Aditya Hrudayam Meaning In Kannada
ಆದಿತ್ಯ ಗಾಯತ್ರಿ

ಓಂ ಭಾಸ್ಕರಾಯ ವಿದ್ಮಹೇ ಮಹದ್ದ್ಯುತಿಕರಾಯ ಧೀಮಹಿ । ತನ್ನೋ ಆದಿತ್ಯಃ ಪ್ರಚೋದಯಾತ್ ।।

ಆದಿತ್ಯ ದೇವತಾ ಮಂತ್ರಃ

ಘೃಣಿಸ್ಸೂರ್ಯ ಆದಿತ್ಯೋ ನ ಪ್ರಭಾವಾತ್ಯಕ್ಷರಮ್ । ಮಧುಕ್ಷರಂತಿ ತದ್ರಸಮ್ । ಸತ್ಯಂ ವೈ ತದ್ರಸಮಾಪೋ ಜ್ಯೋತೀ
ರಸೋsಮೃತಂ ಬ್ರಹ್ಮ ಭೂರ್ಭುವಸ್ಸುರೋಹಮ್ ।।

ಮುನ್ನುಡಿ

ಸೂರ್ಯದೇವನ ಸ್ತುತಿಯಾದ ಆದಿತ್ಯಹೃದಯವು ಅಗಸ್ತ್ಯ ಮುನಿಗಳ ಕೃತಿಯೆಂದು ಪ್ರಸಿದ್ಧ . ಇದು ವಾಲ್ಮೀಕಿ ರಾಮಾಯಣದ ಯುದ್ಧಕಾಂಡದಲ್ಲಿ ಬರುವುದು .

ಮೊದಲನೆಯ ಎರೆಡು ಶ್ಲೋಕಗಳು ಈ ಸ್ತೋತ್ರವು ಶ್ರೀಮಾರನಿಗೆ ಅರ್ಪಿತವಾದಾಗಿನ ಸನ್ನಿವೇಶವನ್ನು ವರ್ಣಿಸುತ್ತವೆ . ರಾವಣನ ಸಾರಥಿಯು ತನ್ನೊಡೆಯನ ಪ್ರಾಣ ರಕ್ಷಣೆಗಾಗಿ ರಥವನ್ನು ರಣರಂಗದಿಂದ ದೂರ ಒಯ್ದ ಕಾರಣ, ಶ್ರೀ ರಾಮ ರಾವಣರ ಸಂಗ್ರಾಮದಲ್ಲಿ ಅನಿರೀಕ್ಷಿತ ವಿರಾಮ ಒದಗಿತ್ತು . ಆಗ ಮನುಷ್ಯ ಮಾತ್ರನಿಂದ ಜಯಸಲಸಾಧ್ಯನಾದ ಪ್ರಬಲ ರಾವಣನ ಸಂಹಾರದ ಪರಿಯನ್ನು ಕುರಿತು ಆಲೋಚನ ರತನಾಗಿದ್ದ ಶ್ರೀರಾಮಚಂದ್ರ , ದೇವತೆಗಳಿಂದಲೂ ಅಜೇಯನಾಗುವ ವರವನ್ನು ಬೇರೆ ಪಡೆದಿದ್ದ ರಾವಣ . ಶ್ರೀರಾಮನಿಗೆ ತನ್ನ ದೈವತ್ವದ ಅರಿವಿದ್ದರೂ , ತನ್ನ ಅವತರಣದ ಕಾರ್ಯಸಿದ್ಧಿಗಾಗಿ ಮನುಷ್ಯತ್ವದ ಮೇಲೆ ಒತ್ತು ನೀಡಿ ದುಷ್ಟಸಂಹಾರವನ್ನು ಮಾಡಬೇಕಿತ್ತು .

ಇಂತಹ ದ್ವಂದ್ವದಲ್ಲಿ ಸಿಲುಕಿದ ಶ್ರೀರಾಮನಿಗೆ ಈ ಸ್ತೋತ್ರದ ಮೂಲಕ ವೇದಾಂತದ ತತ್ತ್ವವಾದ "ಜೀವೋ ಬ್ರಹ್ಮೈವ ನಾಪರಃ " 'ಜೀವಾತ್ಮನೂ ಪರಮಾತ್ಮನೂ ಒಂದೇ , ಬೇರೆಯಲ್ಲ 'ಎಂಬುದನ್ನು ಅಗಸ್ತ್ಯ ಮಹರ್ಷಿಗಳು
ಉಪದೇಶಿಸಿದರು . ಮನುಷ್ಯಸಾಮಾನ್ಯರ ವಿಷಯದಲ್ಲಿ ಹೇಳುವುದಾದರೆ ,ಅವರು ದೈವತ್ವಕ್ಕೆ ಏರುತ್ತಾರೆ ; ಅದೇ ಅವತಾರ ಪುರುಷರ ಬಗ್ಗೆ ಹೇಳುವುದಾದರೆ ಅವರು ಮಾನವತ್ವಕ್ಕೆ ಇಳಿದು ಬರುತ್ತಾರೆ .

