ಒಬ್ಬ ಮಾನವ, ಗುರುಗಳ ಹತ್ತಿರ ಬಂದು ನಮಸ್ಕಾರ ಮಾಡಿ, ಗುರುಗಳೇ ನನಗೆ ಸುಖವಾಗಿ ಜೀವನ ಮಾಡಲು ಬೇಕಾಗುವ ಎಲ್ಲಾ ಅನುಕೂಲಗಳು,ವ್ಯವಸ್ಥೆಗಳು ನನಗೆ ಇದೆ. ಆದರೂ ಬೇರೆಯವರ ಹತ್ತಿರ ಇರುವುದನ್ನು ನೋಡಿದರೆ ನನಗೆ ತಡೆಯಲಾಗದೇ ಅಸೂಯೆ, ಹೊಟ್ಟೆಕಿಚ್ಚು ಬರುತ್ತದೆ. ಯಾಕೆ? ಈ ತರಹ ಹೊಟ್ಟೆಕಿಚ್ಚು ನನ್ನ ಮನಸ್ಸಿನಲ್ಲಿ ಹುಟ್ಟಲು ಕಾರಣವೇನು ಎಂದು ಕೇಳಿದ. ಆಗ ಗುರುಗಳು ಮಾನವ ನೀನು ನಿನ್ನ ಮನಸ್ಸಿನಲ್ಲಿರುವ ಹೊಟ್ಟೆಕಿಚ್ಚು, ಅಸೂಯೆ ಇವುಗಳಿಂದ ದೂರವಾಗಲು ಇಷ್ಟಪಡುತ್ತೀಯಾ? ಕೇಳಿದರು. ಅದಕ್ಕಾತ ಹೌದು ಗುರುಗಳೇ ನನ್ನಲ್ಲಿರುವ ಹೊಟ್ಟೆಕಿಚ್ಚಿನಿಂದಾಗಿ ನನಗೆ ನೆಮ್ಮದಿಯೇ ಇಲ್ಲವಾಗಿದೆ. ನನ್ನ ಮನಸ್ಸಿನಲ್ಲಿ ತುಂಬಿರುವ ಈ ಹೊಟ್ಟೆಕಿಚ್ಚನ್ನು ದಯವಿಟ್ಟು ತೆಗೆದು, ನನ್ನನ್ನು ಈ ನರಕದಿಂದ ಪಾರು ಮಾಡಿ ಎಂದು ಅಂಗಲಾಚಿ ಬೇಡಿಕೊಂಡನು.
ಆಗ ಗುರುಗಳು, ಮಾನವ ನೀನೀಗ ಮೊದಲ ಮೆಟ್ಟಿಲು ಹತ್ತಿದ್ದಿ. ಇದರಲ್ಲಿ ನಿನಗೆ ಯಶಸ್ಸು ಸಿಕ್ಕಿದೆ. ಹೇಗೆಂದರೆ ನಿನ್ನೊಳಗೆ ಹೊಟ್ಟಿಕಿಚ್ಚು ಇದೆ ಎಂಬುದನ್ನು ಒಪ್ಪಿಕೊಂಡಿದ್ದಿ. ಎಷ್ಟೊ ಜನ ಇದನ್ನು ತೋರ್ಪಡಿಸದೆ ಬೆಣ್ಣೆಯಂಥ ಮಾತಾಡುತ್ತಾ ಒಳ್ಳೆಯವರು ಎನಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇನ್ನು ಕೆಲವರು ಹೇಳಿಕೊಳ್ಳಲಾಗದೆ ನರಳುತ್ತಾರೆ ಹೊರತು ಅವರಲ್ಲಿರುವ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಬಿಡು, ಯಾರು ಹೇಗಾದರೂ ಇರಲಿ ಅದೆಲ್ಲ ಈಗ ಬೇಡ.
