ನಮ್ಮಾಳ್ವಾರ್ ವೈಭವಂ - ಭಾಗ - ೧ | Nammalvar
ನಮ್ಮ ಶ್ರೀವೈಷ್ಣವ ಸಂಪ್ರದಾಯದಲ್ಲಿ ಪ್ರಮುಖ ಪೂರ್ವಾಚಾರ್ಯರಾದ ಮಣವಾಳಮಾಮುನಿಗಳು (ಜೀಯರ್) ಅವರು ತಮ್ಮ ತಮಿಳು ಪ್ರಬಂಧ “ ಉಪದೇಶರತ್ನಮಾಲೆ”ಯಲ್ಲಿನ ೧೫ ನೇ ಪಾಶುರದಲ್ಲಿ ಹೀಗೆನ್ನುತ್ತಾರೆ…

“ಉಣ್ಡೋ ವೈಗಾಸಿ ವಿಸಾಗತ್ತುಕ್ಕು ಒಪ್ಪು ಒರುನಾಳ್
ಉಣ್ಡೋ ಶಡಗೋಪ್ಪರ್ಕ್ಕು ಒಪ್ಪು ಒರುವರ್-ಉಣ್ಡೋ
ತಿರುವಾಯ್ಮೊೞಿಕ್ಕು ಒಪ್ಪು ತೆನ್ ಕುರುಗೈಕ್ಕು ಉಣ್ಡೋ
ಒರು ಪಾರ್ ತನಿಲ್ ಒಕ್ಕುಂ ಊರ್”

ಅರ್ಥ:
ವೈಶಾಖ ಮಾಸ ಮತ್ತು ವಿಶಾಖಾ ನಕ್ಷತ್ರಕ್ಕೆ ಸಮನಾದ ಬೇರೊಂದು ದಿನವುಂಟೇ?
ಶಠಗೋಪರಿಗೆ ಸಮನಾದವರು ಬೇರೊಬ್ಬರುಂಟೇ?
ತಿರುವಾಯ್ಮೊಳಿಗೆ ಸಮನಾದ ಮತ್ತೊಂದು ಪ್ರಬಂಧ ಮತ್ತು ತಿರುಕ್ಕುರುಹೂರ್ ನಗರಿಗೆ ಸಮನಾದ ಮತ್ತೊಂದು ಊರು ಈ ಭೂಮಿಯಲ್ಲುಂಟೇ?

ಶ್ರೀವೈಷ್ಣವ ಸಾಂಪ್ರದಾಯಿಕ ವಾಚಕಗಳಲ್ಲಿ “ಕೋಯಿಲ್” ಎಂದರೆ ಅದು ಬರೀ ದೇವಸ್ಥಾನವಲ್ಲ, ಆ ವಾಚಕ ಶ್ರೀರಂಗಂನ ರಂಗನಾಥನ ದೇವಾಲಯಕ್ಕೆ ಮಾತ್ರ ಅನ್ವಯವಾಗುತ್ತದೆ.
ಅಂತೆಯೇ “ ಪೆರುಮಾಳ್” ಎನ್ನುವ ವಾಚಕ- ಸಂಬೋಧನೆ ಆ ರಂಗನಾಥಸ್ವಾಮಿಗೆ ಮಾತ್ರ ಅನ್ವಯ…
ಇನ್ನೂ ಒಂದು ವಿಶೇಷ ವಾಚಕವಿದೆ…. ಅದು ಒಬ್ಬ ಮಹಾಪುರುಷರಿಗೆ ಮಾತ್ರ ಅನ್ವಯವಾಗುವಂಥದ್ದು!
ಅದುವೇ “ ಆಳ್ವಾರ್” ಎಂಬುವ ವಾಚಕ… ಈ ಸಂಬೋಧನೆ ನಮ್ಮ ನಮ್ಮಾಳ್ವಾರ್ ಅವರಿಗೆ ಮಾತ್ರ ಸೇರಿದ್ದು!

ಹೀಗೆ ಇನ್ನೂ ಹಲವಾರು ವೈಶಿಷ್ಟ್ಯಪೂರ್ಣ ವ್ಯಕ್ತಿತ್ವ ಹೊಂದಿರುವ ನಮ್ಮಾಳ್ವಾರ್ ಆಳ್ವಾರ್ ಪಂಥದಲ್ಲೇ ಮುಂಚೂಣಿಯಲ್ಲಿರುವವರು.

