ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣ ಪಾದ ಸೇವನಮ್ |
ಅರ್ಚನಂ ವಂದನಂ ದಾಸ್ಯಂ ಸಖ್ಯಮ್ ಆತ್ಮನಿವೇದನಮ್ |

ಇತಿ ಪುಂಸಾರ್ಪಿತಾ ವಿಷ್ಣೋ ಭಕ್ತಿಶ್ಚೇನ್ನವ ಲಕ್ಷಣ |
ಕ್ರಿಯತೇ ಭಗವತ್ಯದ್ಧಾ ತನ್ಮನ್ಯೆsಧೀತ ಮುತ್ತಮಮ್||
(ಶ್ರೀಮದ್ಭಾಗವತ 7-6-23,24)
ಎನ್ನುವಂತೆ ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ, ವಂದನೆ, ದಾಸ್ಯ, ಸಖ್ಯ, ಆತ್ಮನಿವೇದನೆ - ಎನ್ನುವ ಒಂಭತ್ತು ವಿಧದ ಭಕ್ತಿಮಾರ್ಗಗಳಿವೆ. ಈ ಮಾರ್ಗಗಳ ಆಂತರ್ಯವನ್ನು ಸಂಪೂರ್ಣವಾಗಿ ಗ್ರಹಿಸಿ, ಆಯಾ ಮಾರ್ಗಗಳಲ್ಲಿ ಆಳ್ವಾರರು ಪ್ರಯಾಣ ಮಾಡಿದ್ದರೆಂದು ಅವರು ರಚಿಸಿರುವ ದಿವ್ಯಪ್ರಬಂಧಗಳಿಂದ ಸ್ಪಷ್ಟವಾಗುತ್ತದೆ.

1. ಶ್ರವಣ :-
ಭಗವಂತನ ಹೆಸರುಗಳು, ಯಶಸ್ಸುಗಳು ಮಹಿಮೆಗಳು, ಕಲ್ಯಾಣಗುಣಗಳು, ಲೀಲಾವಿನೋದಗಳು ಎನ್ನುವವು ಶ್ರದ್ಧೆಯಿಂದ ಆಲಿಸುವುದು ಇಲ್ಲವೆ ಕೇಳಿಸುವಂತೆ ಮಾಡುವ ಕ್ರಿಯೆಯೇ 'ಶ್ರವಣಭಕ್ತಿ'. ಭಗವದ್ಗುಣ ವೈಭವಗಳನ್ನು, ಚರಿತೆಗಳನ್ನು ಆಲಿಸಿ, ಭಕ್ತನು ಆ ಅನುಭೂತಿಗೆ ಒಳಗಾಗುವುದೇ ಈ ಶ್ರವಣ ಭಕ್ತಿಗೆ ಚರಮಾಸ್ಥೆ. ಆಳ್ವಾರರ ಕೃತಿಗಳೆಲ್ಲವೂ ಭಗವಂತನ ಹೆಸರುಗಳು, ಲೀಲೆಗಳನ್ನು ಆಲಿಸುವುದು, ಕೇಳಿಸುವುದು - ಎನ್ನುವ ಕ್ರಿಯೆಗಳೊಂದಿಗೇ ಒಟ್ಟುಗೂಡಿವೆ. ಅವರು ಭಗವಂತನ ಲೀಲೆಗಳನ್ನು ವರ್ಣಿಸುತ್ತಾ ಆತನನ್ನೇ ಪರಿಪೂರ್ಣನೆಂದು ಭಾವಿಸಿದಾಗ - ಅವನ್ನು ಆಲಿಸಿದಾಗ, ಕೇಳಿಸಿದಾಗ ಉಂಟಾಗುವ ಫಲಿತಗಳನ್ನು ಹಲವು ರೀತಿಗಳಲ್ಲಿ ವಿಶದೀಕರಿಸಿದ್ದಾರೆ.
ಗೋವಿಂದನನ್ನು ವರ್ಣಿಸುವ ಗೀತೆಗಳನ್ನು ಹಾಡುವವರಿಗೆ ಭಗವದನುಗ್ರಹವು ತನಗೆ ತಾನೇ ಉಂಟಾಗುತ್ತದೆ. (ಪೆರಿಯಾಳ್ವಾರ್ ತಿರುಮೋಷಿ 2-9-11). ಭಗವಂತನ ಲೀಲೆಗಳಿಂದೊಡಗೂಡಿದ ಈ ಪಾಶುರಗಳನ್ನು ಆಲಿಸುವವರು ವೈಕುಂಠವನ್ನು ಸೇರುವರು. (ಪೆರಿಯಾಳ್ವಾರ್ ತಿರುಮೋಷಿ 2-1-10) ಹೀಗೆಂದು ಪೆರಿಯಾಳ್ವಾರ್ ರವರು ಒತ್ತಿ ಹೇಳಿದ್ದಾರೆ.
ಈ ದ್ರಾವಿಡ ಪಾಶುರಗಳನ್ನು ಆಲಿಸಿದವರಿಗೆ (ಶ್ರವಣ ಮಾಡಿದವರಿಗೆ) ಕಷ್ಟಗಳು ದೂರವಾಗುತ್ತವೆ ಎಂದು ಕುಲಶೇಖರರು ತಮ್ಮ ಪೆರುಮಾಳ್ ತಿರುಮೊಶಿ (3-9)ಯಲ್ಲಿ ತಿಳಿಸಿದ್ದಾರೆ.
ಈ ಪಾಶುರಗಳನ್ನು ಹಾಡುವವರಿಗೆ ಅವರ ಪಾಪಗಳು ಚೂರುಚೂರಾಗುತ್ತವೆ ಎಂದು ತಿರುಮಂಗೈ ಆಳ್ವಾರರು ವಿಶದೀಕರಿಸಿದ್ದಾರೆ. ಭಗವಂತನ ಪವಿತ್ರ ಹೆಸರುಗಳನ್ನು ಆಲಿಸುವವರು ನರಕವನ್ನು ಹೊಂದುವುದಿಲ್ಲವೆಂದು ಪೊಯ್ ಹೈ ಆಳ್ವಾರರು (ಮೊದಲ್ ತಿರುವಂದಾದಿ-87), ಭಗವನ್ನಾಮವನ್ನು ಶ್ರವಣ ಮಾಡುವವರಿಗೆ ಪರಮಪದವು ಲಭಿಸುತ್ತದೆ ಎಂದು ತೊಂಡರಡಿಪ್ಪೊಡಿಯಾಳ್ವಾರರು (ತಿರುಮಾಲೈ-2) ಭಗವನ್ನಾಮ ಶ್ರವಣ ಫಲವನ್ನು ವಿಶೇಷವಾಗಿ ಪ್ರಶಂಸಿಸಿದ್ದಾರೆ.
ನಮ್ಮಾಳ್ವಾರರು ತಮ್ಮ ಒಂದು ಪ್ರಬಂದದಲ್ಲಿ ಒಂದು ಕಡೆ ಈ ಶ್ರವಣ ಭಕ್ತಿಯನ್ನು ಅನೇಕ ರೀತಿಗಳಲ್ಲಿ ಕೊಂಡಾಡಿದ್ದಾರೆ. 'ನನ್ನ ಕಿವಿಗಳು ಸದಾ ಕಾಲದಲ್ಲೂ ಆನಂದದಾಯಕವಾದ ಭಗವಂತನ ಲೀಲೆಗಳನ್ನೇ ಆಲಿಸಲು ಇಚ್ಚಿಸುತ್ತವೆ' ಎಂದು (ತಿರುವಾಯ್ ವೊಷಿ 3-9-6) ಅವರು ತಿಳಿಸಿದ್ದಾರೆ.
ಇದರಿಂದ ಆಳ್ವಾರರು ಶ್ರವಣ ಭಕ್ತಿಗೆ ಎಷ್ಟೊಂದು ಪ್ರಾಮುಖ್ಯತೆ ನೀಡಿದ್ದರೆಂಬುದು ಇದರಿಂದ ಅರ್ಥವಾಗುತ್ತದೆ.

2. ಕೀರ್ತನೆ :-
ಭಗವಂತನ ಹೆಸರುಗಳನ್ನು, ಗುಣಗಳನ್ನು, ಮಾಹಾತ್ಮೈಗಳನ್ನು, ಲೀಲೆಗಳನ್ನು ವರ್ಣಿಸುವುದು, ಹಾಡುವುದು - ಎನ್ನುವುದೇ 'ಕೀರ್ತನ ಭಕ್ತಿ' ಎನ್ನುವುದು. ಇಂತಹ ಕೀರ್ತನ ಭಕ್ತಿಯನ್ನು ಎಲ್ಲ ಭಗವದ್ ಭಕ್ತರುಗಳೂ ಸಾಮಾನ್ಯವಾಗಿ ಪ್ರಶಂಸಿಯೇ ಇರುತ್ತಾರೆ. ಹಾಗಿದ್ದ ಮೇಲೆ ಆಳ್ವಾರರು ಇದರ ಬಗ್ಗೆ ಏನೂ ಹೇಳದೇ ಇರುತ್ತಾರೇನು?
ಆಳ್ವಾರರ ಪಾಶುರಗಳೆಲ್ಲವೂ ಸಹಜವಾಗಿ ಸ್ತುತಿಪರವಾದ ಕೀರ್ತನೆಗಳೇನೇ! ಅದರಿಂದಲೇ ಈ ಪಾಶುರಗಳನ್ನು ದೇವಸ್ಥಾನಗಳಲ್ಲಿ ಪ್ರತಿದಿನವೂ ಅನುಸಂಧಾನ ಮಾಡುವರು. ಶ್ರೀವೈಷ್ಣವ ಸಂಪ್ರದಾಯಸ್ಥರೆಲ್ಲರೂ ಸ್ತುತಿಪರವಾದ ಈ ಪಾಶುರಗಳನ್ನು ಹಾಡುತ್ತಾ ಆನಂದಿಸುವರು.
