ಶ್ರಿವೈಷ್ಣವ ಸಂಪ್ರದಾಯದಲ್ಲಿ ಅತ್ಯಂತ ಪ್ರಮುಖರಾದ ಹನ್ನೆರಡು ಆಳ್ವಾರ್ ಸಂತರಲ್ಲಿ ಒಬ್ಬಳೇ ಮಹಿಳೆ ಇದ್ದಾಳೆ. ಆಕೆಯೇ ಆಂಡಾಳ್. ಇಂದು ಆಕೆ ಜನಿಸಿದ ದಿನ. ಇದು 'ತಿರುವಾಡಿ ಪೂರಮ್' ಎಂಬ ಹಬ್ಬವಾಗಿ ಪ್ರಸಿದ್ಧಿ ಪಡೆದಿದೆ.

ವೈಷ್ಣವಭಕ್ತಿ ಪಂಥದಲ್ಲಿ ಹುಟ್ಟಿದ ಭಕ್ತರಿಗೆ ಆಳ್ವಾರುಗಳೆಂದು ಹೆಸರು. ಆಳ್ವಾರ್ ಅಂದರೆ ಭಗವದ್ಭಕ್ತಿಯಲ್ಲಿ ಮುಳುಗಿದವರು ಎಂದು ಅರ್ಥ. ಇವರು ಹನ್ನೆರಡು ಮಂದಿ. ಆಳ್ವಾರುಗಳಲ್ಲಿ ಹೆಣ್ಣು ಆಳ್ವಾರ್ ಆಂಡಾಳ್. ತಿರುಪ್ಪಾಣ ಎಂಬ ಹರಿಜನ ಆಳ್ವಾರರು ಒಬ್ಬರು. ಈ ಪಂಥದಲ್ಲಿ ಮೇಲು ಕೀಳು ಎಂಬ ಭಾವಕ್ಕೆ ಅವಕಾಶವಿಲ್ಲ. ವಿಷ್ಣುಭಕ್ತರಾದವರೆಲ್ಲರೂ ಸಮಾನರು; ಅವರ ಹುಟ್ಟನ್ನು ಯಾರೂ ಕೇಳಬಾರದು; ಅವರನ್ನು ಎಲ್ಲ ಜಾತಿಯವರೂ ಆರಾಧಿಸಬೇಕು. ಅವರಲ್ಲಿ ಜಾತಿಭಾವನೆ ಇಡುವುದು ಘೋರಪಾಪ. ಶೈವಭಕ್ತರಂತೆ ಆಳ್ವಾರರು ಪರಮಾತ್ಮನಲ್ಲಿ ನೆಟ್ಟ ಪ್ರೇಮದಿಂದ ಮಾತ್ರ ಮೋಕ್ಷಸಾಧ್ಯವೆಂದು ಭಾವಿಸಿದರು. ಇವರ ಹಾಡುಗಳಲ್ಲಿ ಭಕ್ತಿ ಭಾವದ ಹೊಳೆಯೇ ಹರಿದಿದೆ.

