ನಮ್ಮಾಳ್ವಾರ್ ವೈಭವಂ - ಭಾಗ - ೨ | Nammalvar
“ಮಾರನ್ “ ಎಂದು ತನ್ನ ಹೆತ್ತವರಿಂದ ಕರೆಯಲ್ಪಟ್ಟ ನಮ್ಮಾಳ್ವಾರ್ ಅವರಿಗೆ ಇನ್ನೂ ಹಲವು ಹೆಸರುಗಳು ದೊರೆತವು ಎಂದು ಕಳೆದ ಸಂಚಿಕೆಯ ಕೊನೆಯಲ್ಲಿ ನೋಡಿದೆವಲ್ಲವೇ? ಅವುಗಳನ್ನು ಕ್ರಮೇಣ ಈಗ ನೋಡೋಣ…

ಇವರ ಮೊದಲ ಅನ್ವರ್ಥ ನಾಮ “ ಶಠಜಿತ್ - ಶಠಗೋಪ- ಶಠಾರಿ”…

ಈ ಮೂರೂ ನಾಮಗಳಲ್ಲಿ “ ಶಠ” ಎನ್ನುವುದು ಸಾಮಾನ್ಯ ಪದ… ಮತ್ತು ಮೂರೂ ನಾಮಗಳ ಒಟ್ಟು ಅರ್ಥವೆಂದರೆ “ಶಠ” ವನ್ನು ಗೆದ್ದವರು/ “ ಶಠ”ಕ್ಕೆ ವೈರಿ ಇತ್ಯಾದಿ …

ಆದರೆ ಈ “ ಶಠ” ಎಂದರೇನು? ಶಠ ಎಂದರೆ ನಾವು ಸಾಮಾನ್ಯ ಮನುಷ್ಯರ ಸುತ್ತಲೂ ಆವರಿಸಿರುವ ಗಾಳಿ. ಆದರೆ ಇದು ಅಂತಿಂಥ ಗಾಳಿಯಲ್ಲ. ಅಜ್ಞಾನ ಅಥವಾ ಲೌಕಿಕ ಕಾಮನೆಗಳಿಂದ ಕೂಡಿದ ಗಾಳಿ( ವಾತಾವರಣ- environment ಎಂದು ಅರ್ಥೈಸಬಹುದು).ಅಂದರೆ ಈ ಅಲೌಕಿಕ ಮಗು ಈ ಗಾಳಿಯನ್ನೇ ಗೆದ್ದಿತ್ತು.

ವ್ಯಾಖ್ಯಾನಕಾರರೂ ಮತ್ತು ಹಲವು ಉಪನ್ಯಾಸಕಾರರು ಈ ನಾಮದ ಹಿಂದಿನ ಅರ್ಥವನ್ನು ಅದ್ಭುತವಾಗಿ ವಿವರಿಸುತ್ತಾರೆ:

( ಇದು ಶ್ರೀಮದ್ಭಾಗವತದ ೩ನೇ ಸ್ಕಂಧದಲ್ಲೂ ಕಪಿಲ ಮಹಾಮುನಿಗಳಿಂದ ವರ್ಣಿಸಲ್ಪಟ್ಟಿದೆ…)

