಳುತ್ತಾ, ಜಗತ್ತನ್ನೇ ಮರೆದಿದ್ದಳು. ನಾನು ಅವಳ ಹಿಂದೆ-ಮುಂದೆ ಸುತ್ತುತ್ತಿದ್ದೆ . ಆಗ ಪೀತಾಂಬರ ಬದನೆಕಾಯಿ ಗಿಡದ ಮುಳ್ಳುಗಳಿಗೆ ಸಿಲುಕಿ ಹರಿದಿದೆ. ರಾಜನಿಗೆ ಎಚ್ಚರವಾಯಿತು.

ಜಗನ್ನಾಥನ ಮಂದಿರದಲ್ಲಿ, ಜಗನ್ನಾಥನ ಪೀತಾಂಬರ, ಹೂವು, ಧೂಪ ದೀಪಾರತಿ, ಮಂಗಳಾರತಿ, ನಾನಾ ಬಗೆಯ ಕ್ಷೀರಾನ್ನ , ಷಡ್ರಸಾನ್ನ, ಸಿಹಿ ಪ ಭಕ್ಷಗಳ ನೈವೇದ್ಯ, ಹೀಗೆ ದೇವಸ್ಥಾನದ ಜವಾಬ್ದಾರಿಯ ಕೆಲಸಗಳನ್ನು ಶ್ರದ್ಧಾಭಕ್ತಿಯಿಂದ ನಿರ್ವಹಿಸುತ್ತಿದ್ದ ರಾಜನ ಜೀವನದಲ್ಲಿ ಇಂತಹ ಅದ್ಭುತ ಘಟನೆಯು ನಡೆದು ಅವನ ಮನಸ್ಸನ್ನೆ ಪರಿವರ್ತಿಸಿತು. ರಾಜನು ಪೂಜಾರಿಯನ್ನು ಬಿಡಿಸಿ, ಗೌರವದಿಂದ ಸನ್ಮಾನ ಮಾಡಿ ಕ್ಷಮೆ ಕೇಳಿದನು. ಆನಂತರ ತನ್ನನ್ನು ಸಂಪೂರ್ಣವಾಗಿ ಜಗನ್ನಾಥನ ಸ್ಮರಣೆ, ಪ್ರಜೆಗಳ ಸೇವೆ, ಧ್ಯಾನದಲ್ಲಿ ತೊಡಗಿಸಿಕೊಂಡನು.

ಬದನೆಕಾಯಿ ಕೀಳುವ ಹುಡುಗಿಯ ಭಕ್ತಿಗೆ ಸೋತು ಶರಣಾದ ಜಗನ್ನಾಥನು ಬಾಲಕಿಯ ಹಿಂದೆ ಮುಂದೆ ಸುತ್ತುತ್ತಲೇ ಇದ್ದ. ಬದನೆಕಾಯಿ ತೋಟದ ತುಂಬಾ" ಹರೆಕೃಷ್ಣ, ಹರೆಕೃಷ್ಣ, ಹರೇಕೃಷ್ಣ ,ಕೃಷ್ಣ ಕೃಷ್ಣ ಹರೇ ಹರೇ, ಹರೇ ರಾಮ, ಹರೇ ರಾಮ, ಹರೇರಾಮ, ರಾಮ ರಾಮ ಹರೇ ಹರೇ" ಸದಾಕಾಲ ಗುಣುಗುಣಿಸುವುದು ಕೇಳುತ್ತಿತ್ತು.

ಇತ್ಥಮ್ ಕೇಲಿತತೀರ್ವಿಹೃತ್ಯ
ಯಮುನಾ ಕೂಲೇ ಸಮಮ್ ರಾಧಯಾ
ತದ್ರೋ ಮಾವಲಿ ಮೌಕ್ತಿ ಕಾವಲಿ ಯುಗೇ
ವೇಣಿ ಭ್ರಮಮ್ ಬಿಭ್ರತಿ
ತತ್ರಾಹ್ಲಾದ ಕುಚ ಪ್ರಯಾಗ ಫಲ ಯೋರ್ಲಿಪ್ಸಾಹ
ತೋರ್ಹಸ್ತಯೋ ವ್ಯಾಪಾರ
ಪುರುಷೋತ್ತಮಸ್ಯದದತುಸ್ಫೀತಾಮ್
ಮುದಾಮ್ ಸಮ್ಪದಮ್!

ಇತಿ ಜಯದೇವ ಗೀತ ಗೋವಿದೇ
ಸುಪ್ರೀತ ಪೀತಾಂಬರೋ ನಾಮ ದ್ವಾದಶ ಸರ್ಗ
ಇತ್ತ ಮಿದಮ್ ಕಾವ್ಯಮ್ !