ಭಗವಂತನ ಕಲ್ಯಾಣಗುಣಗಳನ್ನು ಹಾಡುವುದರಲ್ಲೆ ಮಹದಾನಂದವನ್ನು ಭಕ್ತರು ಅನುಭವಿಸುವರು. ಆದರೆ, ಕರ್ಮಬದ್ಧರಾದ ಮಾನವರ ಗುಣಗಳನ್ನು ಗಾನ ಮಾಡುವುದರಲ್ಲಿ ಅಂತಹ ಆನಂದ ದೊರೆಯಲಾರದು. ಆದುದರಿಂದಲೇ ಸಾಮಾನ್ಯ ಮಾನವರನ್ನು ಹೊಗಳುವ ನಮ್ಮಾಳ್ವಾರರು ಮೊದಲಿಸಿ, ಎಲೌ ಕವಿಯೆ! ಅಶಾಶ್ವತವಾದವುಗಳಾದ, ಅಸಂಪೂರ್ಣವಾದ ಮಾನವರ ಗುಣಗಳನ್ನು ನಾನು ಹೇಗೆಂದು ಶ್ಲಾಘಿಸಲಿ? ಆನಂದ ನಾಯಕನಾದ ಭಗವಂತನನ್ನು ಸಂಕೀರ್ತನೆ ಮಾಡುವುದರಿಂದ ತುಂಬು ಪ್ರಯೋಜನವಿದೆಯೆಂದು ಪೂರ್ವಾಚಾರ್ಯರು ಪ್ರಬೋಧಿಸಿರುವರು. (ತಿರುವಾಯ್ ಮೊಷಿ 3-9-5)
ಭಗವಂತನನ್ನು ಸ್ತುತಿಸದ ಮಾನವರು ಕುಡಿಯುವ ನೀರು, ಧರಿಸುವ ವಸ್ತುಗಳು ಕೇವಲ ದೌರ್ಭಾಗ್ಯದ ವಸ್ತುಗಳು (ಪೆಯಾಳ್ವಾರ್ ತಿರುಮೊಷಿ 4-4-1). ಭಗವಂತನ ಕಲ್ಯಾಣಗುಣಗಳನ್ನು ಸಂಕೀರ್ತನೆ ಮಾಡುವ ಭಕ್ತರ ಪಾದಸ್ಪರ್ಶದಿಂದಲೇ ಈ ಭೂಮಿಯ ಪವಿತ್ರತೆಯನ್ನು ಹೊಂದಿದೆ ಎಂದು ಪೆರಿಯಾಳ್ವಾರ್ (ಪೆರಿಯಾಳ್ವಾರ್ ತಿರುಮೊಷಿ 4-4-6)ರವರು ಸ್ಪಷ್ಟೀಕರಿಸುತ್ತಾ, 'ನನ್ನ ನಾಲಿಗೆಯು ಭಗವಂತನನ್ನು ಮಾತ್ರವೇ ಸ್ತುತಿಸುತ್ತದೆಯೇ ಹೊರತು ಬೇರೆ ಯಾರನ್ನು ಸ್ತುತಿಸುವುದಿಲ್ಲ' ಎಂದು ತಿಳಿಸಿದ್ದಾರೆ. (ಪೆರಿಯಾಳ್ವಾರ್ ತಿರುಮೊಷಿ 5-1-1).
ಭಗವಂತನನ್ನು ಸ್ತುತಿಸುವುದು ತಪಸ್ಸಿಗೆ ಸಮಾನವಾದುದು ಎಂದು ಪೊದತ್ತಾಳ್ವಾರರು (ಇರಂಡಾಂ ತಿರುವಂದಾದಿ - 77) ಹಾಗೂ ಭಗವನ್ನಾಮ ಸಂಕೀರ್ತನೆಯಲ್ಲಿಯೇ ಎಲ್ಲ ರೀತಿಯ ಪರಮಾನಂದವೂ ಅಡಗಿದೆ ಎಂದು ಕುಲಶೇಖರಾಳ್ವಾರ್ ರವರು (ಪೆರುಮಾಳ್ ತಿರುಮೊಷಿ -24) ಎತ್ತರಿಸಿದ ದನಿಯಲ್ಲಿ ಸಾರಿದ್ದಾರೆ.
ಗಾನಯೋಗ್ಯವಾದ ಆಳ್ವಾರರ ಪಾಶುರಗಳೆಲ್ಲವೂ ಭಗವಂತನ ಸ್ತುತಿಪರವಾದವುಗಳಾದುದರಿಂದ ಅಂತಹ ಭಕ್ತಿಗೀತೆಗಳನ್ನು ಭಕ್ತರುಗಳಾದವರು ಹಾಡುತ್ತಾ, ವಿವಿಧ ರಾಗ ತಾಳಗಳೊಂದಿಗೆ ಅವುಗಳನ್ನು ಪ್ರಚಾರ ಮಾಡುತ್ತಾ, ಪ್ರಜೆಗಳನ್ನು ಪ್ರಭಾವಗೊಳಿಸುವಂತೆ ಮಾಡಿರುತ್ತಾರೆ.

3. ಸ್ಮರಣೆ :-
ಭಗವಂತನ ಹೆಸರುಗಳು, ಗುಣಗಳು, ಮಹಾತ್ಮ್ಯೆಗಳು, ಲೀಲೆಗಳು, ಅವನ ಸರ್ವವ್ಯಾಪಕತ್ವ ಇತ್ಯಾದಿಗಳನ್ನು ಸದಾಕಾಲದಲ್ಲಿಯೂ ಸ್ಮರಿಸುತ್ತಿರುವುದೇ 'ಸ್ಮರಣ ಭಕ್ತಿ'. ಈ ಭಕ್ತಿಯ ಸಾಧನೆಯಲ್ಲಿ ಭಗವನ್ನಾಮ ಜಪಕ್ಕೆ ಬಹಳಷ್ಟು ಪ್ರಾಮುಖ್ಯತೆ ಇದೆ. ತಿರುಗಾಡುತ್ತಿರುವಾಗ, ಊಟ ಮಾಡುವಾಗ, ಯಾವುದೇ ಕೆಲಸ ಮಾಡುತ್ತಿರುವಾಗ ಸಾಧಕನ ಚಿತ್ತವೃತ್ತಿ ಭಗವನ್ನಾಮ ಸ್ಮರನೆಯಲ್ಲೆ ಸಂಲಗ್ನವಾಗಿರಬೇಕು.
'ಪ್ರಕೃತಿಯಲ್ಲಿರುವ ಜಲ, ಆಹಾರ ಮೊದಲಾದವುಗಳೆಲ್ಲವೂ ಭಗವನ್ಮಯಗಳಾಗಿ ಕಾಣಿಸುತ್ತಿವೆ ಯಾವ ಪದಾರ್ಥವನ್ನು ನೋಡಿದರೂನೂ ಭಗವಂತನೇ ಸ್ಮರಣೆಗೆ ಬರುತ್ತಿರುತ್ತಾನೆ' (ತಿರುವಾಯ್ ಮೊಷಿ 6-7-1) ಎಂದು ನಮ್ಮಾಳ್ವಾರರು ತಿಳಿಸುತ್ತಾರೆ.
'ಭಗವಂತನ ಹೆಸರನ್ನು ಸ್ಮರಿಸದವರು ಮಹಾಪಾಪಿಗಳು. ಭಗವಂತನಲ್ಲಿ ಮನಸ್ಸನ್ನು ಕೇಂದ್ರೀಕರಿಸದವನು ಭೂಮಿಗೆ ಭಾರವಾಗಿರುವವರು' ಎಂದು ಪೆರಿಯಾಳ್ವಾರ್ ರವರು (ಪೆರುಮಾಳ್ ತಿರುಮೊಷಿ 4-4-5) ತಿಳಿಸುತ್ತಾರೆ.
'ಉತ್ತಮ ಭಕ್ತನಾದವನು ನಿರಂತರವೂ ಭಗವನ್ನಾಮವನ್ನು ಸ್ಮರಿಸುತ್ತಲೇ ಇರುವರು' ಎಂದು ಪೂಯಾಹೈ ಆಳ್ವಾರರು (ಮೊದಲ್ ತಿರುವಂದಾದಿ - 88) ತಿಳಿಸುತ್ತಾರೆ.
'ಭಗವನ್ನಾಮವನ್ನು ಒಂದು ಸಲ ಸ್ಮರಿಸಿದರೇನೇ ಸಾಕು, ಭಗವಂತನು ಆ ಭಕ್ತನ ಮನಸ್ಸಿನಲ್ಲಿ ನೆಲೆಸಿಬಿಡುತ್ತಾನೆ' ಎಂದು ಪೇಯಾಳ್ವಾರರು (ಮೂನ್ರಾಂ ತಿರುವಂದಾದೆ - 81) ತಿಳಿಸುತ್ತಾರೆ.
'ಭಗವನ್ನಾಮ ಸ್ಮರಣೆಯನ್ನು ಮಾಡುವವರು ನರಕವನ್ನು ಪಡೆಯುವುದಿಲ್ಲ' ಎಂದು ತೊಂಡರಡಿಪ್ಪೊಡಿ ಆಳ್ವಾರರು (ತಿರುಮಾಲೈ-12) ಸ್ಮರಣ ಭಕ್ತಿಯನ್ನು ಬಹಳವಾಗಿ ಕೊಂಡಾಡಿದ್ದಾರೆ.