ಸಾಮಾನ್ಯವಾಗಿ ಒಂದು ಗರ್ಭಸ್ಥ ಶಿಶುವಿಗೆ ಪಂಚೇಂದ್ರಿಯ- ಜ್ಞಾನೇಂದ್ರಿಯಗಳು ತಾಯಗರ್ಭದಲ್ಲೇ ಮೊಳೆತು ಬೆಳೆದಂತೆಲ್ಲಾ ಬಾಹ್ಯ ಪ್ರಪಂಚಕ್ಕೆ ಬರುವ ತನಕ ಆ ಭ್ರೂಣಕ್ಕೆ (ಶಿಶುವಿಗೆ) ಅದರ ಪೂರ್ವಜನ್ಮಗಳ ಸ್ಮರಣೆ ಇರುತ್ತದಂತೆ. ಆದರೆ ಒಮ್ಮೆ ಈ ಬಾಹ್ಯ ಪ್ರಪಂಚಕ್ಕೆ ಕಾಲಿರಿಸಿದೊಡನೆ, ಇಲ್ಲಿನ ವಾಯುಸೇವನೆಯಿಂದ ಆ ಸ್ಮರಣೆಯೆಲ್ಲಾ ನಿಧಾನವಾಗಿ ಮಸುಕಾಗುತ್ತಾ ಕೊನೆಗೊಮ್ಮೆ ಮರೆಯಾಗುತ್ತದಂತೆ.ಅದು ಈ “ ಶಠ” ಎಂಬ ಮಾಯಾ ಗಾಳಿಯ ಪ್ರಭಾವ. ಈ ಗಾಳಿ ತನ್ನನ್ನು ಸೋಕದಂತೆ ಅದನ್ನೇ ಗೆದ್ದವರು ಈ ಆಳ್ವಾರ್. ಅಂತೆಯೇ ಮೇಲೆ ಹೇಳಿದ ಹೆಸರುಗಳೆಲ್ಲಾ ಇವರಿಗೆ ಅನ್ವರ್ಥನಾಮಗಳಾದವು. ಮತ್ತು ಲೌಕಿಕ ಹಸಿವು, ದಾಹ, ನಿದ್ರೆ ಮುಂತಾದ ಯಾವ ಕ್ರಿಯೆಗಳೂ ಅವರನ್ನು ಬಾಧಿಸಲೇ ಇಲ್ಲ.

ಅಂತೆಯೇ ಅವರು ಭಗವಂತನ ಧ್ಯಾನದಲ್ಲೇ ತಮ್ಮ ಹಸಿವು, ದಾಹ ಇತ್ಯಾದಿಗಳನ್ನು ಪೂರೈಸಿಕೊಂಡರು.
ತಮ್ಮ ತಿರುವಾಯ್ಮೊಳಿಯ (೬-೭-೧) ರಲ್ಲಿ ಅವರೇ ಹೇಳುವಂತೆ “ ಉಣ್ಣುಂ ಶೋರು( ಪೋಷಕ), ಪರುಗುಂ ನೀರು ( ಧಾರಕ) ತಿನ್ನುಂ ವೆತ್ರಿಲೈ( ಭೋಗ್ಯ) ಎಲ್ಲಾಂ ಕಣ್ಣನ್” ಎಂದು ಭಗವನ್ನಾಮ ಜಪದಲ್ಲೇ ಅವರು ಜೀವಧಾರಣೆಯ ಉಪಾಯವನ್ನು ಕಂಡುಕೊಂಡರು.

ಎರಡನೆಯದಾಗಿ ಇವರಿಗೆ “ ವಕುಳಾಭರಣ” ಎಂಬ ತಿರುನಾಮವೂ ಇದೆ. ಆಳ್ವಾರ್ ತಿರುನಗರಿಯ ಆದಿನಾಥ ತನ್ನ ಕೈಯ್ಯಾರೆ ಇವರಿಗೆ ಈ ಬಕುಳಮಾಲೆಯನ್ನು ತೊಡಿಸಿ “ ನಮ್ಮಾಳ್ವಾರ್” ಎಂದು ಕರೆದನಂತೆ. ಈ ಹಾರವೇ ಅವರಿಗೊಂದು ಆಭರಣವಾಯ್ತು.

ಮೂರನೆಯದಾಗಿ … ನಮ್ಮಾಳ್ವಾರ್ ಅವರಿಗೆ “ ವೇದಂ ತಮಿಳ್ ಶೈದ ಮಾರನ್” ಎಂದೂ ಹೆಸರು .