ಈಗ ನಿನ್ನ ವಿಷಯಕ್ಕೆ ಬರೋಣ. ನಿನಗೆ ಯಾರಾದರೂ ಬಡವರು, ನಿರ್ಗತಿಕರು, ಅಸಹಾಯಕರನ್ನು ನೋಡಿದಾಗ ಏನನ್ನಿಸುತ್ತದೆ. ಗುರುಗಳೇ ನನಗಿಂತ ಬಡವರನ್ನು ನೋಡಿದಾಗ ಸಂಕಟವಾಗುತ್ತದೆ. ಅಯ್ಯೋ ಎಂದು ಮನಸ್ಸು ಮರುಗುತ್ತದೆ. ಮತ್ತೆ ಗುರುಗಳು ಹೌದಾ, ನಿನ್ನ, ಸರಿಸಮಾನವಾಗಿ ಸಂಪತ್ತು ಅನುಕೂಲ ಇರುವವರನ್ನು ನೋಡಿದಾಗ ಏನನ್ನಿಸುತ್ತದೆ. ಆತನು ಗುರುಗಳೇ ಅಂತವರನ್ನು ನೋಡಿದರೆ, ಹೇಗಾದರೂ ಮಾಡಿ ಅವರಿಗಿಂತ ನಾನು ಹೆಚ್ಚು ಶ್ರೀಮಂತನಾಗಬೇಕು. ಎಲ್ಲಾ ವಿಷಯಗಳಲ್ಲೂ ನಾನೇ ಹೆಚ್ಚಾಗಿರಬೇಕು ಎಂಬ ಭಾವ ಹುಟ್ಟುತ್ತದೆ ಎಂದನು.
ಮತ್ತೆ ಗುರುಗಳು, ಆಯ್ತು ಈಗ ಸಂಪತ್ತು, ವಿದ್ಯೆ ,ಅಧಿಕಾರ, ಅಂತಸ್ತು ಎಲ್ಲದರಲ್ಲೂ ನಿನಗಿಂತ ಎತ್ತರದಲ್ಲಿರುವವರನ್ನು ನೋಡಿದರೆ ನಿನ್ನ ಮನಸ್ಸಿಗೆ ಏನಾಗುತ್ತದೆ. ಆತ ಗುರುಗಳೇ ಅಂಥವರನ್ನು ನೋಡಿದಾಗ ಹೇಗಾದರೂ ಸರಿಯೇ ಅವರಿಗಿಂತ ನಾನು ಉನ್ನತ ಮಟ್ಟದಲ್ಲಿ ಇರಬೇಕು. ಆದಷ್ಟು ಬೇಗ ಎತ್ತರದ ಮಟ್ಟಕ್ಕೆ ಹೋಗಲು ಏನಾದರೂ ಮಾಡಬೇಕು ಎಂಬ ಈರ್ಶೆಯಂಥ ಭಾವ ಹುಟ್ಟುತ್ತದೆ ಎಂದು ಹೇಳಿದ. ಗುರುಗಳು ನೀನು ಪ್ರಯತ್ನಪಟ್ಟರೂ ಅಷ್ಟು ಎತ್ತರದ ಮಟ್ಟಕ್ಕೆ ಹೋಗಲಾಗದಿದ್ದರೆ ನಿನ್ನ ಮನಸ್ಸಿನಲ್ಲಿ ಯಾವ ಭಾವ ಮೂಡುತ್ತದೆ. ನಾನು ಎಷ್ಟೇ ಪ್ರಯತ್ನ ಪಟ್ಟರು ನನಗೆ ಆ ರೀತಿ ಹೋಗಲು ಆಗದಿದ್ದರೆ ಅವರುಗಳ ಮೇಲೆ ಹೊಟ್ಟೆಕಿಚ್ಚು ಹುಟ್ಟುತ್ತದೆ, ಜೊತೆಗೆ ದ್ವೇಷವು ಬೆಳೆಯುತ್ತದೆ. ಇದನ್ನು ಕೇಳಿ ಗುರುಗಳು ನೋಡಿದೆಯಾ ಮನುಷ್ಯನಿಗೆ ಹೊಟ್ಟೆಕಿಚ್ಚು, ದ್ವೇಷ, ಅಸೂಯೆ, ಈ ರೀತಿಯಾಗಿ ಹೀಗೆ ಹುಟ್ಟುತ್ತದೆ.