4. ಪಾದಸೇವನೆ :-
ಭಗವಂತನ ಪಾದಸೇವೆಯಲ್ಲಿ ಮನಸ್ಸನ್ನು ಕೇಂದ್ರೀಕರಿಸುವುದೇ 'ಪಾದಸೇವನ ಭಕ್ತಿ'. ಇದರಲ್ಲಿ ಬಾಹ್ಯ, ಮಾನಸಿಕ ಎನ್ನುವ ಎರಡು ರೀತಿಯ ಭಕ್ತಿಗಳಿವೆ. ಭಗವದ್ ವಿಗ್ರಹ ಪೂಜೆಯ ಕಾರಣದಿಂದ, ಗುರುಪೂಜೆಯಿಂದ 'ಪಾದಸೇವನ ಭಕ್ತಿ'ಯಲ್ಲಿ ಏಕಾಗ್ರತೆ ಲಭಿಸುತ್ತದೆ. ಅಂತಹ ಏಕಾಗ್ರತೆಯಿಂದ ತನ್ನ ಮಾನಸಿಕ ಜಗತ್ತಿನಲ್ಲಿ ಭಕ್ತನು ಅಪ್ರಾಕೃತವಾದ ಭಗವತ್ ಚರಣಾರವಿಂದಗಳನ್ನು ಸೇವಿಸುವವನು.
ಈ ರೀತಿಯಲ್ಲಿ ಬಾಹ್ಯವಾಗಿ - ಮಾನಸಿಕವಾಗಿ ಭಗವತ್ ಪಾದಸೇವೆ ಮಾಡುವುದರಿಂದ ಲೋಕಾಶ್ರಯವಾದ ಭಾವವು ತೊಲಗಿಹೋಗುವುದು. ಭಗವತ್ ಸೇವೆಯಲ್ಲೆ ಅಂತಹ ಭಕ್ತನ ಮನಸ್ಸು ಸಂಲಗ್ನವಾಗಿರುವುದರಿಂದ, ಲೋಕವೃತ್ತಿಗಳ ಬಗ್ಗೆ ಅವನು ಉದಾಸೀನ ಭಾವವನ್ನು ಹೊಂದಿದವನಾಗುತ್ತಾನೆ.
ವಿವಿಧ ದಿವ್ಯದೇಶಗಳಲ್ಲಿರುವ ಶ್ರೀವೈಷ್ಣವಾಲಯಗಳಲ್ಲಿ ವಿರಾಜಮಾನರಾಗಿರುವ ಭಗವತ್ ಆರ್ಚಾಮೂರ್ತಿಗಳನ್ನು ಆಳ್ವಾರರು ಸೇವಿಸಿದರು. ಮಧುರ ಕವಿ ಆಳ್ವಾರರಿಂದ ರಚಿಸಲ್ಪಟ್ಟಿರುವ 'ಕಣ್ಣಿನುಣ್ ಶಿರುತ್ತಂಬು' ಎನ್ನುವ ಪ್ರಬಂಧದಲ್ಲಿನ ಪಾಶುರಗಳು ಕೇವಲ ಗುರುಪಾದ ಸೇವೆಯ ಭಕ್ತಿಯನ್ನು ಪ್ರಭೋಧಿಸುತ್ತದೆ.
ಭಕ್ತರಾದವರು ಪರಮ ಭಾಗವತೋತ್ತಮರನ್ನು ಸೇವಿಸುವುದು ಸಹಜವಾದುದು. ಆದುದರಿಂದ ಇಂತಹ ಪರಮ ಭಾಗವತೋತ್ತಮರು ಭಗವಂತನಿಗೆ ಸಮಾನರು ಎಂದು ಕುಲಶೇಖಾರಾಳ್ವರರು ತಮ್ಮ ಪೆರುಮಾಳ್ ತಿರುಮೋಷಿ (1-3) ಹಾಗೂ ಮುಕುಂದಮಾಲಾ (5-20)ದಲ್ಲಿನ 'ನಸ್ಥಾ ಧರ್ಮೇ ನ ವಸು ವಿಚಯೇ... ಸತತಂ ಸಂಪದ್ಯತಾಂ ಜೀವಿತಮ್' ಎನ್ನುವ ಸ್ತೋತ್ರ ಭಾಗದಲ್ಲಿ ಸ್ಪಷ್ಟಪಡಿಸಿದ್ದಾರೆ.
ಮಾನಸಿಕವಾದ ಭಗವತ್ ಪಾದಸೇವೆಯು ಭಕ್ತಿಯನ್ನು ಸಾಧಿಸುವುದರಲ್ಲಿ ತುಂಬಾ ಮಹತ್ತರ ಪಾತ್ರವನ್ನು ವಹಿಸುತ್ತದೆ. ಆದುದರಿಂದ ಭಕ್ತರು ಭಗವಂತನ ಚರಣಾರವಿಂದಗಳನ್ನು ತಮ್ಮ ಹೃದಯದಲ್ಲಿ ಪ್ರತಿಷ್ಠಾಪಿಸಿಕೊಂಡು ಅವರನ್ನು ಭಕ್ತಿ ಶ್ರದ್ದೆಗಳಿಂದ ಪೂಜಿಸುವರು. ಆದುದರಿಂದ 'ಹೇ ಭಗವಂತಾ! ನಾನು ನಿನ್ನ ಚರಣ ಸೇವೆಯ ಅಭಿಲಾಷೆಯನ್ನು ಉಳ್ಳವನಾಗಿದ್ದೇನೆ. ನಿನ್ನ ಚರಣಾರವಿಂದಗಳನ್ನು ನನ್ನ ಶಿರಸ್ಸಿನ ಮೇಲೆ ಧರಿಸಿಕೊಂಡು ಧನ್ಯನಾಗುವೆನು' ಎಂದು ಪೊಯ್ ಹೈ ಆಳ್ವಾರರು ( ಮೊದಲ್ ತಿರುವಂದಾದಿ - 88) ತಿಳಿಸಿದ್ದಾರೆ.
'ಭಗವಂತನ ಚರಣಾರವಿಂದಗಳನ್ನು ಸ್ತುತಿಸಲಾರದವರು ಜನನ ಮರಣಗಳಿಗೆ, ರೋಗರುಜಿನಾದಿ ದುಃಖಗಳಿಗೆ, ಇನ್ನೂ ಎಷ್ಟೋ ಕಷ್ಟಪರಂಪರೆಗಳಿಗೆ ಗುರಿ ಆಗಬಲ್ಲರು.' (ಪೆರಿಯ ತಿರುವಂದಾದಿ -80). 'ಹೇ ಭಗವಾನ್! ನಿನ್ನ ಚರಣಾರವಿಂದಗಳನ್ನಲ್ಲದೆ ಮತ್ತೆ ಯಾವುದೂ ಶರಣ್ಯಗಳಾಗಿ ಕಾಣಲಾರವು. ನನ್ನ ಪ್ರಾಣಗಳೆಲ್ಲವೂ ನಿನ್ನದೇ ಎಂದೂ, ಭಕ್ತರಿಗೆ ನಿನ್ನ ಪಾದಸೇವನೆಯೇ ಅವರ ಭಕ್ತಿವಿಧಾನವಾಗಿದೆ' ಎಂದು ನಮ್ಮಾಳ್ವಾರರು (ತಿರುವಾಯ್ ಮೊಷಿ 5-7-10) ಪ್ರಬೋಧಿಸುವರು.
'ಓ ಮನಸ್ಸೇ! ನೀನು ವೇಂಕಟಾಚಲ ನಿವಾಸಿಯಾದ ಶ್ರೀನಿವಾಸ ಚರಣ ಕಮಲಗಳಲ್ಲೆ ಕೇಂದ್ರೀಕರಿಸುವಂತೆ ಮಾಡಿಕೊ! (ಇರಂಡಾಂ ತಿರುವಂದಾದಿ - 72). ಪುರುಷೋತ್ತಮನ ಪಾದಪದ್ಮಗಳೇ ನಿನಗೆ ಶರಣ್ಯಗಳಾದುದರಿಂದ, ನೀನು ನಿರಂತರವಾಗಿ ಆ ಪಾದ ಪದ್ಮಗಳನ್ನೇ ಸ್ಮರಿಸುತ್ತಾ, ಸಂಸೇವಿಸುತ್ತಿರು!' (ಇರಂಡಾಂ ತಿರುವಂದಾದಿ - 77) ಎಂದು ಪೊದತ್ತಾಳ್ವಾರರು ತಮ್ಮ ಮನಸ್ಸನ್ನು ಎಚ್ಚರಿಸುತ್ತಾ, ಹಿತವನ್ನು ಉಪದೇಶಿಸುವರು.
'ಹೇ ಪರಮಾತ್ಮಾ! ನಿನ್ನನ್ನೇ ಸ್ತುತಿಸುತ್ತಾ ರಚಿಸಿದ ಈ ಪಾಶುರಗಳನ್ನು ನಿನ್ನ ಚರಣಾರವಿಂದಗಳಲ್ಲೆ ಸಮರ್ಪಿಸಿ ನಿರಂತರವೂ ನಿನ್ನನ್ನೇ ಸ್ಮರಿಸುತ್ತಾ, ನಿನಗೇ ಶರಣು ಹೊಂದಿದ್ದೇನೆ' (ಪೆರಿಯ ತಿರುಮೊಷಿ 1-6-8) ಎಂದು ತಿರುಮಂಗೈ ಆಳ್ವಾರರು ಪಾದಸೇವನೆಯ ಭಕ್ತಿಯನ್ನು ಅನೇಕ ರೀತಿಗಳಲ್ಲಿ ಪ್ರಶಂಸಿಸಿದ್ದಾರೆ.