ಚತುರ್ಮುಖ ಬ್ರಹ್ಮನಿಂದ ಹೊರಹೊಮ್ಮಿದ ಸಂಸ್ಕೃತ ಭಾಷೆಯಲ್ಲಿದ್ದ ೪ ವೇದಗಳನ್ನು ತಮಿಳುಭಾಷೆಯಲ್ಲಿ ನಾಲ್ಕು ಪ್ರಬಂಧಗಳನ್ನಾಗಿ ರಚಿಸಿ, ಸಾಮಾನ್ಯರಿಗೂ ಅರ್ಥವಾಗುವಂತೆ ವೇದಗಳ ಸಾರವನ್ನು ಉಣಬಡಿಸಿದ್ದರಿಂದ ನಮ್ಮಾಳ್ವಾರ್ ಅವರಿಗೆ ಈ ಹೆಸರಾಯ್ತು.
ಇವರು ರಚಿಸಿದ ತಿರುವಿರುತ್ತಂ -ಋಗ್ವೇದದ ಸಾರ, ತಿರುವಾಶಿರಿಯಂ -ಯಜುರ್ವೇದದ ಸಾರ, ಪೆರಿಯತಿರುವಂದಾದಿ- ಅಥರ್ವಣವೇದದ ಸಾರ ಮತ್ತು ತಿರುವಾಯ್ಮೊಳಿ- ಸಾಮವೇದದ ಸಾರ ಎಂದು ಪರಿಗಣಿಸಲ್ಪಡುತ್ತದೆ…

ಇವರ ನಾಲ್ಕು ಪ್ರಬಂಧಗಳ ವಿಷಯಗಳ ಸೌಂದರ್ಯವನ್ನು ತಿರುವಾಯ್ಮೊಳಿಯ ಪ್ರಾರಂಭದಲ್ಲಿ ಬರುವ, ನಾಥಮುನಿಗಳ ವಿರಚಿತ ತನಿಯನ್ ಬಹು ಸುಂದರವಾಗಿ ವರ್ಣಿಸುತ್ತದೆ…

ಭಕ್ತಾಮೃತಮ್ ವಿಶ್ವಜನಾನುಮೋದನಮ್
ಸರ್ವಾರ್ಥದಮ್ ಶ್ರೀ ಶಠಕೋಪ ವಾಙ್ಮಯಮ್
ಸಹಸ್ರ ಶಾಖೋಪನಿಷತ್ ಸಮಾಗಮಮ್
ನಮಾಮ್ಯಹಮ್ ದ್ರಾವಿಡ ವೇದ ಸಾಗರಮ್

ಅರ್ಥ:
ತಮ್ಮ ನಾಲಿಗೆಯನ್ನೇ ಸಮುದ್ರಮಥನದ ರೀತಿಯಲ್ಲಿ ಕಡೆದು, ಅದರಿಂದ ಹೊರಹೊಮ್ಮಿದ, ಅಮೃತಕ್ಕೆ ಸಮಾನವಾದ , ಸಾವಿರಾರು ಶಾಖೆಗಳನ್ನೊಳಗೊಂಡ ಉಪನಿಷತ್ ಗಳ ಸಂಕಲನವಾದ ವೇದಗಳ ಸಾರವನ್ನು ವಿಶ್ವದ ಸಮಸ್ತ ಭಕ್ತರಿಗೂ ಆನಂದವಾಗುವ ರೀತಿಯಲ್ಲಿ ಉಣಬಡಿಸಿದ , ಶಠಗೋಪರ ತಿರುವದನದಿಂದ ಹೊರಹೊಮ್ಮಿದ ದ್ರಾವಿಡ ವೇದದ ಸಾಗರಕ್ಕೆ ನಾನು ತಲೆಬಾಗುತ್ತೇನೆ.

ಇವರು ಆಳ್ವಾರ್ ತಿರುನಗರಿಯಲ್ಲಿ ಹುಟ್ಟಿದ್ದರಿಂದ “ ತಿರುಕ್ಕುರುಗೈಪ್ಪಿರಾನ್” ಎಂದೂ ಹೆಸರು.