ಯಾವುದೇ ಮನುಷ್ಯನು ಪರಿಪೂರ್ಣನಾಗಿ ಇರುವುದಿಲ್ಲ .ಎಲ್ಲರೊಳಗೂ ಅಸಮಾಧಾನ ಇರುತ್ತದೆ. ಯಾರು ಪರಿಪೂರ್ಣವಾಗಿ ಇರುವುದಿಲ್ಲವೋ ಅವರಲ್ಲಿ ಹೊಟ್ಟೆಕಿಚ್ಚು, ಅಸೂಯೆ ,ಇರುತ್ತದೆ. ಹಿಡಿದ ಕೆಲಸವನ್ನು ಪೂರ್ಣಗೊಳಿಸುವ ಸಾಮರ್ಥ್ಯವಿರದವರು, ಸಾಮರ್ಥ್ಯ ಹೊಂದಿದವರನ್ನು ಗೆಲ್ಲಲು ಸಾಧ್ಯವಾಗದಿದ್ದಾಗ, ಅಸೂಯೆ ಹುಟ್ಟುತ್ತದೆ. ನಿನ್ನ ಕೈಯಲ್ಲಿ ಆಗದಿರುವುದನ್ನು ಅವನು ಮಾಡುತ್ತಾನೆ ಎಂದು ನಿನಗೆ ಹೊಟ್ಟೆಕಿಚ್ಚು ಹುಟ್ಟುತ್ತದೆ. ಇದು ಅಸೂಯೆಗೆ ಕಾರಣವಾಗುತ್ತದೆ. ಆದರೆ ಆತನು ಸಹ ತನ್ನನ್ನು ಇನ್ನೊಬ್ಬನ ಜೊತೆ ಹೋಲಿಸಿಕೊಂಡು ಕಷ್ಟಪಡುತ್ತಾ ನರಳುತ್ತಿರುತ್ತಾನೆ.
ಗುರುಗಳೇ, ಹೊಟ್ಟೆಕಿಚ್ಚು ಹೇಗೆ ಹುಟ್ಟುತ್ತದೆ ಎಂದು ನನಗೆ ಅರ್ಥವಾಯಿತು. ಆದರೆ ಅದರಿಂದ ಹೇಗೇ ಮುಕ್ತಿ ಪಡೆಯುವುದು ಎಂಬುದನ್ನು ದಯವಿಟ್ಟು ತಿಳಿಸಿ ಕೊಡಿ ಎಂದು ಕೇಳಿದನು. ಆಗ ಗುರುಗಳು, ಮಾನವ ಈ ಹೊಟ್ಟೆಕಿಚ್ಚು, ದ್ವೇಷ, ಅಸೂಯೆ, ಮತ್ತೊಬ್ಬರ ಜೊತೆ ನಮ್ಮನ್ನು ಹೋಲಿಕೆ ಮಾಡಿದಾಗ ಹುಟ್ಟುತ್ತದೆ. ಒಬ್ಬರು ಇನ್ನೊಬ್ಬರಿಗೆ ತಮ್ಮನ್ನು ಹೋಲಿಸಿಕೊಂಡು, ಅವನು ತನಗಿಂತ ಅವನನ್ನು ಮೇಲಿನ ಸ್ಥಾನದಲ್ಲಿ ಇಟ್ಟು ನೋಡುತ್ತಾನೆ. ಎಲ್ಲದರಲ್ಲೂ ತನಗಿಂತ ಶಕ್ತಿಶಾಲಿ, ಪ್ರಭಾವಿ ವ್ಯಕ್ತಿ ಎಂದೆಲ್ಲಾ ಭ್ರಮಿಸುತ್ತಾನೆ. ಇದರಿಂದ ಅಸೂಯೆ ಉತ್ಪತ್ತಿಯಾಗುತ್ತದೆ. ಇದನ್ನೆಲ್ಲ ಬಿಡಬೇಕೆಂದರೆ ಮೊದಲು ಸತ್ಯವನ್ನು ಅರಿಯಬೇಕು ಎಂದರು. ಅದಾವ ಸತ್ಯ ಗುರುಗಳೇ ಎಂದು ಕೇಳಿದ. ಅದು ಸೂರ್ಯ- ಚಂದ್ರ, ನದಿ-ಸಮುದ್ರ, ಹಗಲು- ರಾತ್ರಿ,