5. ಅರ್ಚನೆ :-
ಭಗವತ್ ಸ್ವರೂಪವನ್ನು ಶ್ರದ್ಧಾ ಭಕ್ತಿಗಳಿಂದ ಪೂಜಿಸುವುದೇ 'ಅರ್ಚನ ಭಕ್ತಿ'. ಭಗವಂತನು ದೇವಾಲಯಗಳಲ್ಲಿ ಆರ್ಚಾಸ್ವರೂಪದ ಮುಖಾಂತರ ದರ್ಶನವೀಯುವುದೇ ಅಲ್ಲದೆ, ಸದಾಚಾರ್ಯನ ಹೃದಯದಲ್ಲಿ, ಭಕ್ತನ ಆತ್ಮದಲ್ಲಿಯೂ ಕೂಡ ವಿರಾಜಮಾನನಾಗಿರುತ್ತಾನೆ.
ಈ ಮೂರು ರೀತಿಗಳಲ್ಲಿರುವ ಭಗವತ್ ಸ್ವರೂಪವನ್ನು ಭಕ್ತನು ಗುರ್ತಿಸಿ, ತನಗೆ ಇಷ್ಟವಾದ ದೈವವನ್ನು ಭಕ್ತಿ, ಪ್ರಪತ್ತಿಗಳೊಂದಿಗೆ ಪ್ರತಿನಿತ್ಯವೂ ಪೂಜಿಸುವನು. ಭಕ್ತನು ಭಗವಂತನಿಗೆ ಮಾಡುವ ಎಲ್ಲ ರೀತಿಯ ಸೇವೆಗಳಲ್ಲಿಯೂ ಸ್ವಾರ್ಥದ ಸೋಂಕು ಇಲ್ಲದೆ, ತ್ಯಾಗವನ್ನು ಪ್ರದರ್ಶಿಸುವಂತಿರಬೇಕು.
ಮಾನಸಿಕವಾದ ಅರ್ಚನೆಯಲ್ಲಿ ಭಗವಂತನನ್ನು ಪೂಜಿಸುವಿಕೆ ಹಾಗೂ ಭಗವಂತನಿಗೆ ಆತ್ಮಸಮರ್ಪಣೆ ಮಾಡಿಕೊಳ್ಳುವುದು - ಎನ್ನುವ ಎರಡು ವಿಧಾನಗಳು ಅತಿ ಮುಖ್ಯವಾದವುಗಳು.
ಇಂತಹ ಮಾನಸಿಕವಾದ ಅರ್ಚನೆಯಲ್ಲಿ ಬಾಹ್ಯವಾದ ಉಪಚಾರಗಳು ಅವಶ್ಯಕವಲ್ಲ. ಆದರೆ ಸ್ಥೂಲರೂಪವಾದ ಅರ್ಚನೆಯಲ್ಲಿ ಅನೇಕ ಉಪಚಾರಗಳು ಅವಶ್ಯಕವಾದವುಗಳಾಗಿರುತ್ತವೆ. ಅರ್ಘ್ಯ, ಪಾದ್ಯ, ಆಚಮನೀಯ ಸಹಿತದ ಸ್ನಾನ, ಊರ್ಧ್ವ ಪುಂಡ್ರಧಾರಣೆ, ಚಂದನ, ಪುಷ್ಪ, ಧೂಪ, ದೀಪ, ನೈವೇದ್ಯ ತಾಂಬೂಲಾದಿ ಷೋಡಷೋಪಚಾರಗಳೊಂದಿಗೆ ಅರ್ಚನ ಭಕ್ತಿಯನ್ನು ನಿರ್ವರ್ತಿಸಲ್ಪಡುವುದು. ಅಂತಹ ಅರ್ಚನ ಭಕ್ತಿಗೆ ಸಂಬಂಧಿಸಿದ ಅನೇಕ ಅಂಶಗಳ ಬಗ್ಗೆ ಆಳ್ವಾರರ ದಿವ್ಯಪ್ರಬಂಧಗಳಲ್ಲಿ ವಿವರಣೆಗಳು ಕಂಡುಬರುತ್ತವೆ.
'ಓ ಭಕ್ತರೆ! ಕೇವಲ ಪುಷ್ಪ, ಫಲ, ಜಲ, ಧೂಪಾದಿಗಳನ್ನು ಅರ್ಪಿಸುವುದೇ ಭಗವದರ್ಚನವೇನು? ಭಕ್ತನಿಂದ ಹೃದಯಪೂರ್ವಕವಾಗಿ ಸಮರ್ಪಿಸಲ್ಪಡುವ ಜಲ, ಚಂದನ, ಧೂಪ, ದೀಪಾದಿಗಳಿಂದಲೇನೇ ನಿಜ ಅರ್ಥದ ಭಗವದರ್ಚನೆಯು ಪರಿಪೂರ್ಣವಾಗಬಲ್ಲದು' ಎಂದು ನಮ್ಮಾಳ್ವಾರರು (ತಿರುವಾಯ್ ಮೊಷಿ 1-6-1 ಮತ್ತು 2) ತಿಳಿಸುತ್ತಾರೆ.
ಪತ್ರಂ ಪುಷ್ಪಂ ಫಲಂ ತೋಯಂ ಯೋಮೇ ಭಕ್ತ್ಯಾಪ್ರಯಚ್ಛತಿ |
ತದಹಂ ಭಕ್ತ್ಯುಪಹೃತಂ ಅಶ್ನಾಮಿ ಪ್ರಯತಾತ್ಮನಃ ||9-26 ||
ಎಂದು ಭಗವದ್ಗೀತೆಯಲ್ಲಿ ಹೇಳಿರುವ ಹಾಗೆ ಎಲೆ, ಹೂ, ಹಣ್ಣು, ನೀರು - ಇವುಗಳಲ್ಲಿ ಯಾವುದಾದರೊಮದನ್ನಾದರೂ ಭಕ್ತನು ಪ್ರೇಮದಿಂದ ನನಗೆ ನೀಡುವನೊ, ಅಂತಹ ಪರಿಶುದ್ಧ ಮನಸ್ಕನಿಂದ ಭಕ್ತಿಭಾವದಿಂದ ನೀಡಲ್ಪಡುವ ಆ ಪದಾರ್ಥವನ್ನು ನಾನು ತೆಗೆದುಕೊಳ್ಳುತ್ತೇನೆ'. ತಿಳಿಸಿರುವಂತೆ, ಈ ಭಗವದ್ವಚನಾನುಸಾರ ನಮ್ಮಾಳ್ವಾರರು ತಿಳಿಯಪಡಿಸಿರುವ ಮೇಲಿನ ಭಾವನೆಗಳನ್ನು ಪ್ರಭಾವಿತಗೊಳಿಸಿವೆ ಎಂದು ಭಾವಿಸಬಹುದು.
'ಚಂದನ, ಆಭರಣ, ವಸ್ತ್ರ, ಪುಷ್ಪ - ಇತ್ಯಾದಿಗಳನ್ನು ಸಮರ್ಪಿಸಿ, ಭಗವಂತನ ಪಾದಪದ್ಮಗಳಿಗೆ ನಮಸ್ಕರಿಸಬೇಕು' ಎಂದು ಪೂದತ್ತಾಳ್ವಾರ್ ರವರು ಭಕ್ತಲೋಕಕ್ಕೆ (ಇರಂಡಾಂ ತಿರುವಂದಾದಿ - 76) ಪ್ರಬೋಧಿಸಿದ್ದಾರೆ.
'ಶ್ರೀ ವೇಂಕಟಾಚಲದಲ್ಲಿ ಮಂತ್ರಗಳನ್ನು ಪಠಿಸುತ್ತಾ, ವಿಪ್ರೋತ್ತಮರು ಧೂಪ, ದೀಪ, ಪುಷ್ಪ, ಜಲಾದಿಗಳನ್ನು ಸಮರ್ಪಿಸುತ್ತಿರಲು, ಈ ಮೂಲಕ ವಿವಿಧ ದಿಕ್ಕುಗಳಲ್ಲಿರುವ ಅರ್ಚಾಮೂರ್ತಿಗಳನ್ನು ಪೂಜಿಸಲಾಗುತ್ತದೆ' (ಮೊದಲ್ ತಿರುವಂದಾದಿ - 37) ಎಂದು ಪೂದತ್ತಾಳ್ವಾರರು ತಿಳಿಸಿರುತ್ತಾರೆ. ಹೀಗೆ ಎಲ್ಲ ಆಳ್ವಾರರೂ ಅರ್ಚನಾಭಕ್ತಿಯನ್ನು ವಿಶೇಷವಾಗಿ ಪ್ರಶಂಸಿಸಿದ್ದಾರೆ.

6. ವಂದನೆ :
ಭಗವಂತನ ಮಹಿಮೆಗಳನ್ನು ಮನಸ್ಸಿನಲ್ಲಿ ಧಾರಣೆ ಮಾಡಿಕೊಂಡು, ಅವನನ್ನು ಸ್ತುತಿಸುತ್ತಾ, ವಿನಮ್ರನಾಗಿ, ಆ ಸ್ವಾಮಿಗೆ ಪ್ರಮಾಣವನ್ನು ಮಾಡುವುದೇ 'ವಂದನ ಭಕ್ತಿ'.
ಭಗವಂತನಿಗೆ ಅರ್ಚನೆ ಮಾಡುವ ಸಮಯದಲ್ಲೆ ವಂದನೆಯನ್ನು ಆಚರಿಸುವುದು ಭಕ್ತರು ನಡೆದುಕೊಳ್ಳುವ ರೀತಿಯಾಗಿರುತ್ತದೆ. ಭಗವನ್ನಾಮವನ್ನು ಸಂಕೀರ್ತನೆ ಮಾಡುವ ಸಮಯದಲ್ಲಿ, ಭಕ್ತನ ಹೃದಯದಿಂದ, ಭಕ್ತಿಪ್ರವಾಹವು ಉಕ್ಕಿ ಹರಿಯುವುದು ಸಹಜವೇ ಆಗಿದೆ. ಆಗ ಭಕ್ತನು ಆ ಭಾವಾವೇಶಕ್ಕೆ ಒಳಗಾಗಿ, ತನ್ಮಯತ್ವವನ್ನು ಹೊಂದಿ, ನೃತ್ಯವನ್ನು ಮಾಡುವನು.
