ಒಂದು ಊರಿನಲ್ಲಿ ಒಬ್ಬ ಬೇಡನಿದ್ದ ಅವನು ಮಾಡಬಾರದಂತ ಎಲ್ಲಾ ತರಹದ ಪಾಪ ಕೃತ್ಯಗಳನ್ನು ಮಾಡಿ ಮುಗಿಸಿದ್ದ. ಜಗತ್ತಿನೊಳಗೆ ಪಾಪ ಕಾರ್ಯಗಳು ಎಷ್ಟು ಇವೆಯೋ ಎಲ್ಲವನ್ನು ಕಾರ್ಯ ರೂಪದಲ್ಲಿ ತಂದು ತಂದು ಅದನ್ನು ತನ್ನ ಮನೆಯಲ್ಲಿ ತುಂಬುತ್ತಿದ್ದನು. ಒಂದು ಸಲ ಅವನು ಬೇಟೆಯಾಡಲು ಅರಣ್ಯದೊಳಗೆ ಹೋದನು. ಇಡೀ ಅರಣ್ಯವನ್ನೆಲ್ಲ ಸುತ್ತು ಹಾಕಿದರೂ ಅವನಿಗೆ ಒಂದು ಬೇಟೆಯೂ ಸಿಗಲಿಲ್ಲ. ಕೊನೆಗೆ ಅವನ ಕಣ್ಣಿಗೆ ಒಂದು ಭಯಂಕರವಾದ ಕಾಡು ಹಂದಿ ಕಾಣಿಸಿ ತು. ಒಂದು ನಿಮಿಷವು ತಡ ಮಾಡದೆ ಬಿಲ್ಲಿಗೆ ಬಾಣ ಹೂಡಿ, ಹೆದೆಯನ್ನೇರಿಸಿ ಬಾಣ ಬಿಟ್ಟನು. ಆ ಬಾಣ ವಾಯು ವೇಗದಿಂದ ಹೋಗಿ ಕಾಡು ಹಂದಿಯ ಹೊಟ್ಟೆಯೊಳಗೆ ನೆಟ್ಟಿತು. ಆದರೆ ಅದರಿಂದ ಅದಕ್ಕೆ ಪ್ರಾಣ ಹೋಗುವಂತ ಗಾಯವೇನು ಆಗಲಿಲ್ಲ. ಅರ್ಧಂಬರ್ಧ ಗಾಯವಾದ ಆ ಹಂದಿ ಸಿಟ್ಟಿಗೆದ್ದು ತನ್ನ ಪ್ರಾಣವನ್ನು ಲೆಕ್ಕಿಸದೆ ಓಡಿಬಂದು ಬೇಡನ ಮೇಲೆ ಎಗರಿತು.
ಬೇಡನು ತಾನು ಬಿಟ್ಟ ಬಾಣ ಹಂದಿಗೆ ತಗಲಿದೆ ಎಂಬ ಸಂತೋಷದಲ್ಲಿ ಮೈ ಮರೆತು ಕನಸು ಕಾಣುತ್ತಿದ್ದನು. ದೊಡ್ಡ ಗಾತ್ರದ ಕಾಡು ಹಂದಿಯು ಮೈ ಮೇಲೆ ಏರಿ ಬಂದದ್ದು ಅವನಿಗೆ ಗೊತ್ತಾಗದೆ ಕಾಲ ಮಿಂಚಿ ಹೋಗಿತ್ತು. ಅಜಾಗರೋಕನಾಗಿದ್ದ ಬೇಡನು ಹಂದಿಯ ಹಲ್ಲಿನ ಇರಿತಕ್ಕೆ ಒಳಗಾದನು. ಆ ಕಾಡು ಹಂದಿ ತನ್ನ ಕೋರೆ ಹಲ್ಲಿ ನಿಂದ ಅವನ ಹೊಟ್ಟೆಯನ್ನು ಸಿಗಿದು ಕೊಂದು ಹಾಕಿತು. ಇಷ್ಟೇ ಅಲ್ಲದೆ ಈ ಮೊದಲೇ ಕಾಡು ಹಂದಿಗೆ ಬೇಡ ಹೊಡೆದ ಬಾಣ ಅದರ ದೇಹ ಸೇರಿ ಆದ ಗಾಯದ ನೋವು ಹಾಗೂ ಬಾಣದ ವಿಷ ದಿಂದ ಹಂದಿಯು ಅಲ್ಲಿಯೇ ಸತ್ತು ಬಿದ್ದಿತು.