ಆದಿತ್ಯ ಹೃದಯದ ೩-೫ ಶ್ಲೋಕಗಳು ಉದ್ದೇಶ ಮತ್ತು ಫಲದಲ್ಲಿ ಗಾಯತ್ರೀಮಂತ್ರಕ್ಕೆ ಸಮವಾದರೂ ಆರಧಿಸಬೇಕಾದ ಆ ದಿವ್ಯ ಪ್ರಭೆಯ (ವರೇಣ್ಯಂ ಭರ್ಗಃ ) ವರ್ಣನೆಯಲ್ಲಿ ವಿಸ್ತೃತವಾಗಿದೆ . ಜ್ಞಾನಿಗಳಾದ ಅಗಸ್ತ್ಯ ಮುನಿಗಳಿಗೆ ಶ್ರೀರಾಮ ,ಭಗವಾನ್ ವಿಷ್ಣುವಿನ ಅವತಾರವೆಂಬುವದರಲ್ಲಿ ಸಂಶಯವಿರಲಿಲ್ಲ . ಸಾಧಾರಣ ಮನುಷ್ಯರಿಗೆ ಗುರುವು ಗಾಯತ್ರೀ ಮಂತ್ರೋಪದೇಶವನ್ನು ಮಾಡುವಂತೆ ಶ್ರೀರಾಮನಿಗೆ ಸನಾತನವೂ ಗುಹ್ಯವೂ ಆದ ಆದಿತ್ಯ ಹೃದಯವನ್ನು ಉಪದೇಶಿಸಲಾಯಿತು . ತನ್ನ ದೈವತ್ವದ ಅರಿವಿದ್ದ ಶ್ರೀರಾಮನು ಮನುಷ್ಯರಿಗೆ ಸಾಧಕ ಮತ್ತು ಸಾಧ್ಯ (ಪರಬ್ರಹ್ಮ )ಗಳ ಅಭೇದವನ್ನು ತಿಳಿಸಲು ಇಚ್ಛಿಸಿದ . ಶ್ರದ್ಧಾನ್ವಿತರಾಗಿ ಈ ಸ್ತೋತ್ರವನ್ನು ಪಠಿಸಿದಾಗ ಸಾಧನಾಪಥದಲ್ಲಿ ಬರುವ ಅಡೆತಡೆಗಳೆಲ್ಲ ಪರಿಹಾರವಾಗಿ ಇಷ್ಟ ಪ್ರಾಪ್ತಿಯಾಗುವುದು .

ಪರಬ್ರಹ್ಮನಲ್ಲಿ ಐಖ್ಯವಾಗುವ ಭಗವಂತನ ವಿವಿಧ ರೂಪಗಳ ವರ್ಣನೆಯನ್ನು ೬-೧೪ ಶ್ಲೋಕಗಳಲ್ಲಿ ಹೇಳಲಾಗಿದೆ . ೧೬-೨೧ ಶ್ಲೋಕಗಳಲ್ಲಿರುವ ನಮನಗಳು ಸ್ಥೂಲ ಮತ್ತು ಸೂಕ್ಷ್ಮ ರೂಪಗಳು ಒಂದಾಗುವುದನ್ನು ಸೂಚಿಸುತ್ತವೆ . ಹೀಗೆ ಶ್ರೀರಾಮನಿಗೆ ೨೬ ಮತ್ತೆ ೨೭ನೆಯ ಶ್ಲೋಕಗಳಲ್ಲಿ ನೀಡಿರುವ ಆದಿತ್ಯಧ್ಯಾನವನ್ನು ಕುರಿತ ಉಪದೇಶವು 'ತತ್ ತ್ವಂ ಅಸಿ ' ಮಹಾವಾಕ್ಯದ ಅನುಭೂತಿಯತ್ತ ಕರದೊಯ್ಯುತ್ತದೆ .

ಒಟ್ಟಿನಲ್ಲಿ ಆದಿತ್ಯನು ತನ್ನ ಮಾನವ ಪ್ರತಿರೂಪಿ ಶ್ರೀರಾಮನಿಗೆ ಉದ್ದೇಶ್ಯವನ್ನು ತ್ವರಿತವಾಗಿ ಪೂರೈಸಿ ಎಲ್ಲರಿಗೂ ಆನಂದವನ್ನುಂಟು ಮಾಡುವಂತೆ ಕೊನೆಯ ಶ್ಲೋಕದಲ್ಲಿ ಪ್ರೇರೇಪಿಸುತ್ತಾನೆ .