ಅಂತೆಯೇ ಅವರ ತಿರುನಕ್ಷತ್ರವನ್ನು ಅದ್ಧೂರಿಯಾಗಿ ಆಚರಿಸದ ವಿಷ್ಣು ದೇವಾಲಯಗಳಾಗಲೀ, ಸಂಪ್ರದಾಯಸ್ಥ ಶ್ರೀವೈಷ್ಣವರೇ ಇಲ್ಲ…

ಬನ್ನಿ, ನಾವು ಅವರು, ಅವರ ಪ್ರಬಂಧಗಳು, ಅವರ ಜೀವನದ ಹಲವು ವೈಶಿಷ್ಟ್ಯಗಳನ್ನು ಹಲವು ಕಂತುಗಳನ್ನೊಳಗೊಂಡ ಈ ಬರೆಹದ ಮುಖೇನ ಅರಿತು ಆನಂದಿಸೋಣ…

ನಮ್ಮಾಳ್ವಾರ್ ( ಹಾಗೆಂದು ಅವರು ತದನಂತರದಲ್ಲಿ ಆ ಭಗವಂತನಿಂದಲೇ ಕರೆಸಿಕೊಳ್ಳಲ್ಪಡುತ್ತಾರೆ) ಅವರು ಜನಿಸಿದ್ದು ಇಂದು ತಮಿಳುನಾಡಿನಲ್ಲಿರುವ ಆಳ್ವಾರ್ ತಿರುನಗರಿ ಎಂದು ಕರೆಯಲ್ಪಡುವ ಅಂದಿನ ತಿರುಕ್ಕುರುಹೂರ್ ನಲ್ಲಿ.

ಇವರ ಜನನದ ಬಗ್ಗೆ ಇಷ್ಟೇ ಹೇಳಿದರೆ ಸಾಕೇ? ಅದರ ಹಿಂದಿನ ರೋಚಕ ಕತೆಯನ್ನು ತಿಳಿಯಬೇಡವೇ?

ಇವರ ತಂದೆಯ ಹೆಸರು ಕಾರಿ ಎಂದು . ತಾಯಿಯ ಹೆಸರು ಉದಯನಂಗೈ.( ಅಂತೆಯೇ ಅವರ ಪ್ರಬಂಧ ತಿರುವಾಯ್ಮೊಳಿಯ ಹಲವು ಪದಿಗದ ಕೊನೆಯಲ್ಲೂ ಅವರು “ ಕಾರಿಮಾರನ್ ಶಠಗೋಪನ್” , ಎನ್ನುವ ತಮ್ಮ ನಾಮಾಂಕಿತ ಮುದ್ರೆಯನ್ನು ಒತ್ತುತ್ತಾರೆ). ಈ ದಂಪತಿಗಳಿಗೆ ಬಹಳ ವರ್ಷಗಳ ತನಕ ಸಂತಾನಪ್ರಾಪ್ತಿಯಾಗದೇ ಕೊನೆಗೆ ತಿರುಕ್ಕುರುಂಗುಡಿಯ ದೇವರಲ್ಲಿ “ ನಿನ್ನಂಥವನೇ ಒಬ್ಬ ಮಗನನ್ನು ಕರುಣಿಸು” ಎಂದು ಪ್ರಾರ್ಥಿಸುತ್ತಾರೆ.

ಆತ “ ನನ್ನಂಥ ಮತ್ತೊಬ್ಬನನ್ನು ಎಲ್ಲಿಂದ ತರಲಿ? ( ತಾನೇ ತನಕ್ಕುಉವಮನ್- ತನಗೆ ತಾನೇ ಸಾಟಿ - ಮೂನ್ರಾಂ ತಿರುವಂದಾದಿ-೩೮), ಸರಿ, ನಾನೇ ನಿಮಗೆ ಮಗನಾಗುವೆ “ ಎಂದು ಆಶ್ವಾಸನೆ ನೀಡುತ್ತಾನೆ.

