ಶ್ರೀರಾಮನು ಅಸಮಾನತೆಯ ರಹಸ್ಯವನ್ನು ಸೀತೆಗೆ ವಿವರಿಸಿದನು | Why Inequality Exists – A Story from Sri Rama’s Rule

Sri Mahavishnu Info
Sri Rama and Sita

ಸೃಷ್ಟಿಯ ಅಸಮತೆಯಿಂದಲೇ ಲೋಕ ವ್ಯವಹಾರಗಳು ಸುಗಮ

ಶ್ರೀ ರಾಮನು ಸೀತೆಗೆ ತಿಳಿಸಿಕೊಟ್ಟ ಅಸಮಾನತೆಯ ರಹಸ್ಯ

ಶ್ರೀ ರಾಮನ ರಾಜ್ಯಭಾರ ಆರಂಭವಾಗಿತ್ತು. ಒಮ್ಮೆ ಸೀತಾಮಾತೆ, ಶ್ರೀ ರಾಮನನ್ನು "ಸ್ವಾಮೀ, ನಮ್ಮ ರಾಜ್ಯದಲ್ಲಿ ಬಡವ-ಶ್ರೀಮಂತರೆಂಬ ಭೇದಭಾವ ಏಕೆ ಇದೆ? ತಾವು ಸಮಾನತೆಯನ್ನು ತಂದು, ಹೆಚ್ಚಿನ ಗೌರವಕ್ಕೆ ಪಾತ್ರರಾಗಿ ರಾಜ್ಯದ ಬೊಕ್ಕಸದಿಂದ ಎಲ್ಲರ ಅಗತ್ಯಗಳನ್ನು ಪೂರೈಸಿರಿ" ಎಂದಳು.

ಶ್ರೀ ರಾಮನು ಸೀತೆಯ ಮಾತನ್ನು ಕೇಳಿ "ನಿನ್ನಿಷ್ಟದಂತಾಗಲಿ" ಎಂದನು. ತಮ್ಮ ಲಕ್ಷ್ಮಣನನ್ನು ಕರೆದು "ರಾಜ್ಯದಲ್ಲಿ ಎಲ್ಲಾ ಪ್ರಜೆಗಳು ತಮ್ಮ ತಮ್ಮ ಅಗತ್ಯಗಳಿಗೆ ಬೇಕಾದ ಧನವನ್ನು ಭಂಡಾಯದಿಂದ ಪಡೆಯಬಹುದು" ಎಂದು ಡಂಗುರ ಸಾರಿಸು" ಎಂದು. ಅಣ್ಣನ ಆಜ್ಞೆಯನ್ನು ಲಕ್ಷ್ಮಣನು ಪಾಲಿಸಿದನು. ಎಲ್ಲಾ ಜನರು ಧನವನ್ನು ಪಡೆಯಲು ಅರಮನೆಯ ಬಳಿ ಸಾಲಾಗಿ ನಿಂತರು.

ಶ್ರೀರಾಮನು ಧಾರಾಳವಾಗಿ ದಾನ ಮಾಡಿದನು. ಎಲ್ಲಾ ಜನರು ಪರಿಶ್ರಮವಿಲ್ಲದೇ ಶ್ರೀಮಂತರಾದರು. ಪ್ರಜೆಗಳಲ್ಲಿ "ದುಡಿದು ಉಣ್ಣಬೇಕು" ಎಂಬ ಮನೋಭಾವ ದೂರವಾಯಿತು. ಹೀಗೆ 3–4 ತಿಂಗಳು ಕಳೆಯಿತು.

ಮಳೆಗಾಲ ಆರಂಭವಾಯಿತು. ಅರಮನೆಯ ಮೇಲ್ಛಾವಣಿಯಲ್ಲಿ ಬಿರುಕು ಬಿಟ್ಟು ನೀರಿಳಿಯಲು ಆರಂಭವಾಯಿತು. ಬಿರುಕುಗಳನ್ನು ಸರಿಪಡಿಸಲು ಗಾರೆ ಕೆಲಸದವರು ಬರಬೇಕೆಂದು ಶ್ರೀರಾಮನೇ ಆದೇಶಿಸಿದನು. ಜನರು ಸೋಮಾರಿಗಳಾಗಿದ್ದರು. ಆದ್ದರಿಂದ ಯಾರೂ ಕೆಲಸಕ್ಕೆ ಬರಲಿಲ್ಲ.

ರಾಜ್ಯದ ಹಲವು ಮನೆಗಳಲ್ಲೂ ಬಿರುಕು ಉಂಟಾಯಿತು. ಗಾರೆ ಕೆಲಸ ಮಾಡುವವರೂ ತಮ್ಮ ಮನೆಯ ಬಿರುಕುಗಳನ್ನು ಸರಿಪಡಿಸಲು ಬೇರೆ ಕೆಲಸದವರನ್ನು ಹುಡುಕಲು ಆರಂಭಿಸಿದರು. ಸೀತಾಮಾತೆಗೆ ರಾಜ್ಯದಲ್ಲಿನ ಪರಿಸ್ಥಿತಿ ಅರಿವಾಯ್ತು. ಎಲ್ಲರೂ ಸಿರಿವಂತರಾದರೆ ದುಡಿಯುವವರೇ ಇರುವುದಿಲ್ಲ ಎಂಬುದು ತಿಳಿಯಿತು.

ಶ್ರೀ ರಾಮನ ಬಳಿ ಬಂದು "ಮಹಾಪ್ರಭು, ಲೋಕದಲ್ಲಿ ಅಸಮಾನತೆ ಏಕೆ ಇದೆ ಎಂಬುದು ತಿಳಿಯಿತು. ಪ್ರಜೆಗಳು ಮೊದಲಿನ ಹಾಗೇ ಇರಲಿ. ಮೊದಲಿನಂತೆ ದುಡಿದು ತಿನ್ನುವವರಾದರೆ ಕೆಲಸಕ್ಕೆ ಜನ ಸಿಗುತ್ತಾರೆ" ಎಂದು ನಿವೇದಿಸಿದಳು.

ಶ್ರೀ ರಾಮನೂ "ಹಾಗೆಯೇ ಮಾಡುತ್ತೇನೆ" ಎಂದನು.

ಜಗತ್ತಿನಲ್ಲಿ ಎಲ್ಲರೂ ಶ್ರೀಮಂತರಾದರೆ, ಲೋಕದ ವ್ಯವಹಾರ ಸುಗಮವಾಗಿ ನಡೆಯದು. ಆದ್ದರಿಂದಲೇ ಭಗವಂತ ಈ ಭೂಮಿಯಲ್ಲಿ ಏರುಪೇರು ಸೃಷ್ಟಿಸಿದ್ದಾನೆ. ಎಲ್ಲರೂ ತಮ್ಮ ತಮ್ಮ ಕರ್ತವ್ಯ ಕರ್ಮಗಳಲ್ಲಿ ತೊಡಗಿಕೊಂಡಿದ್ದರೆ ಮಾತ್ರ ತಮ್ಮ ಸುಖ ಹಾಗೂ ಪರರ ಸುಖವನ್ನೂ ಕಾಪಾಡಲು ಸಾಧ್ಯ.

ಎಲ್ಲರೂ ಮೈಗಳ್ಳರಾಗದೇ ನಿರಂತರ ಶ್ರಮಜೀವಿಗಳು ಆಗಿ ಇರಬೇಕೆಂಬುದೇ ತಾರತಮ್ಯದ ಮರ್ಮ.