ಕಾಡು-ನಾಡು, ಇವುಗಳನ್ನೆಲ್ಲ ಒಂದನ್ನೊಂದು ಹೋಲಿಸಬಾರದು. ಹಾಗೆಯೇ ಒಬ್ಬ ಮನುಷ್ಯನನ್ನು ಇನ್ನೊಬ್ಬ ಮನುಷ್ಯನೊಂದಿಗೆ ಹೋಲಿಸುವುದು ಸರಿಯಲ್ಲ. ಹಾಗೆ ಹೋಲಿಸಿದರೆ ಅವನ ಬದುಕನ್ನು ಅವಮಾನ ಮಾಡಿದಂತೆ. ವಿವಿಧತೆಯಲ್ಲಿ ಏಕತೆ ಎಂಬಂತೆ, ಜೀವನ ಎಲ್ಲರಿಗೂ ಒಂದೇ ತರಹ ಅಲ್ಲ ಅದು ವೈವಿಧ್ಯಮಯ, ಅದೂ ಸಹ ವರ್ಣರಂಜಿತವಾಗಿರುತ್ತದೆ.
ಪ್ರತಿಯೊಬ್ಬರ ಜೀವನವೂ ಬೇರೆ ಬೇರೆಯಾಗಿರುತ್ತದೆ. ಅದು ಬದುಕಿನ ಸೌಂದರ್ಯದ ಗುಟ್ಟು. ಇಷ್ಟಕ್ಕೂ ತೃಪ್ತನಾಗದ ಆ ಮನುಷ್ಯ, ಗುರುಗಳೇ ನೀವು ಹೇಳುವ ಮಾತು ಕೇಳಲಿಕ್ಕೆ, ಹೇಳಲಿಕ್ಕೆ, ಓದಲಿಕ್ಕೆ ಚಂದ ಆದರೆ ಜೀವನದಲ್ಲಿ ಅನುಭವಿಸುವುದು, ಅನುಸರಿಸುವುದು ಕಷ್ಟ ಇದನ್ನೆಲ್ಲಾ ಅನುಭವಿಸಿದವನಿಗೇ ಗೊತ್ತು ಎಂದು ಅಷ್ಟಾವಕ್ರನಂತೆ ನುಡಿದನು.
ಸಮಾಧಾನದಿಂದ ಗುರುಗಳು, ಹೌದು ನೀನು ಹೇಳುತ್ತಿರುವುದು ನಿಜ ಅದಕ್ಕೆ ಪರಿಹಾರ ಎಂದರೆ ಸತ್ಯವನ್ನು ಬರೀ ಕೇಳಬಾರದು, ಅದನ್ನು ಅನುಭವಿಸಿಯೇ ತಿಳಿಯಬೇಕು ಎಂದಾಗ, ಆ ಮಾನವ, ಸತ್ಯವೇ? ಅದೆಂಥ ಸತ್ಯ ಅನುಭವಿಸುವುದು ಎಂದರೆ ಹೇಗೆ? ಪ್ರಶ್ನಿಸಿದ. ನೋಡು, ನಿನಗೆ ಹೇಗೆ ಅನುಭವವಿದೆಯೋ, ಅಂದರೆ, ಬೆಂಕಿ ಮುಟ್ಟಿದರೆ ಸುಡುತ್ತದೆ, ನೀರು ದಾಹ ನೀಗಿಸುತ್ತದೆ, ಬೇಸಿಗೆ ಬಿಸಿಲು, ಚಳಿಗಾಲದ ಚಳಿ, ಮಳೆಗಾಲದ ಮಳೆ, ವಸಂತಕಾಲದ ಉತ್ಸಾಹ, ಇಂಥ ಅನುಭವ ಹೇಗೆ ಗೊತ್ತಾಗುತ್ತದೆಯೋ, ಅದೇ ರೀತಿ ನಿನ್ನ ಮನಸ್ಸಿನ ಸ್ವಭಾವವನ್ನು ನೀನೇ ಅರಿಯಬೇಕು. ನಮ್ಮ ಮನಸ್ಸು ಆಯಾ ಸಂದರ್ಭನುಸಾರ ಹೇಗೆ ವರ್ತಿಸುತ್ತದೆಯೆಂದು ತಿಳಿಯಬೇಕು. ಈ ಮನಸ್ಸು ಒಳ್ಳೆಯದಕ್ಕೂ, ಕೆಟ್ಟದ್ದಕ್ಕೂ ಕಾರಣವಾಗಿದೆಯೋ, ಹಾಗೆಯೇ ತಮ್ಮನ್ನು ಇನ್ನೊಬ್ಬರಿಗೆ ಹೋಲಿಸಿಕೊಳ್ಳಲು ಈ ಮನಸ್ಸೇ ಕಾರಣ ಎಂದರು.