ಆಳ್ವಾರರು ಭಗವನ್ನಾಮ ಸಂಕೀರ್ತನೆ ಮಾಡುತ್ತಾ, ಆತನಿಗೆ ನಮಸ್ಕರಿಸಿ, ನೃತ್ಯವನ್ನು ಮಾಡುತ್ತಾ, ಉನ್ಮತ್ತರಂತೆ, ಭಗವಂತನನ್ನು ಕುರಿತು ವಿಲಪಿಸುತ್ತಾ ಇರುತ್ತಾರೆಂದೂ, ಮತ್ತೊಂದು ಸಲ ಈ ರೀತಿಯಲ್ಲೆ ಬ್ರಹ್ಮಾನಂದವನ್ನು ಪಡೆಯುತ್ತಿದ್ದರೆಂದೂ ಅವರ ದಿವ್ಯಪ್ರಬಂಧಗಳಿಂದ ನಮಗೆ ತಿಳಿದು ಬರುತ್ತದೆ.
ಇಂತಹ ವಿಚಿತ್ರ ಸ್ಥಿತಿಯನ್ನು ತಲುಪುವ ಈ ಪರಮಯೋಗಿಗಳ ಪರಿಸ್ಥಿತಿಗಳನ್ನು ಗಮನಿಸುವ ಸಾಮಾನ್ಯ ಜನರು ಇವರನ್ನು ಹುಚ್ಚರೆಂದೇ ಭ್ರಮಿಸುವರು.
ಆದರೆ ಇಂತಹ ಉನ್ಮಾದ ಸ್ಥಿತಿಯನ್ನು ಕುಲಶೇಖರಾಳ್ವಾರರು ಹೊಂದಿದ್ದರೆಂಬುದನ್ನು ಅವರ ಕೃತಿಗಳಿಂದ ನಾವು ತಿಳಿದುಕೊಳ್ಳಬಹುದು (ಪೆರಮಾಳ್ ತಿರುಮೊಷಿ 2-2) 'ಶ್ರೀರಂಗದಲ್ಲಿನ ದೇವಾಲಯದಲ್ಲಿ ವಿರಾಜಮಾನನಾಗಿರುವ ಶ್ರೀರಂಗನಾಥನನ್ನು ನನ್ನ ನಾಲಿಗೆ ಆಯಾಸಗೊಳ್ಳುವವರೆಗೂ ಸ್ತುತಿಸಿ, ಹೂಗಳನ್ನು ಅರ್ಪಿಸಿ, ಆತನ ಚರಣಾರವಿಂದಗಳಲ್ಲಿ ಸಾಷ್ಟಾಂಗ ಪ್ರಣಾಮವನ್ನು ಅರ್ಪಿಸಬೇಕು' (ಪೆರುಮಾಳ್ ತಿರುಮೊಷಿ 1-4) ಎಂಬ ಪಾಶುರದ ಮುಖಾಂತರ ಕುಲಶೇಖರಾಳ್ವಾರರಿಗೆ ವಂದನ ಭಕ್ತಿಯ ಮೇಲೆ ತಮಗಿರುವ ಗಾಢವಾದ ಭಕ್ತಿಯನ್ನು ಪ್ರದರ್ಶಿಸಿದ್ದಾರೆ.
'ಅಹರ್ನಿಶೆಗಳಲ್ಲಿಯೂ ಭಗವಂತನನ್ನು ಧ್ಯಾನಿಸುತ್ತಾ, ನತಮಸ್ತಕನಾಗಿ, ಕೈಗಳನ್ನು ಜೋಡಿಸಿ, ಆ ಸ್ವಾಮಿಗೆ ನಮಸ್ಕಾರವನ್ನು ಅರ್ಪಿಸುವ ಭಕ್ತರು ನಿವಸಿಸುವ ಪ್ರದೇಶಗಳಲ್ಲಿನ ಜನರು ಎಷ್ಟೊಮದು ಅದೃಷ್ಟವಂತರೊ!' ಎಂದು ಪೆರಿಯಾಳ್ವಾರರು (ಪೆರಿಯಾಳ್ವಾರ್ ತಿರುಮೊಷಿ 4-4-7) ವಂದನಾಭಕ್ತಿಯ ಹಿರಿಮೆಯನ್ನು ಪ್ರಶಂಸಿಸಿದ್ದಾರೆ.
'ಓ ಮನಸ್ಸೆ! ನರಸಿಂಹವತಾರಿಯಾಗಿ ತನ್ನ ಭಕ್ತನ ಮೇಲೆ ವಾತ್ಸಲ್ಯ ಭಾವವನ್ನು ತೋರಿದ ವಿಷ್ಣು ಭಗವಾನನಿಗೆ ಪ್ರಣಾಮ ಮಾಡು! ಆ ದೇವ ದೇವನನ್ನು ಸ್ತುತಿಸು!' ಎಂದು ಪೇಯಾಳ್ವಾರರು (ಮೂನ್ರಾಂ ತಿರುವಂದಾದಿ - 95) ತಿಳಿಸುತ್ತಾರೆ.
'ಭಗವಂತನನ್ನು ಸಹಸ್ರನಾಮದೊಂದಿಗೆ ಸ್ಮರಿಸಿ, ಕೈಗಳನ್ನು ಜೋಡಿಸಿ. ಆ ಸ್ವಾಮಿಗೆ ವಂದನೆಯನ್ನು ಅರ್ಪಿಸುವ ಭಕ್ತರಿಗೆ ಎಂದಿಗೂ ನರಕವು ಪ್ರಾಪ್ತವಾಗುವುದಿಲ್ಲ. ಅಂತಹವರಿಗೆ ಯಾವ ವಿಧವಾದ ಕಷ್ಟವೂ, ಕ್ಲೇಶವೂ ಉಂಟಾಗಲಾರದು. ಅಂತಹ ಭಕ್ತರು ಭಕ್ತಿಮಾರ್ಗದ ವಿನಹ ಬೇರೆ ಮಾರ್ಗವನ್ನು ಅನುಸರಿಸಲೊಲ್ಲರು!' ಎಂದು ಪೊಯ್ ಹೈ ಆಳ್ವಾರರು ವಂದನ ಭಕ್ತಿಯನ್ನು ಅನೇಕ ರೀತಿಗಳಲ್ಲಿ (ಮೊದಲ್ ತಿರುವಂದಾದಿ - 65) ಕೊಂಡಾಡಿದ್ದಾರೆ.

7. ದಾಸ್ಯ :
ಭಕ್ತರು ಭಗವದಾಜ್ಞೆಯನ್ನು, ಶಿಷ್ಯರು ಗುರುವಿನ ಅಣತಿಯನ್ನು ಸಕ್ರಮವಾಗಿ ಪಾಲಿಸುವುದೇ 'ದಾಸ್ಯ ಭಕ್ತಿ'. ದಯಾಸಮುದ್ರನಾದ ಭಗವಂತನನ್ನು ತನ್ನ ಸ್ವಾಮಿಯಾಗಿ, ತಂದೆಯಾಗಿ, ಗುರುವಾಗಿ ಭಾವಿಸುವ ಭಕ್ತರು ತಮ್ಮ ಅಜ್ಞಾತ, ದೈನ್ಯ, ದುರ್ಗುಣಗಳು, ದೋಷಗಳನ್ನು ಆ ಪರಮಾತ್ಮನಲ್ಲಿ ನಿವೇದಿಸಿಕೊಂಡು, ತಮ್ಮನ್ನು ರಕ್ಷಿಸಬೇಕೆಂದು ಅನೇಕ ರೀತಿಗಳಲ್ಲಿ ಪ್ರಾರ್ಥಿಸುವರು. ಭಗವನ್ನಾಮಗಳನ್ನು ಪರಿಪೂರ್ಣವಾಗಿ ಗ್ರಹಿಸಿ, ಆ ಸ್ವಾಮಿಯ ಸಾನ್ನಿಧ್ಯದಲ್ಲಿ ತಮ್ಮ ಅನನ್ಯಾಶ್ರಮ ಪ್ರವೃತ್ತಿಯನ್ನು ಪ್ರಕಟಿಸಿ, ಅನೇಕ ರೀತಿಗಳಲ್ಲಿ ಆತನ ಕಲ್ಯಾಣಗುಣಗಳನ್ನು ಸ್ಮರಿಸುತ್ತಾ, ಆ ಪರಾತ್ಪರನ ಕೃಪಾಕಟಾಕ್ಷವನ್ನು ಹೊಂದುವುದಕ್ಕೆ ನಿರಂತರವಾಗಿ ಪರಿತಪಿಸುವರು.
ಆಳ್ವಾರರಲ್ಲಿ ಕೆಲವರು ಇಂತಹ ದಾಸ್ಯಭಕ್ತಿಯನ್ನು ವಿಶೇಷವಾಗಿ ಕೊಂಡಾಡಿದ್ದಾರೆ. ಅವರ ಪಾಶುರಗಳಲ್ಲಿ ಸ್ವಯಂಕೃತ ಅಪರಾಧಗಳ ಪ್ರಕಟಣೆ, ವಿನಯ, ಯಾಚನೆ, ದೈನ್ಯ, ಆತ್ಮ ಸಮರ್ಪಣ, ಭಗವದನುಭೂತಿ ಇತ್ಯಾದಿ ಭಾವನೆಗಳು ದಾಸ್ಯ ಭಕ್ತಿಗೆ ಅಂಗಗಳಾಗಿ ಹೆಸರಸಲಾಗಿದೆ.