ತಿರುವಾಯ್ಮೊಳಿಯ ತಿರುಕ್ಕುರುಂಗುಡಿನಂಬಿಯನ್ನು ಕುರಿತಾದ ನಾಯಿಕಾಭಾವದ ( ದೈವಿಕ ವಿರಹಭಾವ) ಪಾಶುರಗಳಿಗೆ ( ೫-೫ ೧ರಿಂದ ೧೧ ಪಾಶುರಗಳು… ಎಂಗನೆಯೋ ಅನ್ನೈಮೀರ್ಗಾಳ್…)ಇದೇ ಹಿನ್ನೆಲೆಯಾಯ್ತೇ? ಈ ಪಾಶುರಗಳ ಸೌಂದರ್ಯವನ್ನು ಮುಂದೆ ಸವಿಯೋಣ…

ಮುಂದೆ ಈ ದಂಪತಿಗಳಿಗೆ ಪುತ್ರಸಂತಾನಪ್ರಾಪ್ತಿಯಾಗುತ್ತದೆ. ಆದರೆ ಅದು ಉಳಿದ ಶಿಶುಗಳಂತೆ ಹಸಿವು, ನಿದ್ರೆ, ಅಳು ಏನೊಂದನ್ನೂ ಮಾಡದೇ ವಿಚಿತ್ರ ಮಗುವಿನಂತಿರುವುದನ್ನು ಕಂಡು ಪೆಚ್ಚಾದ ದಂಪತಿಗಳು ಆಳ್ವಾರ್ ತಿರುನಗರಿಯ ಆದಿನಾಥರ ದೇವಸ್ಥಾನದ ಮಹಾದ್ವಾರದಲ್ಲಿ ಅದನ್ನು ಇರಿಸಿದೊಡನೆ ಆ ಮಗು ನಿಧಾನವಾಗಿ ತೆವಳುತ್ತಾ ದೇವಸ್ಥಾನದ ಹಿಂಭಾಗದಲ್ಲಿರುವ ಹುಣಿಸೇಮರದ ಪೊಟರೆಯಲ್ಲಿ ಸೇರಿ ಧ್ಯಾನಮುದ್ರೆಯಲ್ಲಿ ಕುಳಿತುಬಿಟ್ಟಿತು.

ಅಂದಹಾಗೆ ಈ ಮಗು ಜನಿಸಿದ್ದು ಕೃಷ್ಣಾವತಾರ ಸಮಾಪ್ತಿಯಾದ ಕೆಲವೇ ದಿನಗಳಲ್ಲಿ ( ಕೆಲವೆಡೆ ೩೨ ದಿನಗಳ ನಂತರವೆಂದೂ ಮತ್ತೂ ಹಲವೆಡೆ ೪೮ ದಿನಗಳೆಂದೂ ಉಲ್ಲೇಖವಿದೆ, ಆದರೆ ಈ ದಿನಗಳ ನಿಖರತೆ ಅಷ್ಟು ಪ್ರಸ್ತುತವಲ್ಲ! ಹಾಗಾಗಿ ಕೆಲವೇ ದಿನಗಳ ನಂತರ ಎನ್ನುವುದು ಮಾತ್ರ ಈಗ ಪ್ರಸ್ತುತ…)

ಇವರು ಜನಿಸಿದ್ದು ವರ್ಣಾಶ್ರಮ ಧರ್ಮದ ನಾಲ್ಕನೇ ವರ್ಗದಲ್ಲಿ…( ವೆಲ್ಲಾಲ - ಜಮೀನ್ದಾರರ ಅಂತ್ಯ ಕುಲದಲ್ಲಿ).

ಇದರ ಬಗ್ಗೆಯೂ ವ್ಯಾಖ್ಯಾನಕಾರರು ಅದ್ಭುತವಾಗಿ ವಿವರಿಸುತ್ತಾರೆ:

ಇವರು ಜನಿಸಿದ್ದು ಕೃಷ್ಣಾವತಾರದ ಸಮಾಪ್ತಿಯಾದ ಕೆಲವೇ ದಿನಗಳ ನಂತರ ಎಂದು ಅರಿತೆವಲ್ಲವೇ?
ಶ್ರೀಕೃಷ್ಣ ಭಗವದ್ಗೀತೆಯಲ್ಲಿ “ ಚಾತುರ್ವರ್ಣಂ ಮಯಾ ಸೃಷ್ಟಂ….( ಅಧ್ಯಾಯ- ೪-೧೩) ಎಂದನಲ್ಲವೇ?