ಈ ಜಿಗಟು ಮನುಷ್ಯ ಬಿಡದೆ, ಹಾಗಾದರೆ ಗುರುಗಳೇ ಮನಸ್ಸಿನ ಸ್ವಭಾವ ಹೇಗೆ ತಿಳಿಯುತ್ತದೆ ಎಂದು ಕೇಳಿದನು. ಅದು ಧ್ಯಾನದಿಂದ ಮಾತ್ರ ಸಾಧ್ಯ. ಧ್ಯಾನ ಮಾರ್ಗದಲ್ಲಿ ಪ್ರಯಾಣಿಸುತ್ತಾ ನಿಮ್ಮ ಮನಸ್ಸಿನ ಸ್ವಭಾವವನ್ನು ತಿಳಿಯಬಹುದು ಎಂದು ತಿಳಿಸಿದ ಗುರುಗಳ ಮಾತಿಗೆ ಮನುಷ್ಯನು ಧ್ಯಾನ ಮಾಡುವುದು ತುಂಬಾ ಕಷ್ಟ ಹೇಗೆ ಮಾಡುವುದು?, ಆಗ ಗುರುಗಳು, ಹೌದು ಧ್ಯಾನ ಮಾಡುವುದು ಕಠಿಣ. ಆದರೆ ಧ್ಯಾನ ಮಾಡುವ ಮನಸ್ಸನ್ನು ಹದ ಮಾಡಬೇಕು. ಅಯ್ಯೋ ಹದಮಾಡುವುದು ಎಂದರೇನು ಗುರುಗಳೇ ತಿಳಿಸುವಿರಾ? ಸ್ವಲ್ಪವೂ ಬೇಸರಿಸದ ಗುರುಗಳು, ಇದಕ್ಕೆ ಸ್ವಲ್ಪ ನಿನ್ನ ಪ್ರಯತ್ನಬೇಕು ಆಗ ತನ್ನಿಂತಾನೇ ಆಗುತ್ತದೆ. ಉಸಿರಾಟ ಕ್ರಿಯೆಯು ಎಡೆಬಿಡದೆ ತನ್ನಷ್ಟಕ್ಕೆ ತಾನೇ ಹೇಗೆ ಉಸಿರಾಡುತ್ತದೆಯೋ, ಅದೇ ರೀತಿ ನಿನಗೆ ಒಂದೇ ಕಡೆ ಒಂದಷ್ಟು ಹೊತ್ತು ಕುಳಿತುಕೊಳ್ಳಲು ಸಾಧ್ಯವೇ ಎಂದು ಕೇಳಿದರು. ಮನುಷ್ಯ ಸಂತೋಷದಿಂದ ಅದೇನ್ಮಹಾ ಗುರುಗಳೇ ಅದು ನನ್ನಿಂದ ಸಾಧ್ಯ ಇದೆ ಅಂದನು. ಆಗ ಗುರುಗಳು ಒಳ್ಳೆಯದು ಸಂತೋಷ. ಇಷ್ಟು ಆದರೆ ಬೇಕಾದಷ್ಟಾಯಿತು. ಇನ್ನು ನೀನು ಮಾಡಬೇಕಾದುದು ಇಷ್ಟೇ. ಒಂದಷ್ಟು ಹೊತ್ತು ಒಂದೇ ಕಡೆ ಕುಳಿತುಕೊಳ್ಳುತ್ತೇನೆ ಎಂದು ಮನಸ್ಸಿನಲ್ಲಿ ದೃಢ ನಿಶ್ಚಯ ಮಾಡಿಕೊಳ್ಳಬೇಕು. ಹಾಗೆ ಸಿದ್ಧತೆ ಮಾಡಿಕೊಂಡು ಕುಳಿತಾಗ ಮನಸ್ಸಿನಲ್ಲಿ , ಬೇಡದ್ದು ,ಬೇಕಾದ್ದು, ಒಳ್ಳೆಯದು, ಕೆಟ್ಟದ್ದು, ಹೀಗೆ ಹಲವು ತರದ ಯೋಚನೆಗಳು ಬಂದು ಹೋಗುತ್ತಿರುತ್ತವೆ. ಆ ಯೋಚನೆಗಳು ಅದರ ಪಾಡಿಗೆ ಅದು ಬಂದು ಹೋಗುತ್ತಿರಲಿ, ನೀನು ಮಾತ್ರ ಬಿಡದೆ ಒಂದಷ್ಟು ಕಾಲ ಹಠತೊಟ್ಟು ಕಣ್ಣು ಮುಚ್ಚಿ, ಒಂದೇ ಭಂಗಿಯಲ್ಲಿ ಕುಳಿತಿರಬೇಕು. ಈ ಮಾರ್ಗ ಪ್ರತಿಯೊಬ್ಬರನ್ನೂ ಧ್ಯಾನ ಮಾಡಲು ಯೋಗ್ಯ ಮನುಷ್ಯನನ್ನಾಗಿ ತಯಾರು ಮಾಡುತ್ತದೆ ಎಂದು ಗುರುಗಳು ಸಮಾಧಾನದಿಂದ ಧ್ಯಾನದ ಸರಳ ಮಾರ್ಗವನ್ನು ತಿಳಿಸಿಕೊಟ್ಟರು.
ಹೊಟ್ಟೆಕಿಚ್ಚು ಯಾರಲ್ಲಿ ಇರುವುದಿಲ್ಲವೋ ಅವರು ಮಹಾತ್ಮರು,
ನಾವು ಬೇರೆಯವರು ತಿಳಿದುಕೊಂಡಷ್ಟು ಕೆಟ್ಟವರೂ ಅಲ್ಲ,
ನಾವೇ ತಿಳಿದುಕೊಂಡಷ್ಟು ಒಳ್ಳೆಯವರೂ ಅಲ್ಲ. ನಿಜ ಬೇರೆಯೇ ಇರುತ್ತದೆ.
ಅದು ಪರಿಸ್ಥಿತಿಗೆ ತಕ್ಕಂತೆ ಬದಲಾಗುತ್ತಲೂ ಇರುತ್ತದೆ.
ಉತ್ಸಾಹೋ ಬಲವಾನಾರ್ಯ, ನಾಸ್ತ್ಯುತ್ಸಾಹಾತ್ಪರಂ ಬಲಂ!
ಸೋತ್ಸಾ ಹಾಸ್ಯ ಚ ಲೋಕೇಷು, ನಾ ಕಿಂಚಿದಪಿ ದುರ್ಲಭಂ!
ಉತ್ಸಾಹವಿರುವ ಮನುಷ್ಯನೇ ಬಲಶಾಲಿಯೂ
ಕೂಡ. ಉತ್ಸಾಹಕ್ಕಿಂತ ಬಲವಾದುದಿಲ್ಲ .ಉತ್ಸಾಹದಿಂದ
ಕೂಡಿದವನಿಗೆ ಲೋಕದಲ್ಲಿ ಯಾವುದೂ ದುರ್ಲಭವಲ್ಲ.