ಹೆಚ್ಚು ಜನರು ಈ ಸ್ತೋತ್ರವನ್ನು ಶ್ರದ್ಧಾಭಕ್ತಿಗಳಿಂದ ಪಠಿಸಿ ತನ್ಮೂಲಕ ಪರಬ್ರಹ್ಮನಲ್ಲಿ ಐಖ್ಯವಾಗುವ ಪಥದಲ್ಲಿ ಮುಂದೆ ಸಾಗಲಿ .

ಆದಿತ್ಯ ಹೃದಯ

ತತೋ ಯುದ್ಧ ಪರಿಶ್ರಾಂತಂ ಸಮರೇ ಚಿಂತಯಾ ಸ್ಥಿತಮ್ |
ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್ || 1 ||
ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್ |
ಉಪಾಗಮ್ಯಾ ಬ್ರವೀದ್ರಾಮಮ್ ಅಗಸ್ತ್ಯೋ ಭಗವಾನ್ ಋಷಿಃ || 2 ||

೧-೨. ದೇವತೆಗಳೊಡನೆ ಯುದ್ಧವನ್ನು ವೀಕ್ಷಿಸಲು ಬಂದಿದ್ದ ಭಗವಾನ್ ಅಗಸ್ತ್ಯ ಋಷಿಗಳು ಯುದ್ಧದಲ್ಲಿ ದಣಿದಿದ್ದ , ಮುಂದೆ ಯುದ್ಧ ಸನ್ನದ್ಧನಾಗಿ ನಿಂತಿರುವ ರಾವಣನನ್ನು ಕಂಡು ಚಿಂತಿತನಾಗಿದ್ದ ರಾಮನನ್ನು ಕಂಡು ಇಂತೆಂದರು :

ರಾಮ ರಾಮ ಮಹಾಬಾಹೋ ಶೃಣು ಗುಹ್ಯಂ ಸನಾತನಮ್ |
ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸಿ || 3 ||

೩. ಎಲೈ ರಾಮನೇ ,ಮಹಾಬಾಹುವೇ ,ಯಾವುದರಿಂದ ನೀನು ಯುದ್ಧದಲ್ಲಿ ಎಲ್ಲ ಶತ್ರುಗಳನ್ನು ಜಯಸುತ್ತಿಯೋ ಆ ಸನಾತನ ರಹಸ್ಯವನ್ನು ಕೇಳು.

ಆದಿತ್ಯ ಹೃದಯಂ ಪುಣ್ಯಂ ಸರ್ವಶತ್ರು ವಿನಾಶನಮ್ |
ಜಯಾವಹಂ ಜಪೇನ್ನಿತ್ಯಮ್ ಅಕ್ಷಯ್ಯಂ ಪರಮಂ ಶುಭಮ್ || 4 ||

೪. ಆದಿತ್ಯ ಹೃದಯವೆಂಬ ಈ ಮಹಾಸ್ತುತಿಯನ್ನು ನಿತ್ಯವೂ ಪಠಿಸಿದರೆ ನಿನ್ನ ಎಲ್ಲ ಶತ್ರುಗಳೂ ನಾಶವಾಗುತ್ತಾರೆ , ನಿನಗೆ ಜಯ ಲಭಿಸುವುದು ಮತ್ತು ಅಕ್ಷಯವಾದ ಪರಮ ಮಂಗಳವುಂಟಾಗುವುದು .

ಸರ್ವಮಂಗಳ ಮಾಂಗಳ್ಯಂ ಸರ್ವ ಪಾಪ ಪ್ರಣಾಶನಮ್ |
ಚಿಂತಾಶೋಕ ಪ್ರಶಮನಮ್ ಆಯುರ್ವರ್ಧನ ಮುತ್ತಮಮ್ || 5 ||

೫. ಇದು ಎಲ್ಲ ಮಂಗಳಕ್ಕೂ ಮಂಗಳಕರವಾದುದು , ಎಲ್ಲ ಪಾಪಗಳನ್ನು ನಾಶ ಮಾಡುವಂತಹುದು ,ಚಿಂತೆ - ಶೋಕಗಳನ್ನು
ಪರಿಹರಿಸಿವಂತಹುದು ಮತ್ತು ದೀರ್ಘಾಯಸ್ಸನ್ನು ನೀಡುವಂತಹುದು .

ರಶ್ಮಿಮಂತಂ ಸಮುದ್ಯಂತಂ ದೇವಾಸುರ ನಮಸ್ಕೃತಂ |
ಪೂಜಯಸ್ವ ವಿವಸ್ವಂತಮ್ ಭಾಸ್ಕರಂ ಭುವನೇಶ್ವರಮ್ || ೬||

೬. ದೇವಾಸುರರಿಂದ ನಮಸ್ಕರಿಸಲ್ಪಡುವ , ರಶ್ಮಿಗಳಿಂದ ಕೂಡಿದ ,ತನ್ನ ಪ್ರಭೆಯಿಂದ ಬೇರೆ ಬೆಳಗುವ ವಸ್ತುಗಳನ್ನು ಕಳೆಗುಂದಿಸುವ , ಜಗತ್ತಿಗೆ ಒಡೆಯನಾದ , ಉದಯಸುತ್ತಿರುವ ಭಾಸ್ಕರನನ್ನು ಪೂಜಿಸು .

ಸರ್ವದೇವಾತ್ಮಕೋ ಹ್ಯೇಷಃ ತೇಜಸ್ವೀ ರಶ್ಮಿಭಾವನಃ |
ಏಷ ದೇವಾಸುರಗಣಾಂಲ್ಲೋಕಾನ್ ಪಾತಿ ಗಭಸ್ತಿಗಭಸ್ತಿಭಿಃ || ೭ ||

೭. ಅವನು ಎಲ್ಲ ದೇವತೆಗಳನ್ನೂ ಪ್ರತಿನಿಧಿಸುತ್ತಾನೆ . ಅವನು ತೇಜಸ್ವಿ ಮತ್ತು ತನ್ನ ಕಿರಣಗಳಿಂದ ಎಲ್ಲರನ್ನು ಪೋಷಿಸುತ್ತಿರುವನು . ಅವನು ತನ್ನ ಶಕ್ತಿಯುತ ಕಿರಣಗಳಿಂದ ದೇವಾಸುರರನ್ನೂ ಲೋಕಗಳನ್ನೂ ರಕ್ಷಿಸುತ್ತಿರುವನು .

ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕಂದಃ ಪ್ರಜಾಪತಿಃ |
ಮಹೇಂದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂ ಪತಿಃ || ೮ ||

೮. ಅವನೇ ಬ್ರಹ್ಮ ,ವಿಷ್ಣು , ಶಿವ ,ದೇವಸೇನಾಪತಿ ಸ್ಕಂದ , ಪ್ರಜಾಪತಿ ಮತ್ತು ಮಹೇಂದ್ರ , ಕುಬೇರನೂ ಅವನೇ . ಅವನೇ ಕಾಲ ಮತ್ತು ಯಮ . ಸೋಮ ಮತ್ತು ವರುಣರು ಅವನೇ .

ಪಿತರೋ ವಸವಃ ಸಾಧ್ಯಾ ಹ್ಯಶ್ವಿನೌ ಮರುತೋ ಮನುಃ |
ವಾಯುರ್ವಹ್ನಿಃ ಪ್ರಜಾಪ್ರಾಣಃ ಋತುಕರ್ತಾ ಪ್ರಭಾಕರಃ ||೯||

೯. ಅವನೇ ಪಿತೃಗಳು , ಅಷ್ಟವಸುಗಳೂ ಅವನೇ , ಸಾಧ್ಯರೂ ಅಶ್ವಿನೀ ದೇವತೆಗಳೂ ಮರುದ್ಗಣಗಳೂ ಮತ್ತು ಮನುವೂ ಅವನೇ . ಅವನೇ ವಾಯು ಮತ್ತು ಅಗ್ನಿ . ಎಲ್ಲರ ಪ್ರಾಣಶಕ್ತಿಯೂ ಅವನೇ. ಆರು ಋತುಗಳನ್ನು ಉಂಟುಮಾಡುವ ಪ್ರಭಾಕರನೂ ಅವನೇ .

ಆದಿತ್ಯಃ ಸವಿತಾ ಸೂರ್ಯಃ ಖಗಃ ಪೂಷಾ ಗಭಸ್ತಿಮಾನ್ |
ಸುವರ್ಣಸದ್ರುಶೋ ಭಾನುರ್ಹಿರಣ್ಯರೇತಾ ದಿವಾಕರಃ ||೧೦||

೧೦. ಅವನೇ ಅದಿತಿಪುತ್ರ ,ವಿಶ್ವಕರ್ತಾ ,ಕ್ರಿಯೋತ್ತೇಜಕ ,ಆಕಾಶದಲ್ಲಿ ಚಲಿಸುವವನು ,ಪೋಷಕನು ,ಎಲ್ಲ ದಿಕ್ಕುಗಳನ್ನು ಬೆಳಗುವವನು ,ಸ್ವರ್ಣಮಯ ಪ್ರಭೆಯುಳ್ಳವನು , ವಿಶ್ವೋತ್ಪ್ಪತ್ತಿಯ ಬೀಜ ಮತ್ತು ಹಗಲನ್ನು ಉಂಟು ಮಾಡುವವನು .