'ಓ ಮನಸ್ಸೇ! ಮೂರ್ಖರ ಮಾತುಗಳನ್ನು ಕೇಳಬೇಡ. ಗೋಪಾಲ ಕೃಷ್ಣನ ದಾಸ್ಯವನ್ನು (ಸೇವಕತ್ವವನ್ನು) ಕೈಗೊಂಡು, ಧನ್ಯತೆಯನ್ನು ಪಡೆ. ಪ್ರಾರಂಭದಲ್ಲಿ ಪ್ರಾಕೃತ ಸಾಂಗತ್ಯವನ್ನು ಹೊಂದಿ, ಅಪ್ರಾಕೃತನಾದ ಭಗವಂತನಿಗೆ ವಿಮುಖವಾದ ಓ ಮನಸ್ಸೇ, ಇಂದು ನೀನು ಯಾವ ಪರಮಾತ್ಮನ ದಾಸ್ಯವನ್ನು ಸ್ವೀಕಾರ ಮಾಡಿದೆಯೋ, ಅಂತಹ ಪರಮಾತ್ಮನಿಗೆ ಬ್ರಹ್ಮರುದ್ರೇಂದ್ರಾದುರುಗಳು, ಭಕ್ತರುಗಳು ಪ್ರತಿನಿತ್ಯವೂ ದಾಸ್ಯವನ್ನೇ ಮಾಡುತ್ತಿದ್ದಾರಪ್ಪಾ!' ಎಂದು ತಿರುಮಂಗೈ ಆಳ್ವಾರರು ( ಪೆರಿಯ ತಿರುಮೊಷಿ 2-1-8 ಮತ್ತು 9) ತಮಗೆ ಭಗವದ್ಧ್ಯಾನದಲ್ಲಿ ತಮಗಿರುವ ಪ್ರಗಾಢವಾದ ಆಕಾಂಕ್ಷೆಯನ್ನು ತೋಡಿಕೊಳ್ಳುತ್ತಾರೆ.
ಇದೇ ರೀತಿಯಲ್ಲಿ ತಿರುಮಳಿಶೈ ಆಳ್ವಾರರೂ ಕೂಡ, 'ಓ ಭಗವಂತಾ! ನೀನು ನನಗೆ ಪ್ರೇಮಸ್ವರೂಪನೆಂದೂ, ಅಮೃತಸ್ವರೂಪನೆಂದೂ, ಅದೂ, ಇದೂ ಎಂದೇಕೆ ಕರೆಯುವುದು? ನೀನೇ ನನ್ನ ಸರ್ವಸ್ವವಾಗಿ ಕಾಣಿಸುತ್ತಿರುವೆ. ಓ ಕೇಶವಾ! ನಾನು ನಿನ್ನ ಆಜ್ಞೆಯನ್ನು ಪಾಲಿಸಲು ಸಿದ್ಧನಾಗಿಯೇ ಇದ್ದೇನೆ. ಆದುದರಿಂದ ನೀನು ನನ್ನನ್ನು ಪರಿಗ್ರಹಿಸು. ಈಗಲೇ ಅಲ್ಲ, ಸರ್ವಕಾಲದಲ್ಲಿ ಸರ್ವಾವಸ್ಥೆಗಳಲ್ಲಿಯೂ ನೀನೇ ನನಗೆ ಶರಣ್ಯನು. ನೀನಿಲ್ಲದೆ, ನನಗೆ ಬೇರೆ ಯಾರೂ, ಯಾವುದೂ ಗತಿ ಇಲ್ಲ - ಎಂಬ ಸತ್ಯವನ್ನು ತಿಳಿದುಕೊಂಡಿದ್ದೇನೆ.' ಎಂದು (ನಾನ್ಮುಗನ್ ತಿರುವಂದಾದಿ - 59) ಭಗವಂತನ ಮೇಲೆ ತಮಗಿರುವ ಅಚಂಚಲವಾದ ದಾಸ್ಯಭಕ್ತಿ ಭಾವವನ್ನು ಸ್ಪಷ್ಟವಾಗಿ ತಿಳಿಯಪಡಿಸಿದ್ದಾರೆ.
ಇದೇ ರೀತಿಯಲ್ಲಿ ನಮ್ಮಾಳ್ವಾರರೂ ಕೂಡ ಭಗವಂತನಲ್ಲಿ ನಿವೇದಿಸಿಕೊಂಡಿದ್ದಾರೆ. 'ನಾವೆಲ್ಲರೂ ಭಗವಂತನಿಗೆ ಚಿರಕಾಲದ ದಾಸರು ತಲೆತಲಾಂತರಗಳಿಂದಲೂ ಭಗವಂತನಿಗೆ ದಾಸರಾಗಿಯೇ ಇದ್ದೇವೆ. ಆ ಪರಮಾತ್ಮನಿಗೆ ಸೇವೆ ಮಾಡಿದ ಕಾರಣದಿಂದಲೇನೆ ನಾವೆಲ್ಲರೂ ಧನ್ಯರಾದೆವು' (ತಿರುವಾಯ್ಮೊಷಿ 3-3-1) ಎಂದು, ದಸ್ಯಭಕ್ತಿಗೆ ಇರುವ ಪ್ರಾಮುಖ್ಯತೆಯನ್ನು, ಅದರಿಂದ ಉಂಟಾಗುವ ಮಹಾಫಲವನ್ನು ಅವರು ವಿವರಿಸಿದ್ದಾರೆ.
ಅವರು ಮುಂದುವರೆದು, 'ಓ ಪರಮಾತ್ಮನೆ! ನೀನೇ ನನ್ನ ತಂದೆ, ನನ್ನ ತಾಯಿ! ನನ್ನ ಸರ್ವಸ್ವವೂ ನೀನೇ ಆಗಿರುವೆ.' (ಪೆರಿಯ ತಿರುವಂದಾದಿ -4) ಎಂದು ಭಗವಂತನನ್ನೇ ತಮ್ಮ ಸರ್ವಸ್ವವೆಂದು ಭಾವಿಸಿ, ಆ ಸ್ವಾಮಿಯ ಪಾದಾರವಿಂದಗಳನ್ನು ಸೇವಿಸುವುದರಲ್ಲೆ ವಿಶೇಷವಾದ ಆಸಕ್ತಿಯನ್ನು ಹೊಂದಿದ್ದರೆಂದು ತಿಳಿಸಿದ್ದಾರೆ.
ತೊಂಡರಡಿಪ್ಪೊಡಿಯಾಳ್ವಾರರು ತಿಳಿಸಿರುವ ದಾಸ್ಯಭಕ್ತಿ ಭಾವನೆಗಳಂತೂ ಎಲ್ಲರೂ ತಪ್ಪದೆ ಗಮನಿಸಲೇಬೇಕಾದ ಅಂಶಗಳಾಗಿವೆ.
'ಓ ಭಗವಂತಾ! ನನಗೆ ಗೃಹ, ಆರಾಮಕ್ಷೇತ್ರ - ಇತ್ಯಾದಿಗಳು ಯಾವುವೂ ಇಲ್ಲವು. ಬಂಧುಗಳಂತೂ ಯಾರೂ ಇಲ್ಲ. (ಪುರಂದರ ದಾಸರು ಕಂಡು ಕಂಡು ನೀ ಎನ್ನ ಕೈಬಿಡುವರೆ ರಂಗಾ!' ಎನ್ನುವ ಕೀರ್ತನೆಯಲ್ಲಿ ಇದೇ ಭಾವವನ್ನು ತೋಡಿಕೊಂಡಿದ್ದಾರೆ.) ಆದರೆ ಕರುಣಾಚಿತ್ತನಾದ ನೀನು ಒಬ್ಬನು ಮಾತ್ರವೇ ನನಗೆ ಆತ್ಮಬಂಧುವಾಗಿ ನಿಂತಿರುವೆ. ಅಶಾಶ್ವತವಾದ ನನ್ನ ಜೀವನದಲ್ಲಿ ಇಷ್ಟರವರೆಗೆ ನಿನ್ನ ಚರಣಾರವಿಂದಗಳಿಗೆ ಶರಣಾಗಿದ್ದಿರಲಿಲ್ಲವೆಂದು ಈಗ ನಾನು ತುಂಬಾ ಚಿಂತೆಗೀಡಾಗಿದ್ದೇನೆ. ನನಗೆ ಆಧಾರಭೂತನಾಗಿರುವವನು ನೀನೇ ಹೊರತು, ಬೇರೆ ಇನ್ಯಾರಿದ್ದಾರೆ? (ತಿರುಮಾಲೈ-29)
'ನನ್ನ ಮನಸ್ಸಿನಲ್ಲಿ ಅಣುಮಾತ್ರವೂ ಪವಿತ್ರತೆ ಎನ್ನುವುದು ಇಲ್ಲ. ನನ್ನ ನಾಲಿಗೆಯಿಂದ ಒಂದಾದರೂ ಒಳ್ಳೆಯ ಮಾತು ಬಂದುದಿಲ್ಲ. ಕೋಪಿಷ್ಟನಾದುದರಿಂದಲೇ ನನ್ನಲ್ಲಿನ ದ್ವೇಷಬುದ್ಧಿಯು ಹದ್ದುಮಿರಿ ಹೋಗಿದೆ. ಇತರರನ್ನು ಕೆಟ್ಟ ನೋಟದಿಂದ ನೋಡುವುದು, ಆಡಬಾರದು ಮಾತುಗಳನ್ನು ಆಡುವ ನಡವಳಿಕೆಯನ್ನು ಅನುಸರಿಸಿದ್ದೇನೆ. ಇಂತಹ ನನಗೆ ಎಂತಹ ಗತಿ ಉಂಟಾಗುವುದೋ ಯಾರಿಗೆ ಗೊತ್ತು? ನನ್ನ ಮೇಲೆ ಸರ್ವಾಧಿಪತ್ಯವನ್ನು ಹೊಂದಿರುವ ಸ್ವಾಮಿಯೇ! ನೀನೇ ಹೇಳು...! (ತಿರುಮಾಲೈ - 30).... ಓ ಪರಮಾತ್ಮಾ! ನಿನ್ನ ದರ್ಶನ ಭಾಗ್ಯವನ್ನು ಹೊಂದುವುದಕ್ಕಾಗಿ ಸೂಕ್ತಮಾರ್ಗಕ್ಕೆ ವಿಮುಖನಾಗಿರುವವರ ಸ್ನೇಹವನ್ನು ಮಾಡಿರುವೆನು! ಮೂರ್ಖನಾಗಿರುವೆ! ಮೂರ್ಖರಲ್ಲಿಯೂ ಅಧಮನು! ನಿನ್ನಲ್ಲೀಗ ಶರಣು ಹೊಂದುತ್ತಿದ್ದೇನೆ.' (ತಿರುಮಾಲೈ-32) ಎಂದು ತೊಂಡರಡಿಪ್ಪೊಡಿ ಆಳ್ವಾರರು ತಮ್ಮಲ್ಲಿದ್ದ ದೋಷಗಳ ಬಗ್ಗೆ ಹೇಳಿಕೊಳ್ಳುತ್ತಾ, ದೈನ್ಯ ಭಾವದೊಂದಿಗೆ ಭಗವಂತನಲ್ಲಿ ಶರಣಾಗತಿಯನ್ನು ಯಾಚಿಸುತ್ತಾರೆ.