ಇವರಿಗೆ ಪರಾಂಕುಶರೆಂಬ ಹೆಸರೂ ಇತ್ತು. ಅಂದರೆ ಲೌಕಿಕ ಕಾಮನೆಗಳನ್ನು ಭಗವದ್ಭಕ್ತಿಯೆಂಬ ಅಂಕುಶದಿಂದ ತಡೆದವರು ಎಂದು ಅರ್ಥ.
ಅಂತೆಯೇ ಇವರು ತಮ್ಮ ತಿರುವಾಯ್ಮೊಳಿಯಲ್ಲಿ ಭಗವಂತನೆಡೆಗಿನ ದೈವಿಕ ವಿರಹಭಾವದ ಪಾಶುರಗಳನ್ನು ನಾಯಿಕಾಭಾವದಲ್ಲಿ ಹಾಡುವಲ್ಲಿ ಈ ನಾಯಕಿಗೆ ಪರಾಂಕುಶನಾಯಕಿ ಎಂದು ಹೆಸರು.

ಇವರಿಗೆ ಇನ್ನೊಂದು ಬಹು ಸುಂದರ ಅನ್ವರ್ಥ ನಾಮವೂ ಉಂಟು- “ಪ್ರಪನ್ನಜನಕೂಟಸ್ಥರು” ಎಂದು…(ನಮ್ಮ ಶ್ರೀವೈಷ್ಣವರಲ್ಲಿ ಯಾವುದೇ ಶುಭಸಮಾರಂಭ ನಡೆದಾಗಲೂ ಆಳ್ವಾರ್ ಆಚಾರ್ಯ ಸಂಭಾವನೆಯ ಕಲಾಪ ನಡೆದಾಗ ಪ್ರಪನ್ನಜನಕೂಟಸ್ಥರಾನ ನಮ್ಮಾಳ್ವಾರ್ ಸಂಭಾವನೈ ಎನ್ನುವಉಲ್ಲೇಖ ಬರುವುದನ್ನು ಗಮನಿಸಿ)
ಇದರ ಅರ್ಥ- ಭಗವಂತನಲ್ಲಿ ಶರಣಾಗತಿ ಮಾಡಿದವರಿಗೆಲ್ಲ ಇವರು ಮುಖ್ಯಸ್ಥರು ಎಂದು.

ಇವರನ್ನು ಈ ಸ್ಥಾನಕ್ಕೆ ನಿಯಮಿಸಿರುವುದು ಬೇರಾರೂ ಅಲ್ಲ! ಆ ಭಗವಂತನೇ.. ಹಾಗೆಂದು ಅವರೇ ತಮ್ಮ ತಿರುವಾಯ್ಮೊಳಿಯಲ್ಲಿ ೭-೯-೩) ಹೇಳಿಕೊಂಡಿದ್ದಾರೆ…

ಆ ಮುದಲ್ವನ್ ಇವನ್ ಎನ್ ಱು ತನ್ ತೇತ್ತಿ, ಎನ್ ನಾ ಮುದಲ್ ವಂದು ಪುಹುನ್ದು, ನಲ್ ಇನ್ ಕವಿ ತೂ ಮುದಲ್ ಪತ್ತರ್ಕು ತಾನ್ ತನ್ನೈ ಚ್ಚೊನ್ನ ಎನ್ವಾಯ್ ಮುದಲ್ ಅಪ್ಪನೈ
ಎನ್ ಱು ಮಱಪ್ಪನೋ.

ಈ ಪಾಶುರದ ಅರ್ಥ:

ತನ್ನನ್ನು ಶರಣುಹೊಂದಿದವರಿಗೆಲ್ಲ ನಾನು ಮುಖ್ಯಸ್ಥನಾಗಿರಬೇಕೆಂದು ಆಶಿಸಿದ ಆತ ( ನನ್ನೊಡೆಯ) ಅದಕ್ಕೆ ಅನುಕೂಲವಾಗುವಂತೆ ನನ್ನ ನಾಲಿಗೆಯಲ್ಲಿ ಹೊಕ್ಕು ತನ್ನ ಪರವಾದ ಸ್ತುತಿಗಳನ್ನು ನನ್ನಿಂದ ಪಡೆದುಕೊಂಡ. ಇದು ಆತನದೇ ಕೃಪೆಯಿಂದ ಹೊರಹೊಮ್ಮಿದ ಆತನ ಸ್ತುತಿ. ಇದರಲ್ಲಿ ನನ್ನ ಹೆಗ್ಗಳಿಕೆ ಏನೂ ಇಲ್ಲ. ಆತನ ಈ ಕೃಪೆ, ಉಪಕಾರವನ್ನು ನಾನು ಹೇಗೆ ತಾನೇ ಮರೆಯಲಿ?”