ಹರಿದಶ್ವಃ ಸಹಸ್ರಾರ್ಚಿಃ ಸಪ್ತಸಪ್ತಿರ್ಮರೀಚಿಮಾನ್
ತಿಮಿರೋನ್ಮಥನಃ ಶಂಭುಸ್ತ್ವಷ್ಟಾ ಮಾರ್ತಾಂಡ ಅಂಶುಮಾನ್ ||೧೧||

೧೧. ಅವನು ಹಸಿರು ಕುದುರೆಗಳುಳ್ಳವನು (ಸರ್ವವ್ಯಾಪಿ ),ಅಸಂಖ್ಯ ಕಿರಣಗಳುಳ್ಳವನು ,ಏಳು ಇಂದ್ರಿಯಗಳ (ಎರೆಡು ಕಣ್ಣು , ಎರೆಡು ಕಿವಿ ,ಎರೆಡು ಮೂಗು ಮತ್ತು ಒಂದು ನಾಲಿಗೆ ) ಶಕ್ತಿ ,ಕತ್ತಲೆಯನ್ನು ಹೋಗಲಾಡಿಸುವವನು ,ಸಂತೋಷವನ್ನುಂಟು ಮಾಡುವವನು ,ಭಕ್ತರ ಅಶುಭವನ್ನು ಹೋಗಲಾಡಿಸುವವನು ,ನಿರ್ಜೀವ
ಜಗದಂಡಕ್ಕೆ ಪ್ರಾಣದಾಯಕನು ಮತ್ತು ಕಿರಣಗಳಿಂದ ಕೂಡಿರುವವನು .

ಹಿರಣ್ಯಗರ್ಭಃ ಶಿಶಿರಃ ತಪನೋ ಭಾಸ್ಕರೋ ರವಿಃ |
ಅಗ್ನಿಗರ್ಭೋ‌உದಿತೇಃ ಪುತ್ರಃ ಶಂಖಃ ಶಿಶಿರನಾಶನಃ || ೧೨ ||

೧೨. ಅವನೇ ಹಿರಣ್ಯಗರ್ಭನು ,ಶೀತಲನೂ ತಪಿಸುವವನೂ ಅವನೇ, ಉಜ್ವಲ ಕಿರಣಗಳುಳ್ಳ ರವಿಯೂ ಅವನೇ .ಒಳಗೆ
ಅಗ್ನಿಯನ್ನು ಧರಿಸಿದ ಅದಿತಿ ಪುತ್ರನು ಅವನು .ಅತ್ಯಂತ ಶುಭಾದಾಯಕನೂ ಜಡತೆಯನ್ನು ನಾಶಮಾಡುವವನೂ ಅವನು .

ವ್ಯೋಮನಾಥ ಸ್ತಮೋಭೇದೀ ಋಗ್ಯಜುಃಸಾಮ-ಪಾರಗಃ |
ಘನಾವೃಷ್ಟಿ ರಪಾಂ ಮಿತ್ರೋ ವಿಂಧ್ಯವೀಥೀ ಪ್ಲವಂಗಮಃ || ೧೩||

೧೩. ಅವನು ಆಕಾಶಕ್ಕೆ ಒಡೆಯನು ,ತಮಸ್ಸನ್ನು ಹೋಗಲಾಡಿಸುವವನು ,ಋಕ್ -ಯಜಸ್-ಸಾಮವೇದಗಳಲ್ಲಿ ಪಾರಂಗತನಾದವನು, ಮಳೆಯನ್ನು ಸುರಿಸುವವನು,ನೀರಿನ ಮಿತ್ರನು ಮತ್ತು ವಿಂಧ್ಯಪರ್ವತ ಶ್ರೇಣಿಯನ್ನು ದಾಟಿದವನು .

ಆತಪೀ ಮಂಡಲೀ ಮೃತ್ಯುಃ ಪಿಂಗಳಃ ಸರ್ವತಾಪನಃ |
ಕವಿರ್ವಿಶ್ವೋ ಮಹಾತೇಜಾ ರಕ್ತಃ ಸರ್ವಭವೋದ್ಭವಃ || ೧೪ ||

೧೪. ಅವನು ಯಾವಾಗಲೂ ಸೃಷ್ಟಿಕ್ರಿಯೆಯಲ್ಲಿ ನಿರತನಾದವನು (ಬ್ರಹ್ಮಾ ),ಮಂಡಲಾಕಾರನು (ಕೌಸ್ತುಭದಿಂದ ಶೋಭಿಸುವ ವಿಷ್ಣು ), ಮತ್ತು ಎಲ್ಲವನ್ನೂ ನಾಶ ಮಾಡುವವನು (ಶಿವ ). ಅವನು ಪಿಂಗಳವರ್ಣವುಳ್ಳವನು ( ಉದಯಿಸುವ ಸೂರ್ಯ ), ಮತ್ತು ಎಲ್ಲವನ್ನೂ ತಪಿಸುವವನು . ಅವನೇ ಕ್ರಾಂತದರ್ಶಿ ,ವಿಶ್ವಸ್ವರೂಪ ,ಮಹಾತೇಜನು ,ಎಲ್ಲಾರಿಗೂ ಪ್ರಿಯನಾದವನು ಮತ್ತು ಎಲ್ಲ ಕ್ರಿಯೆಗಳನ್ನೂ ಹುಟ್ಟಿಸುವವನು .