ಇಂತಹ ನೋವಿನಿಂದ ಕೂಡಿದ ಭಕ್ತನ ಹೃದಯದಲ್ಲಿ ಭಗವತ್ ಸೇವೆಗಾಗಿ ಹಾತೊರೆಯುವ ಆಳ್ವಾರರ ಪಾಶುರಗಳಲ್ಲಿ ಆ ತವಕ ಸ್ಪಷ್ಟವಾಗಿ ಕಾಣಿಸುತ್ತಲೇ ಇದೆ.
ಅಂಡಾಳ್ ಕುಡ ತಾನು ಗೋವಿಂದನ ದಾಸಿಯೆಂದು ಹೇಳಿಕೊಂಡಿದ್ದಾಳೆ. (ನಾಚ್ಚಿಯಾರ್ ತಿರುಮೊಷಿ 1-9).
ಆದುದರಿಂದ ಆಳ್ವಾರರು ವಂದನ ಭಕ್ತಿಗೆ ಎಷ್ಟೊಂದು ಪ್ರಾಮುಖ್ಯತೆಯನ್ನು ನೀಡಿದ್ದರು ಎಂಬುದು ಸುಲಭವಾಗಿ ಅರ್ಥವಾಗುತ್ತದೆ.

8. ಸಖ್ಯ :
ಲೌಕಿಕ ವ್ಯವಹಾರದಲ್ಲಿ ನಾವು ತೋರುವ ಆದರ್ಶ ಮೈತ್ರಿಯನ್ನು ತೋರಿಸುವುದಕ್ಕೆ 'ಸಖ್ಯ ಭಕ್ತಿ' ಎಂದು ಹೆಸರು. ಮೈತ್ರಿಯಲ್ಲಿಯ ಉನ್ನತಾಶಯಗಳನ್ನು ಅನುಸರಿಸಿ ನಡೆದುಕೊಳ್ಳುವ ಮಿತ್ರರ ನಡುವೆ ಯಾವುದೇ ರೀತಿಯ ಸ್ವಾರ್ಥವೂ ಇರಲಾರದು. ಸಖ್ಯ ಭಾವದಿಂದ ನಿಸ್ವಾರ್ಥ ಭಕ್ತಿಗೆ ಪರಿಪುಷ್ಟಿ ಏರ್ಪಡುತ್ತದೆ. ವಾತ್ಸಲ್ಯ ಭಾವವನ್ನು ಹೊಂದಿರುವ ಭಕ್ತರುಗಳು ಭಗವಂತನ ಬಗ್ಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಪ್ರದರ್ಶಿಸುವಂತೆಯೆ, ಸಖ್ಯ ಭಾವವನ್ನು ಹೊಂದಿರುವ ಭಕ್ತರು ಭಗವಂತನ ಸನ್ನಿಧಾನದಲ್ಲಿ, ತಮ್ಮ ತಮ್ಮ ಮನಸ್ಸುಗಳಲ್ಲಿರುವ ಸತ್ಸಂಕಲ್ಪಗಳನ್ನು ಹೊರಸೂಸುವ ಸಂದರ್ಭಗಳಲ್ಲಿ ಸಂಕೋಚವಾಗಲಿ, ಭಯವಾಗಲಿ ತೋರುವುದಿಲ್ಲ. ಅಂತೆಯೇ ಚಿಕ್ಕವರು-ದೊಡ್ಡವರು ಎನ್ನುವ ಭೇದಭಾವವನ್ನು ಕೂಡ ಹೊಂದಿರುವುದಿಲ್ಲ. ಈ ಕಾರಣದಿಂದ ಭಕ್ತ-ಭಗವಂತರುಗಳ ನಡುವೆ ಸಮಾನಭಾವವಿರುತ್ತದೆ. ಈ ಸಮಾನ ಭಾವನೆ 'ಸಖ್ಯ ಭಾವ'ದಲ್ಲಿರುವ ವಿಶೇಷತೆ.
ನಾರದ ಭಕ್ತಿ ಸೂತ್ರಗಳಲ್ಲಿ ಇಂತಹ ಪ್ರೇಮಾಸಕ್ತಿ ಹನ್ನೊಂದು ರೀತಿಗಳಲ್ಲಿ ಇರುತ್ತದೆಯೆಂದು ತಿಳಿಸಿ, ಅವುಗಳಲ್ಲಿ 'ಸಖ್ಯಾಸಕ್ತಿ'ಯೂ ಒಂದೆಂದು ತಿಳಿಸಲಾಗಿದೆ.
ಕೃಷ್ಣನ ಬಾಲಲೀಲೆಗಳು, ಗೋವುಗಳನ್ನು ಮೇಯಿಸುವ ಸಮಯದಲ್ಲಿ ಗೋಪಬಾಲರೊಂದಿಗೆ ಸ್ನೇಹದಿಂದ ಇದ್ದು, ವಿವಿಧ ಪ್ರಸಂಗಗಳಲ್ಲಿ ನಗಿಸುವ ಸನ್ನಿವೇಶಗಳು, ಪಂಕ್ತಿ ಭೋಜನ ಮಾಡುವಿಕೆ ಇತ್ಯಾದಿ ಸನ್ನಿವೇಶಗಳನ್ನು ಭಕ್ತಕವಿಗಳು ವರ್ಣಿಸುವಾಗ, ಆಳ್ವಾರರ ದಿವ್ಯಪ್ರಬಂಧಗಳಲ್ಲಿನ ಸಖ್ಯ ಭಕ್ತಿ ಭಾವವು ಅತ್ಯಂತ ಮನೋಜ್ಞವಾಗಿ ಅಭಿವ್ಯಕ್ತಗೊಳಿಸಲಾಗಿದೆ.
ಕೃಷ್ಣನು ತನ್ನ ಸ್ನೇಹಿತರೊಂದಿಗೆ ಕಲೆತು, ಮೆಲೆತು ಅವರೊಂದಿಗೆ ಕೂಡಿ ಸಂಚರಿಸುತ್ತಲೆ ತನ್ನ ಲೀಲೆಗಳನ್ನು ತೋರಿಸುವನು. ಬೆಣ್ಣೆಯನ್ನು ಕದಿಯುವಾಗ ತನ್ನ ಸ್ನೇಹಿತರ ಸಹಾಯವನ್ನು ಪಡೆಯುವನು. (ಪೆರಿಯ ತಿರುಮೊಳಿ 2-9) ಗೋವುಗಳನ್ನು ಮೇಯಿಸುವ ಸಮಯದಲ್ಲಿ ತನ್ನ ಸ್ನೇಹಿತರ ಮೇಲೆ ವಿಶೇಷ ಪ್ರೇಮವನ್ನು ತೋರಿಸುತ್ತಿದ್ದನು ಸಖ್ಯಪ್ರೇಮಕ್ಕೆ ವಶನಾದ ಕೃಷ್ಣನು ತನ್ನ ಸಹಚರರಿಂದಲೇ ಗೋವುಗಳನ್ನು ಮೇಯಿಸುತ್ತಿದ್ದನು. ಅವರುಗಳ ತೃಪ್ತಿಗಾಗಿ, ಸಂತೋಷಾತಿರೇಕದಿಂದ ಅವರೊಂದಿಗೆ ಆಟವಾಡುತ್ತಿದ್ದನು, ಹಾಡುಗಳನ್ನು ಹಾಡುತ್ತಿದ್ದನು, ನಾಟ್ಯವಾಡುತ್ತಿದ್ದನು, ಪ್ರಸಾದ ಸ್ವೀಕರಿಸುತ್ತಿದ್ಅನು. (ಪೆರಿಯಾಳ್ವಾರ್ ತಿರುಮೊಷಿ 3-4-1).