ಈ ಪಾಶುರದಲ್ಲಿ ಮೊದಲಿಗೆ ಬರುವ “ ಆ ಮುದಲ್ವನ್” ಎನ್ನುವ ಪದ ಬಹಳ ಮಹತ್ವವುಳ್ಳದ್ದು. ಇದು ರಾಮಾನುಜರ ಚರಿತ್ರೆಯಲ್ಲಿನ ಒಂದು ಘಟನೆಯನ್ನೂ ಹೋಲುತ್ತದೆ.

ಇವರಿಬ್ಬರೂ ಪ್ರತ್ಯಕ್ಷವಾಗಿ ಸಂಧಿಸದಿದ್ದರೂ ಕಾಂಚಿಯಲ್ಲಿ ದೂರದಿಂದಲೇ ರಾಮಾನುಜರನ್ನು ಕಂಡು, ಅವರ ತೇಜಸ್ಸು, ವರ್ಚಸ್ಸಿಗೆ ಬೆರಗಾದ ಯಾಮುನಾಚಾರ್ಯರಿಂದ ಹೊರಟ ಮೊದಲ ಉದ್ಗಾರವೇ ಇದು “ ಆ ಮುದಲ್ವನ್” ಎಂದು!

ಅಂತೆಯೇ ನಮ್ಮಾಳ್ವಾರ್ ಅವರ ಶಿಷ್ಯರಿಗೆ ತಾಮ್ರಪರ್ಣಿ ನದಿಯಲ್ಲಿ ದೊರೆತ ಎರಡು ವಿಗ್ರಹಗಳಲ್ಲಿ ಒಂದು ನಮ್ಮಾಳ್ವಾರ್ ಅವರನ್ನೂ ಮತ್ತೊಂದು ವಿಗ್ರಹ ಮುಂಬರುವ “ ಭವಿಷ್ಯದಾಚಾರ್ಯ” ರಾಮಾನುಜರನ್ನು ಹೋಲುತ್ತಿತ್ತು… ಇದು ಆ ಭಗವಂತನ ಸಂಕೇತ, ಕೃಪೆಯೇ ಅಲ್ಲವೇ?

ಎಲ್ಲಾ ಆಳ್ವಾರ್ ಗಳಲ್ಲೂ ಇವರು ಒಂದು ಜ್ಯೋತಿಯ ಮುಖೇನ ( ಸೂರ್ಯನಂತೆ ) ಬೆಳಗಿದವರು. ಹೇಗೆ ಗೊತ್ತೇ?