ಅದನ್ನು ಸ್ವಯಂ ಅನುಷ್ಟಾನಕ್ಕೆ ತರಲೆಂದೇ ನಾಲ್ಕು ಯುಗಗಳ ಮೊದಲ ಕೃತಯುಗದಲ್ಲಿ ಅದಿತಿ- ಕಶ್ಯಪರ ಮಗ ವಾಮನನಾಗಿ ಬ್ರಾಹ್ಮಣ ವರ್ಣದಲ್ಲಿ ಜನಿಸಿದ. ಎರಡನೆಯ ತ್ರೇತಾಯುಗದಲ್ಲಿ ಶ್ರೀರಾಮನಾಗಿ ಕ್ಷತ್ರಿಯವರ್ಣದಲ್ಲಿ ಜನಿಸಿದ.
ಮೂರನೆಯ ದ್ವಾಪರಯುಗದಲ್ಲಿ ಜನಿಸಿದ್ದೇನೋ ಕ್ಷತ್ರಿಯನಾಗಿ!( ದೇವಕಿರೂಪದ ಅದಿತಿಗೆ ಕೊಟ್ಟ ವರವನ್ನು ನೆರವೇರಿಸಲು) ಆದರೆ ಬೆಳೆದಿದ್ದು ಮತ್ತು ಲೋಕದಲ್ಲಿ ಪ್ರಸಿದ್ಧನಾಗಿದ್ದು ಗೊಲ್ಲನೆಂದೇ! ( ವೈಶ್ಯ ಅಥವಾ ವರ್ತಕ ಕುಟುಂಬದಲ್ಲಿ ಬೆಳೆದ).
ಇನ್ನು ಉಳಿದಿದ್ದು ನಾಲ್ಕನೆಯ ಯುಗ ಮತ್ತು ನಾಲ್ಕನೆಯ ವರ್ಣ .ಅಂತೆಯೇ ಕಲಿಯುಗದಲ್ಲಿ ಈ ವರ್ಣದಲ್ಲಿ ದೈವಾಂಶಸಂಭೂತರಾಗಿ (ಇವರು ಭಗವಂತನ ಸೇನಾಪಡೆಯ ನಾಯಕ ವಿಷ್ವಕ್ಸೇನರ ಅಂಶವೂ ಕೂಡ), ಭಗವಂತನ ಕೃಪೆಯಿಂದ ಜನಿಸಿ, ಭಗವದ್ಭಕ್ತರಿಗೆ , ಭಗವಂತನಿಗೆ ಯಾವ ಜಾತಿಯೂ ಮೇಲು- ಕೀಳೆಂಬುದಿಲ್ಲ ಎಂದು ನಮಗೆ ತೋರಿದರು.

ಈ ವಿಚಿತ್ರ ಶಿಶು ತನ್ನ ೧೬ ನೇ ವರ್ಷದ ತನಕ ಹಸಿವು, ದಾಹ , ನಿದ್ರೆ ಮುಂತಾದ ಯಾವುದೇ ಪ್ರಾಕೃತಿಕ, ದೈನಂದಿನ ಅಗತ್ಯಗಳಿಂದ ಬಾಧಿಸಲ್ಪಡಲೇ ಇಲ್ಲ. ಆದರೂ ಕೂಡ ಇದು ಮಿಕ್ಕ ಮಕ್ಕಳಂತೆಯೇ ದಷ್ಟಪುಷ್ಟ, ಆರೋಗ್ಯ ಮಗುವಾಗಿಯೇ ಬೆಳೆಯಿತು.
ಅಂತೆಯೇ ಈ ಮಗುವನ್ನು ಹೆತ್ತವರು ಇದನ್ನು “ ಮಾರನ್”( ಬದಲಾಗದವನು) ಎಂದೇ ಕರೆದರು!

ಈ ಶಿಶುವಿಗೆ ಇನ್ನೂ ಹಲವಾರು ಅಲೌಕಿಕ, ಅನ್ವರ್ಥ ನಾಮಗಳು ಇವೆ, ಮತ್ತು ಈ ನಾಮಗಳಿಗೆ ಸಂಬಂಧಿಸಿದ ಹಲವಾರು ಚರಿತ್ರೆ, ಐತಿಹ್ಯಗಳೂ ಇವೆ.

ಇವುಗಳನ್ನು ಮುಂದಿನ ಕಂತಿನಲ್ಲಿ ನೋಡೋಣ.

ನಮ್ಮಾಳ್ವಾರ್ ತಿರುವಡಿಗಳೇ ಶರಣಂ