ನಕ್ಷತ್ರ ಗ್ರಹ ತಾರಾಣಾಮ್ ಅಧಿಪೋ ವಿಶ್ವಭಾವನಃ |
ತೇಜಸಾಮಪಿ ತೇಜಸ್ವೀ ದ್ವಾದಶಾತ್ಮನ್-ನಮೋ‌உಸ್ತು ತೇ || ೧೫||

೧೫. ನಕ್ಷತ್ರಗ್ರಹ ತಾರಾಗಣಗಳಿಗೆ ಅವನು ಅಧಿಪನು ಮತ್ತು ವಿಶ್ವ್ದಲ್ಲಿರುವುದಕ್ಕೆಲ್ಲಾ ಮೂಲಪುರುಷನು . ಎಲ್ಲ ತೇಜಸ್ಸುಗಳಿಗೆ ಅವನೇ ಮೂಲ ತೇಜಸ್ಸು . ದ್ವಾದಶರೂಪದಲ್ಲಿ ಆವಿರ್ಭವಿಸಿರುವ ನಿನಗೆ ನಮಸ್ಕಾರ .

ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ |
ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ || ೧೬||

೧೬. ಪೂರ್ವಾಚಲದೇವತೆಗೆ ನಮಸ್ಕಾರ , ಪಶ್ಚಿಮಾಚಲದೇವತೆಗೆ ನಮಸ್ಕಾರ, ಜ್ಯೋತಿರ್ಗಣಗಳ ಒಡೆಯನಿಗೂ ಹಗಲಿನ ಒಡೆಯನಿಗು ನಮಸ್ಕಾರ .

ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ |
ನಮೋ ನಮಃ ಸಹಸ್ರಾಂಶೋ ಆದಿತ್ಯಾಯ ನಮೋ ನಮಃ || ೧೭ ||

೧೭. ಜಯವನ್ನುಂಟು ಮಾಡುವವನಿಗೂ ಐಶ್ವರ್ಯಪ್ರದನಿಗೂ ಹಳದಿ ಕುದುರೆಯುಳ್ಳವನಿಗೂ ನಮಸ್ಕಾರ ,ಅಸಂಖ್ಯ ಕಿರಣಗಳುಳ್ಳ ಆದಿತ್ಯನಿಗೆ ನಮಸ್ಕಾರ .

ನಮ ಉಗ್ರಾಯ ವೀರಾಯ ಸಾರಂಗಾಯ ನಮೋ ನಮಃ |
ನಮಃ ಪದ್ಮಪ್ರಬೋಧಾಯ ಮಾರ್ತಾಂಡಾಯ ನಮೋ ನಮಃ || ೧೮ ||

೧೮. ಉಗ್ರನಿಗೂ ,ವೀರನಿಗೂ , ವೇಗವಾಗಿ ಚಲಿಸುವವನಿಗೂ ನಮಸ್ಕಾರ, ತಾವರೆಯನ್ನು ಅರಳಿಸುವವನಿಗೂ ಮಾರ್ತಾಂಡನಿಗೂ ನಮಸ್ಕಾರ .

ಬ್ರಹ್ಮೇಶಾನಾಚ್ಯುತೇಶಾಯ ಸೂರ್ಯಾಯಾದಿತ್ಯ-ವರ್ಚಸೇ |
ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ || ೧೯ ||

೧೯. ಬ್ರಹ್ಮಾ ಶಿವ ಅಚ್ಯುತರ ಒಡೆಯನಿಗೂ ,ಸೂರ್ಯನಿಗೂ ,ಎಲ್ಲವನ್ನೂ ಬೆಳಗುವ ಮತ್ತು ಎಲ್ಲವನ್ನೂ ಭಕ್ಷಿಸುವ ಆದಿತ್ಯವರ್ಚಸ್ಸಿಗೂ ಮತ್ತು ಭಯಂಕರ ಶರೀರವುಳ್ಳವನಿಗೂ ನಮಸ್ಕಾರ .

ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಾ ಮಿತಾತ್ಮನೇ |
ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ || ೨೦ ||

೨೦. ತಮೋನಾಶಕನಿಗೂ,ಹಿಮನಾಶಕನಿಗೂ , ಶತ್ರುನಾಶಕನಿಗೂ ,ಅನಂತಾತ್ಮನಿಗೂ ,ಕೃತಘ್ನರನ್ನು ನಾಶ ಮಾಡುವವನಿಗೂ ,ದೇವನಿಗೂ ಮತ್ತು ಜ್ಯೋತಿಗಳ ಒಡೆಯನಿಗೂ ನಮಸ್ಕಾರ .