ಸುಮಾರು ಏಳು ಅಥವಾ ಎಂಟನೇ ಶತಮಾನದಲ್ಲಿ ಆಗಿ ಹೋದ ಆಂಡಾಳ್ ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಒಂದು ಪ್ರಕಾಶಮಾನವಾದ ತಾರೆ. ತಮಿಳುನಾಡಿನ ಶ್ರಿವಿಲ್ಲಿಪುತ್ತೂರ್ ಗ್ರಾಮದಲ್ಲಿ ವಿಷ್ಣುಚಿತ್ತರೆಂಬ ಸಂತರು ಇದ್ದರು. ಅವರೇ ಮುಂದೆ ಪೆರಿಯ ಆಳ್ವಾರ್‌ರೆಂದು ಹೆಸರಾದವರು. ಅವರಿಗೆ ಒಂದು ದಿನ ತುಳಸಿ ವನದಲ್ಲಿ ತುಳಸಿ ಗಿಡದ ಕೆಳಗೆ ಒಂದು ಹೆಣ್ಣು ಮಗು ದೊರಕಿತು. ಅವರು ಅದನ್ನು ಎತ್ತಿಕೊಂಡು ಬಂದು ಪ್ರೀತಿಯಿಂದ ಬೆಳೆಸಿ ಕೋದೈ ಎಂದು ಹೆಸರಿಟ್ಟರು. ಆಕೆಯ ಹೆಸರಿನ ಅರ್ಥವೇ ಹೂವಿನ ಹಾರ. ವಿಷ್ಣುಚಿತ್ತರು ಆಕೆಯನ್ನು ಪ್ರೀತಿಯ, ಸರ್ವಾರ್ಪಣಭಾವದ ವಾತಾವರಣದಲ್ಲೇ ಬೆಳೆಸಿದರು. ವಿಷ್ಣುವಿನ ಗುಣಗಾನ ಮಾಡುವ ಹಾಡುಗಳನ್ನು ವಿಷ್ಣುವಿನ ಮಹಿಮೆಯನ್ನು ಸಾರುವ ಕಥೆಗಳನ್ನು ಕೇಳುತ್ತಲೇ ಬೆಳೆದಳು ಕೋದೈ. ಆಕೆಯ ಜೀವನ ಎಷ್ಟು ವಿಷ್ಣುಮಯವಾಯಿತೆಂದರೆ ತಾನು ಮದುವೆಯಾದರೆ ವಿಷ್ಣುವನ್ನೇ ಎಂದು ತೀರ್ಮಾನಿಸಿದಳು. ಮುಂದೆ ನಾಲ್ಕಾರು ಶತಮಾನಗಳ ನಂತರ ನಮ್ಮ ಕನ್ನಡದ ಅಕ್ಕ, ಅಕ್ಕಮಹಾದೇವಿ ಮಾಡಿದ್ದೂ ಅದನ್ನೇ. ದಿನವೂ ದೇವಸ್ಥಾನಕ್ಕೆ ಹೂವು ತೆಗೆದುಕೊಂಡು ಹೋಗುವುದು ವಿಷ್ಣುಚಿತ್ತರ ಕೆಲಸ. ಕೋದೈ ತಾನೇ ಬೆಳಗ್ಗೆ ಒಳ್ಳೆಯ ಹೂವುಗಳನ್ನು ಆರಿಸಿ ಮಾಲೆ ಕಟ್ಟುತ್ತಿದ್ದಳು.

ಇದು ಭಗವಂತನಿಗೆ ಚೆನ್ನಾಗಿ ಕಾಣುತ್ತದೋ ಇಲ್ಲವೋ ಎಂದು ನೋಡಲು ತಾನೇ ಧರಿಸಿಕೊಂಡು ಮನೆಯ ಹಿಂದಿನ ಕೊಳದ ನೀರಿನಲ್ಲಿ ನೋಡಿಕೊಳ್ಳುತ್ತಿದ್ದಳು. ಇದು ಒಂದು ರೀತಿಯ ಶಬರಿಯ ಪ್ರೇಮ. ನಂತರ ಅದನ್ನು ತನ್ನ ಸಾಕು ತಂದೆ ವಿಷ್ಣುಚಿತ್ತರೊಂದಿಗೆ ದೇವಸ್ಥಾನಕ್ಕೆ ಕಳುಹಿಸುವಳು. ಒಂದು ದಿನ ಹೀಗೆ ಕೋದೈ ಮಾಲೆ ಧರಿಸಿರುವುದು ವಿಷ್ಣುಚಿತ್ತರ ಕಣ್ಣಿಗೆ ಬಿದ್ದಿತು.

ಭಗವಂತನಿಗೆ ಅರ್ಪಿಸುವ ಮೊದಲು ತಾನು ಬಳಸುವುದು ಅಪಚಾರ ಎಂದು ಆಕೆಗೆ ಚೆನ್ನಾಗಿ ಬೈದು ಬುದ್ಧಿ ಹೇಳಿದರು. ಆಗ ದುಃಖದಿಂದ ಕೋದೈ ಮತ್ತೊಂದು ಹಾರವನ್ನು ಮಾಡಿ ತಂದೆಗೆ ಕೊಟ್ಟಳು. ಅಂದು ರಾತ್ರಿ ವಿಷ್ಣುಚಿತ್ತರಿಗೆ ಸ್ವಪ್ನದಲ್ಲಿ ಭಗವಂತ ಕಾಣಿಸಿಕೊಂಡು ತನಗೆ ಕೋದೈ ಹಾಕಿಕೊಂಡು ಕೊಟ್ಟ ಹಾರವೇ ಇಷ್ಟವೆಂದೂ, ಅದನ್ನು ತಪ್ಪಿಸಬಾರದೆಂದೂ ಹೇಳಿದಂತಾಯಿತು.