ಒಂದು ದಿನ ಕೃಷ್ಣನು ಗೋಪಾಲರೊಡಗೂಡಿ, ಅರಣ್ಯದಿಂದ ಗೋವುಗಳನ್ನು ಮೇಯಿಸಿಕೊಂಡು ಬಂದು, ಮುರುಳೀಗಾನವನ್ನು ಮಾಡುವನು. ಆ ಗಾನಮಾಧುರ್ಯವು ಆ ಪರಿಸರ ಪ್ರದೇಶಗಳಲ್ಲಿನ ಎಲ್ಲರನ್ನ ಮುಗ್ಧರಾಗಿಸುತ್ತಿತ್ತು. ವಿವಿಧ ವಾದ್ಯಗಳನ್ನು ನುಡಿಸುತ್ತಾ ಬರುವ ಗೋಪಬಾಲರೊಂದಿಗೆ ಕೃಷ್ಣನೂ ಕೂಡ ಕಲೆತು ಬರುವ ದೃಶ್ಯ ಆಕರ್ಷಕ. (ಪೆರಿಯಾಳ್ವಾರ್ ತಿರುಮೊಷಿ 34-2)
ಕೃಷ್ಣನ ಸಹಾಯಕರಾದ ಗೋಪಬಾಲರು ಚಿಕ್ಕಚಿಕ್ಕ ಬಿಲ್ಲುಬಾಣಗಳು, ಧನಸ್ಸುಗಳು, ಪಾದರಕ್ಷೆಗಳು, ಉತ್ತರೀಯಗಳು - ಇತ್ಯಾದಿಗಳನ್ನು ಕೃಷ್ಣನಿಗೆ ಬೇಕೆನಿಸಿದಾಗ ನಿಡುವುದಕ್ಕಾಗಿ ತಮ್ಮ ಕೈಗಳಲ್ಲಿ ಹಿಡಿದುಕೊಂಡು, ಆ ಕೃಷ್ಣನ ಹಿಂದೆ ಹಿಂದೆಯೇ ಬರುತ್ತಿದ್ದರು.
ಕೃಷ್ಣನು ಒಂದು ಕೈಯನ್ನು ತನ್ನ ಪ್ರಾಣಮಿತ್ರರ ಕೈಗಳಲ್ಲಿ ಇರಿಸಿಕೊಂಡು, ಇನ್ನೊಂದು ಕೈನಲ್ಲಿ ಗೋವುಗಳನ್ನು ಕರೆಯುವುದಕ್ಕಾಗಿ ಉಪಯೋಗಿಸುವ ಶಂಖವನ್ನು ಹಿಡಿದುಕೊಂಡು, ಗೋಕುಲಕ್ಕೆ ಹಿಂತಿರುಗಿ ಬರುವ ದೃಶ್ಯ ನಯನ ಮನೋಹರ.
ನವಿಲಿನ ಪಿಂಪ್ರದಿಂದ ಶೋಭಿಸುವ ಕೇಶಪಾಶದೊಂದಿಗೆ ಮನೋಹರಗೊಂಡಿರುವ ಕೃಷ್ಣನು ತನ್ನ ಸಹಚರರೆಲ್ಲರಿಗಿಂತ ಮುಂದುಗಡೆ ನಿಂತು, ವೇಣುನಾದದೊಂದಿಗೆ ನೃತ್ಯ ಮಾಡುತ್ತಾ ಬರುತ್ತಿರುವ ದೃಶ್ಯ ವರ್ಣಿಸಲಸದಳ. (ಪೆರಿಯಾಳ್ವಾರ್ ತಿರುಮೊಷಿ 3-4-3)
ಈ ರೀತಿಯಲ್ಲಿ ಕೃಷ್ಣ ಹಾಗೂ ಅವನ ಗೋಪಬಾಲರ ಸ್ನೇಹವನ್ನು ಪೆರಿಯಾಳ್ವಾರರು ಬಹು ರಮ್ಯವಾಗಿ ತಮ್ಮ ಕೃತಿಯಲ್ಲಿ ವರ್ಣಿಸಿದ್ದಾರೆ.

9. ಆತ್ಮನಿವೇದನೆ :
'ಪ್ರಪತ್ತಿ'ಯೇ ಆತ್ಮನಿವೇದನೆ. ಇದನ್ನು 'ಶರಣಾಗತಿ' ಎಂದೂ ಕರೆಯಬಹುದು. ಅನನ್ಯ ಸಾಧ್ಯವಾದ ಭಗವತ್ ಪ್ರಪತ್ತಿಯಲ್ಲಿ ವಿಶ್ವಾಸಪೂರ್ವಕವಾಗಿ ಭಗವಂತನೊಬ್ಬನನ್ನೇ 'ಉಪಾಯ'ವಾಗಿ ಭಾವಿಸಿ, ಪ್ರಾರ್ಥಿಸುವ ನಿಶ್ಚಯಾತ್ಮಕ ಬುದ್ಧಿಯೇ 'ಆತ್ಮನಿವೇದನೆ' ಎಂದು ಹೇಳಲಾಗುವುದು. ಇಂತಹ ಆತ್ಮನಿವೇದನಕ್ಕೆ ಸಂಬಂಧಪಟ್ಟ ಅಂಶಗಳು ಆಳ್ವಾರರ ದಿವ್ಯಪ್ರಬಂಧಗಳಲ್ಲಿ ಅನೇಕವಿವೆ.
'ಮಾನವನು ಒಂದು ಕೆರೆಯನ್ನು ನಿರ್ಮಿಸಬಲ್ಲನೆ ಹೊರತು, ಭಗವದುಗ್ರಹ ರೂಪವಾದ ಮಳೆ ಸುರಿದಾಗಲೇ ಆ ಕೆರೆಯು ನೀರಿನಿಂದ ತುಂಬಬಲ್ಲದಲ್ಲವೆ? ಆದುದರಿಂದ, ಭಗವಂತನ ಅನುಗ್ರಹದ ಮೇಲೆಯೇ ಮಾನವ ಪ್ರಯತ್ನಗಳೆಲ್ಲವೂ ಆಧಾರಪಟ್ಟಿರುತ್ತದೆ' ಎಂದು ಪೂದತ್ತಾಳ್ವಾರ್ ರವರು (ಇರಂಡಾಂ ತಿರುವಂದಾದಿ - 16) ತಿಳಿಸುವರು.
'ಓ ಪರಮಾತ್ಮಾ! ಸಮಸ್ತ ವಿಶ್ವವೂ ನೀನೇ ಆಗಿರುವೆ. ವಿಶ್ವವೆಲ್ಲವೂ ನಿನ್ನ ಮೇಲೆಯೇ ಆಧಾರಪಟ್ಟದೆ. ದಯಾನಿಧಿಯಾದ ನೀನೇ ಭಕ್ತರ ಹೃದಯಗಳಲ್ಲಿ ಭಕ್ತಿ ಬೀಜವನ್ನು ನೆಡುತ್ತಿರುವೆ' ಎಂದು ತಿರುಮಂಗೈ ಆಳ್ವಾರರು (ನಾನ್ಮುಗನ್ ತಿರುವಂದಾದಿ - 14) ತಿಳಿಸುತ್ತಾರೆ.
'ಓ ಭಗವಂತನೆ! ನಾನು ಎಷ್ಟೋ ಕಷ್ಟಗಳನ್ನು ಅನುಭವಿಸುತ್ತಿದ್ದೇನೆ. ಶರಣಾಗತ ರಕ್ಷಕನಾದ ನಿನ್ನಲ್ಲಿ ಶರಣು ಹೋಗುವುದರ ವಿನಹ ಬೇರೆ ಯಾವ ರೀತಿಯಲ್ಲೂ ನನ್ನ ಕಷ್ಟಗಳು ದೂರವಾಗಲಾರವು. ತಾಯಿಯ ಕೋಪಕ್ಕೆ ಗುರಿಯಾಗಿ ದೂರ ಹೋಗಿದ್ದ ಮಗನು ಮತ್ತೆ ತಾಯಿಯ ಲಾಲನೆಯನ್ನು ಕೋರಿ, ಹೆತ್ತ ತಾಯಿಯನ್ನು ಸಮಿಪಿಸಲಿಚ್ಚಿಸುವ ರೀತಿಯಲ್ಲಿ ನಾನು ನಿನ್ನ ಚರಣಾರವಿಂದಗಳ ಸನ್ನಿಧಿಯಲ್ಲಿ ಶರಣು ಹೊಂದುತ್ತಿದ್ದೇನೆ' ಎಂದು ಶೇಖರಾಳ್ವಾರರು (ಪೆರುಮಾಳ್ ತಿರುಮೊಷಿ 5-1) ಭಗವಂತನನ್ನು ಬಿನ್ನವಿಸಿಕೊಳ್ಳುತ್ತಾರೆ.
ಈ ರೀತಿಯಲ್ಲಿ ತಾವು ಶರಣು ಕೋರುವ ಸರ್ವೇಶ್ವರನು ಪರಮಾತ್ಮನೊಬ್ಬನೇ. ಅವನನ್ನೇ ನಾವೆಲ್ಲರೂ ಆಶ್ರಯಿಸಬೇಕು ಎಂದು ಎಲ್ಲ ಆಳ್ವಾರರೂ ಪ್ರಬೋಧಿಸುತ್ತಾರೆ.
ಈ ರೀತಿಯಲ್ಲಿ ನವವಿಧ ಭಕ್ತಿಗಳಲ್ಲಿ ಆಳ್ವಾರರು ತಮ್ಮ ತೆರೆದ ಹೃದಯವನ್ನು ತಮ್ಮ ರಚನೆಗಳಲ್ಲಿ ಅಂತರಾಳದಿಂದ ತೆರೆದು ತೋರಿಸಿ, ತಮ್ಮ ವಿನೀತ ಪೂರ್ವಕ ಭಕ್ತಿಯನ್ನು ತೋರ್ಪಡಿಸಿರುವುದು ಅಸದೃಸವಾಗಿದೆ.