ತಪ್ತ ಚಾಮೀಕರಾಭಾಯ ವಹ್ನಯೇ ವಿಶ್ವಕರ್ಮಣೇ |
ನಮಸ್ತಮೋ‌உಭಿ ನಿಘ್ನಾಯ ರುಚಯೇ ಲೋಕಸಾಕ್ಷಿಣೇ || ೨೧ ||

೨೧. ಕರಗಿದ ಚಿನ್ನದಂತೆ ಬೆಳಗುತ್ತಿರುವವನಿಗೂ , ಅಗ್ನಿಸ್ವರೂಪನಿಗೂ ,ವಿಶ್ವಕರ್ಮನಿಗೂ ಕತ್ತಲೆಯನ್ನು ನಾಶಮಾಡುವವನಿಗೂ ವಿಶ್ವಸಾಕ್ಷಿಯಾದ ಜ್ಯೋತಿರ್ಮಯನಿಗೂ ನಮಸ್ಕಾರ .

ನಾಶಯತ್ಯೇಷ ವೈ ಭೂತಂ ತದೇವ ಸೃಜತಿ ಪ್ರಭುಃ |
ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ || ೨೨ ||

೨೨. ಅವನೇ ಎಲ್ಲವನ್ನೂ ನಾಶಮಾದುತ್ತಾನೆ , ಮತ್ತೆ ಅವನೇ ಎಲ್ಲವನ್ನೂ ಪುನಃ ಸೃಷ್ಟಿಸುತ್ತಾನೆ . ಅವನೇ ತನ್ನ ಕಿರಣಗಳ ಮೂಲಕ ನೀರನ್ನು ಸೆಳದುಕೊಂಡು ,ಅದನ್ನು ಬಿಸಿಮಾಡಿ ( ಮೋಡವಾಗಿ ಪರಿವರ್ತಿಸಿ) ಮಳೆಯ ರೂಪದಲ್ಲಿ ಸುರಿಸುವನು .

ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ |
ಏಷ ಏವಾಗ್ನಿಹೋತ್ರಂ ಚ ಫಲಂ ಚೈವಾಗ್ನಿ ಹೋತ್ರಿಣಾಮ್ || ೨೩ ||

೨೩. ಅವನು ಎಲ್ಲರ ಹೃದಯದಲ್ಲಿ ನೆಲಸಿದ್ದು ಎಲ್ಲರೂ ನಿದ್ರಿಸಿರುವಾಗ ಅವನು ಎಚ್ಚರದಲ್ಲಿರುತ್ತಾನೆ .ಅವನೇ ಅಗ್ನಿಹೋತ್ರ
ಮತ್ತು ಅಗ್ನಿಹೊತ್ರಿಗಳಿಗೆ ದೊರೆಯುವ ಫಲವೂ ಅವನೇ .

ವೇದಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ |
ಯಾನಿ ಕೃತ್ಯಾನಿ ಲೋಕೇಷು ಸರ್ವ ಏಷ ರವಿಃ ಪ್ರಭುಃ || ೨೪ ||


೨೪. ಅವನೇ ವೇದಗಳಾಗಿರುವನು . ಎಲ್ಲ ಕರ್ಮಗಳೂ ಮತ್ತು ಕರ್ಮಫಲವೂ ಅವನೇ ಆಗಿರುವನು . ಪ್ರಪಂಚದಲ್ಲಿರುವ ಎಲ್ಲಾ ಕೃತ್ಯಗಳಿಗೂ ಈ ರವಿಯೇ ಒಡೆಯ .
ಫಲಶೃತಿ


ಏನ ಮಾಪತ್ಸು ಕೃಚ್ಛ್ರೇಷು ಕಾಂತಾರೇಷು ಭಯೇಷು ಚ |
ಕೀರ್ತಯನ್ ಪುರುಷಃ ಕಶ್ಚಿತ್ -ನಾವಶೀದತಿ ರಾಘವ || ೨೫ ||

೨೫. ಎಲೈ ರಾಘವನೇ, ಕಷ್ಟ ಕಾಲದಲ್ಲಿ ,ಸಂಕಟ ಪರಿಸ್ಥಿತಿಯಲ್ಲಿ ,ಅರಣ್ಯ ಮಧ್ಯದಲ್ಲಿ ಸಿಕ್ಕಿಕೊಂಡು ಭಯಗೊಂಡಿರುವಾಗ ಮನುಷ್ಯನು ಈ ಸ್ತೋತ್ರವನ್ನು ಪಠಿಸಿದರೆ ಅವನು ದುಃಖಕೀಡಾಗುವುದಿಲ್ಲಾ .