ತಮಗೆ ಸೂಕ್ತ ಗುರುವನ್ನು ಅರಸುತ್ತಾ ಉತ್ತರಭಾರತಕ್ಕೆ ಬಂದ ಮಧುರಕವಿ ಆಳ್ವಾರ್ ಅವರು ದಕ್ಷಿಣದಿಕ್ಕಿನಲ್ಲಿ ಬೆಳಗುತ್ತಿದ್ದ ದಿವ್ಯಜ್ಯೋತಿಯಿಂದ ಆಕರ್ಷಿತರಾಗಿ, ಕುತೂಹಲದಿಂದ ಆ ಜ್ಯೋತಿಯ ಮೂಲಸ್ಥಾನವಾದ ಆಳ್ವಾರ್ ತಿರುನಗರಿಗೆ ಬರದಿದ್ದರೆ,ಅಲ್ಲಿ ನಡೆದ ಸಾಂಕೇತಿಕ ಪ್ರಶ್ನೋತ್ತರ ಸಂಭಾಷಣೆಯ ಮೂಲಕ ನಮ್ಮಾಳ್ವಾರ್ ಅವರ ಮಹಿಮೆಯನ್ನು ಅರಿತು ಅವರಿಗೆ ಶಿಷ್ಯರಾಗಿ ಅವರಿಂದ ರಚಿತ ದಿವ್ಯಪ್ರಬಂಧಗಳನ್ನು ಬರೆಹರೂಪದಲ್ಲಿ ದಾಖಲಿಸದಿದ್ದರೆ… ಇಂದು ನಮಗೆ ಜ್ಞಾನಜ್ಯೋತಿ ಸ್ವರೂಪದ ಇವರ ಪ್ರಬಂಧಗಳಷ್ಟೇ ಅಲ್ಲ, ಪೂರ್ತಿ ನಾಲಾಯಿರಂ ಪ್ರಬಂಧಗಳೇ ದೊರೆಯುತ್ತಿರಲಿಲ್ಲ…
( ನಮ್ಮಾಳ್ವಾರ್ ಅವರ “ ಆರಾವಮುದೇ…(೫-೮) ಪಾಶುರದಿಂದ ಆಕರ್ಷಿತರಾದ ನಾಥಮುನಿಗಳು ಮಧುರಕವಿ ಆಳ್ವಾರ್ ಅವರ ನಾಮಜಪದಿಂದ ನಮಗೆಲ್ಲ ನಾಲಾಯಿರಂ ಪ್ರಬಂಧಗಳನ್ನು ದೊರಕಿಸಿಕೊಟ್ಟ ಕತೆ ಈ ಮೊದಲಿನ ಕತೆಯ ಮುಂದುವರಿದ ಭಾಗ).

ನಾಲಾಯಿರ ದಿವ್ಯಪ್ರಬಂಧಗಳನ್ನು ರಚಿಸಿದ ಎಲ್ಲಾ ೧೨ ಆಳ್ವಾರ್ ಗಳನ್ನು ಒಟ್ಟಾಗಿ ಒಂದು ಪವಿತ್ರ ದೇಹವೆಂದು ಭಾವಿಸಿದರೆ, ಈ ದೇಹದ ಆತ್ಮ - ಹೃದಯಸ್ವರೂಪರಾದವರು ನಮ್ಮಾಳ್ವಾರ್ ಎಂದೂ ಉಳಿದೆಲ್ಲಾ ಆಳ್ವಾರ್ ಗಳು ಈ ದೇಹದ ವಿವಿಧ ಅಂಗಗಳೆಂದೂ ವ್ಯಾಖ್ಯಾನಕಾರರೂ, ಉಪನ್ಯಾಸಕಾರರೂ ಕೊಂಡಾಡುತ್ತಾರೆ.

ನಮ್ಮಾಳ್ವಾರ್ ಅವರ ಇನ್ನೊಂದು ವೈಶಿಷ್ಟ್ಯವೇನೆಂದರೆ, ಇವರು ಶ್ರೀವೈಷ್ಣವರ ಯಾವುದೇ ೧೦೮/೧೦೬ ದಿವ್ಯದೇಶಗಳನ್ನು ಖುದ್ದಾಗಿ ದರ್ಶಿಸದೆಯೇ, ಬದಲಾಗಿ ಅಲ್ಲಿನ ದೇವರನ್ನೇ ತಮ್ಮ ಮುಂದೆ ಬರುವಂತೆ ಮಾಡಿ ಅವರ ಬಗ್ಗೆ ಪಾಶುರಗಳನ್ನು ಹಾಡಿದವರು.
ಹೀಗೆ ಹಲವಾರು ರೀತಿಯಲ್ಲಿ ವಿಶಿಷ್ಟರಾದ ನಮ್ಮಾಳ್ವಾರ್ ಅವರ ಪ್ರಬಂಧಗಳು, ಅವುಗಳ ಮಹತ್ವ, ತತ್ವಗಳು, ಐತಿಹ್ಯಗಳ ಬಗ್ಗೆ ಮುಂದಿನ ಕಂತಿನಲ್ಲಿ ಅರಿಯೋಣ.

ನಮ್ಮಾಳ್ವಾರ್ ತಿರುವಡಿಗಳೇ ಶರಣಂ