ಅದೇ ಸಮಯಕ್ಕೆ ಹಸಿದು ಕಂಗಾಲಾಗಿದ್ದ ಒಂದು ನರಿಯು ಅಲ್ಲಿಗೆ ಬಂದಿತು. ಎರಡು ಮೂರು ದಿವಸಗಳಿಂದ ಆಹಾರವಿಲ್ಲದೆ ತೀರ ನಿತ್ರಾಣಗೊಂಡಿದ್ದ ಅದು ಸಾಯುವ ಪರಿಸ್ಥಿತಿಯಲ್ಲಿ ಇತ್ತು . ಅದು ಬಂದೊಡನೆ ಸತ್ತು ಬಿದ್ದಿದ್ದ ಬೇಡ ಮತ್ತು ಕಾಡು ಹಂದಿಯ ದೇಹಗಳು ಅದಕ್ಕೆ ಸಿಕ್ಕಂತಾಯಿತು. ಹಸಿದು ಕಂಗೆಟ್ಟಿದ್ದ ಅದು ಆ ಎರಡು ದೇಹಗಳನ್ನು ನೋಡುತ್ತಲೇ, ನರಿಗೆ ಅತ್ಯಂತ ಸಂತೋಷವಾಯಿತು. ಅದು ಮನದಲ್ಲಿ ಅಂದುಕೊಂಡಿತು. ಇಂದು ನಿಜಕ್ಕೂ ನನ್ನ ಭಾಗ್ಯದ ಬಾಗಿಲು ತೆರೆದಿದೆ ಅದಕ್ಕಾಗಿಯೇ ಅನಿರೀಕ್ಷಿತವಾಗಿ ಇಂಥ ಭೋಗ ವಸ್ತುಗಳು ದೊರೆತವು. ದೈವವು ಬಲವಾಗಿದ್ದರೆ ಯಾವ ತೊಂದರೆಯೂ ಇಲ್ಲದೆ ಆಹಾರ ಪದಾರ್ಥ ಸಿಗುವುದು ಎಂದು ಹಿರಿಯರು ಹೇಳುವ ಮಾತು ಸುಳ್ಳಲ್ಲ .ನಾನು ಬಹಳ ದಿನಗಳಿಂದ ಆಹಾರವಿಲ್ಲದೆ ಹಸಿವೆಯಿಂದ ಕಂಗೆಟ್ಟಿದ್ದೆ. ನನಗೆ ತಿಂದು ತೇಗುವಷ್ಟು ಸೊಗಸಾದ ಭೋಜನ ಸಿಕ್ಕಿದೆ. ಇಷ್ಟೊಂದು ಆಹಾರವನ್ನು ಒಂದೇ ದಿನ ತಿನ್ನಲು ಆಗುವುದಿಲ್ಲ ಆದುದರಿಂದ ಈ ಆಹಾರವನ್ನು ಸಂಗ್ರಹಿಸಿಟ್ಟು ತಿನ್ನಬೇಕು ಎಂದುಕೊಂಡಿತು.
ಹಾಗೆ ಮತ್ತೆ ಅದು ಯೋಚಿಸಿತು, ಹಂದಿಯ ಹೊಟ್ಟೆಯೊಳಗೆ ನೆಟ್ಟಿದ್ದ ಬಾಣದ ತುದಿಯಲ್ಲಿರುವ ಮಾಂಸವನ್ನು ಮೊದಲು ತಿನ್ನುತ್ತೇನೆ ಎಂದು ಮನದಲ್ಲಿ ನಿರ್ಧರಿಸಿಕೊಂಡು ಹಂದಿಗೆ ಚುಚ್ಚಿದ ಬಾಣದ ತುದಿಯ ಮಾಂಸವನ್ನು ತಿನ್ನಲು ಹೋಗಿ ಆತುರದಿಂದ ಬಾಣದ ತುದಿಗೆ ಒಮ್ಮೆಲೇ ತನ್ನ ಬಾಯನ್ನು ಹಾಕಿತು. ಆಗ ಆ ಬಾಣದ ತುದಿಯ ಚೂಪು ನರಿಯ ಬಾಯೊಳಗೆ ಬಲವಾಗಿ ನೆಟ್ಟು ಅಲ್ಲಿಯೇ ನರಿಯು ಸತ್ತು ಹೋಯಿತು.
ಮನುಷ್ಯನು ಯಾವುದರಲ್ಲೆ ಆಗಲಿ, ಅವನಿಗಿರುವ ಅವಶ್ಯಕತೆಗಿಂತ ಹೆಚ್ಚಿನ ಆಸಕ್ತಿಯನ್ನು ತೋರಿಸಬಾರದು. ಹಾಗೆ ಅತಿಯಾದ ಆಸೆ ತೋರಿಸಿ ಪಡೆಯಲು ಹೋದರೆ ಅದರಿಂದ ಕೆಡಕಾಗುವುದೇ ವಿನಃ ಒಳ್ಳೆಯದು ಆಗಲಾರದು. ನರಿಗೆ ಬೇಕಾದಷ್ಟು ಆಹಾರವನ್ನು ಭಗವಂತ ಕೊಟ್ಟಿದ್ದರೂ, ಅದನ್ನು ಉಳಿಸಿ ಕೂಡಿಡುವ ಯೋಚನೆ ಮಾಡಿ ಜೀವವನ್ನೇ ಕಳೆದುಕೊಂಡಿತು. ಅಂದಿನ ಆಹಾರವನ್ನು ತಿನ್ನುವುದು ಬಿಟ್ಟು ಕೂಡಿಡುವ ದುರಲೋಚನೆ ಮಾಡಿದ ನರಿ ತನ್ನ ಜೀವವನ್ನೇ ಕಳೆದುಕೊಂಡಿತು.
ಯಾವದ್ ಭ್ರೀಯೇತ ಜಠರಂ ತಾವತ್ ಸ್ವತ್ವಂ ಹಿ ದೇಹೀನಾಮ್!
ಅಧಿಕ ಯೋಭಿ ಮನ್ಯೇತ ಸ ಸ್ತೇನೋ ದಂಡ ಮರ್ಹತಿ !!
ಉದರ ಪೋಷಣೆಗೆ ಬೇಕಾಗುವಷ್ಟು ಸಂಪತ್ತು ಮಾತ್ರ ಮಾನವರ ಸ್ವತ್ತು. ಅದಕ್ಕಿಂತ ಹೆಚ್ಚಿನ ಸಂಪತ್ತನ್ನು ಯಾವನು ಬಯಸುತ್ತಾನೋ ಆತನು ಕಳ್ಳ ಆದ್ದರಿಂದಲೇ ದಂಡಾರ್ಹ.