ಪೂಜಯಸ್ವೈನ ಮೇಕಾಗ್ರೋ ದೇವದೇವಂ ಜಗತ್ಪತಿಮ್ |
ಏತತ್ ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಯಸಿ || ೨೬ ||

೨೬. ದೇವದೇವನಾದ ಜಗತ್ಪತಿಯಾದ ಇವನನ್ನು ಪೂಜಿಸು . ಮೂರು ಬಾರಿ ಈ ಸ್ತೋತ್ರವನ್ನು ಜಪಿಸಿದರೆ ಯುಧ್ಧದಲ್ಲಿ ನೀನು ಜಯಶಾಲಿಯಾಗುತ್ತಿಯಾ .

ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ವಧಿಷ್ಯಸಿ |
ಏವಮುಕ್ತ್ವಾ ತದಾಗಸ್ತ್ಯೋ ಜಗಾಮ ಚ ಯಥಾಗತಮ್ || ೨೭ ||

೨೭. ಎಲೈ ಮಹಾಬಾಹುವೇ, ಇದೇ ಕ್ಷಣದಲ್ಲಿ ನೀನು ರಾವಣನನ್ನು ಕೊಲ್ಲುತ್ತೀಯ - ಹೀಗೆ ಹೇಳಿ ಅಗಸ್ತ್ಯನು ಎಲ್ಲಿಂದ ಬಂದನೋ ಅಲ್ಲಿಗೆ ಹಿಂದಿರುಗಿದನು .

ಏತಚ್ಛ್ರುತ್ವಾ ಮಹಾತೇಜಾಃ ನಷ್ಟಶೋಕೋ‌உಭವತ್-ತದಾ |
ಧಾರಯಾಮಾಸ ಸುಪ್ರೀತೋ ರಾಘವಃ ಪ್ರಯತಾತ್ಮವಾನ್ || ೨೮ ||

೨೮. ಇದನ್ನು ಕೇಳಿ ಮಹಾತೇಜಸ್ವಿಯಾದ ರಾಘವನು ನಿಶ್ಚಿಂತನಾದನು . ಪುನಃ ಚೇತರಿಸಿಕೊಂಡು ಅತ್ಯುತ್ಸಾಹದಿಂದ ಸುಪ್ರೀತನಾದನು .

ಆದಿತ್ಯಂ ಪ್ರೇಕ್ಷ್ಯ ಜಪ್ತ್ವಾ ತು ಪರಂ ಹರ್ಷಮವಾಪ್ತವಾನ್ |
ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್ || ೨೯ ||

೨೯. ಆದಿತ್ಯನನ್ನೇ ನೋಡುತ್ತ ಜಪವನ್ನು ಮಾಡಿ ರಾಘವನು ಅತ್ಯಂತ ಹರ್ಷಗೊಂಡನು . ಮೂರು ಬಾರಿ ಆಚಮನ ಮಾಡಿ ಶುಚಿಯಾಗಿ ವೀರ್ಯವಂತನಾದ ಅವನು ಧನುಸ್ಸನ್ನು ಎತ್ತಿಕೊಂಡನು .

ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಯುದ್ಧಾಯ ಸಮುಪಾಗಮತ್ |
ಸರ್ವಯತ್ನೇನ ಮಹತಾ ವಧೇ ತಸ್ಯ ಧೃತೋ‌உಭವತ್ || ೩೦ ||

೩೦. ರಾವಣನನ್ನು ನೋಡಿ ಸಂತೋಷದಿಂದ ಯುದ್ಧಕ್ಕೆ ಮುಂದೆ ಬಂದನು . ಅವನನ್ನು ವಧಿಸುವ ನಿರ್ಧಾರದಿಂದ ಸರ್ವಯತ್ನದಲ್ಲಿ ತೊಡಗಿದನು .

ಅಧ ರವಿರವದನ್-ನಿರೀಕ್ಷ್ಯ ರಾಮಂ ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ |
ನಿಶಿಚರಪತಿ ಸಂಕ್ಷಯಂ ವಿದಿತ್ವಾ ಸುರಗಣ ಮಧ್ಯಗತೋ ವಚಸ್ತ್ವರೇತಿ || ೩೧ ||

೩೧. ರಾಕ್ಷಸಾಧಿಪನ ನಾಶವು ಸನ್ನಿಹಿತವಾಗಿರುವದನ್ನು ತಿಳಿದುಕೊಂಡು ಸುರಗಣಮಧ್ಯದಲ್ಲಿದ್ದ ಸೂರ್ಯನು ಆನಂದದಿಂದ ರಾಮನನ್ನು ನೋಡುತ್ತಾ ಸಂತೋಷಚಿತ್ತನಾಗಿ 'ತ್ವರೆಮಾಡು ' ಎಂದು ಅವನಿಗೆ ಹೇಳಿದನು .

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕಿ ವಿರಚಿತ ಆದಿಕಾವ್ಯೇ ಯುದ್ಧಕಾಂಡೇ ಆದಿತ್ಯಹೃದಯಂ ನಾಮ ಸಪ್ತೋತ್ತರ ಶತತಮಃ ಸರ್ಗಃ ಸಂಪೂರ್ಣಂ ।।