ಭಗವಾನ್ ವಿಷ್ಣುವನ್ನೇ ಮದುವೆಯಾಗುವುದಾಗಿ ಕೋದೈ ಹಟ ಹಿಡಿದಾಗ ಎಲ್ಲರಿಗೂ ದಿಕ್ಕು ತೋರದಂತಾಯಿತು. ಸಾವಿಲ್ಲದ, ಕೇಡಿಲ್ಲದ, ಕಡೆಯಿಲ್ಲದ, ಎಡೆಯಿಲ್ಲದ, ತೆರಹಿಲ್ಲದ, ಕುರುಹಿಲ್ಲದ ನಿರಾಕಾರದ ಜೊತೆಗೆ ಶರೀರ ಹೊಂದಿರುವ ಈ ಹುಡುಗಿಯ ಮದುವೆ ಹೇಗೆ ಸಾಧ್ಯ? ಆಗ ಭಗವಂತ ಮತ್ತೆ ವಿಷ್ಣುಚಿತ್ತರ ಸ್ವಪ್ನದಲ್ಲಿ ಒಂದು ತಾನು ಆಕೆಯನ್ನು ಶ್ರಿರಂಗಂ ದೇವಸ್ಥಾನದಲ್ಲಿ ಮದುವೆಯಾಗುವುದಾಗಿ ತಿಳಿಸಿದ. ಅಂತೆಯೇ ಶ್ರಿರಂಗಂ ದೇವಸ್ಥಾನದ ಅರ್ಚಕರಿಗೂ ಇದೇ ಸೂಚನೆ ದೊರಕಿತ್ತು.

ಅಲಂಕಾರಭೂಷಿತೆಯಾಗಿ ತನ್ನ ಅಧಿದೈವವನ್ನು ಕಾಣಲು ಶ್ರಿರಂಗಂಗೆ ಬಂದ ಕೋದೈ, ಆತುರತೆಯನ್ನು ತಡೆಯಲಾರದೆ ಗರ್ಭಗುಡಿಯಲ್ಲಿ ನುಗ್ಗಿದಳಂತೆ. ಅಲ್ಲಿಯೇ ತನ್ನ ದೈವದೊಂದಿಗೆ ಸೇರಿಹೋದಳಂತೆ. ಅಂದಿನಿಂದ ಆಕೆ ಆಂಡಾಳ್ ಆದಳು. ಹನ್ನೆರಡು ಮಹಾನ್ ಸಂತರಲ್ಲಿ ಏಕೈಕ ಮಹಿಳಾ ಸಂತಳಾದಳು. ತಾನು ಇದ್ದ ಹದಿನೈದೇ ವರ್ಷಗಳಲ್ಲಿ ಆಕೆ ರಚಿಸಿದ ತಿರುಪ್ಪಾವೈ ಒಂದು ಅತ್ಯದ್ಭುತವಾದ ಸೃಷ್ಟಿ. ಮೂವತ್ತು ಪದ್ಯಗಳ ಸಂಗ್ರಹವಾದ ತಿರುಪ್ಪಾವೈಯನ್ನು ನಿತ್ಯ ಪಾರಾಯಣ ಮಾಡುವ ಸಹಸ್ರಾರು ಜನರಿದ್ದಾರೆ. ನಮ್ಮ 'ಸಂಸ್ಕೃತಿ ಸಲ್ಲಾಪ' ದಲ್ಲಿಯೂ ಲಭ್ಯವಿದೆ.
ತನ್ನನ್ನೇ ಗೋಪಿಯೆಂದು ಭಾವಿಸಿ ಪರಮಾತ್ಮನನ್ನು ಪಡೆಯಲು ಆಕೆ ತೋರುವ ಆರ್ತತೆಯನ್ನು ಆಕೆ ಅನನ್ಯವಾಗಿ ಕಂಡರಿಸಿದ್ದಾಳೆ. ಆಂಡಾಳ್ ರಚಿಸಿದ ಇನ್ನೊಂದು ಕೃತಿ ನಾಚಿಯಾರ್ ತಿರುಮೋಳಿ. ಇದು 143 ಪದ್ಯಗಳ ಸಂಗ್ರಹ. ಇದೂ ಕೂಡ ಆಂಡಾಳ್ ಭಗವಂತನ ಕೃಪೆಗಾಗಿ ಪ್ರೀತಿಯನ್ನು, ತ್ಯಾಗವನ್ನು, ಸರ್ವಾರ್ಪಣೆ ತೋಡಿಕೊಳ್ಳುವ ಪರಿ. ಇದು ಜಯದೇವನ ಗೀತಗೋವಿಂದದ ಪರಿ. ಇದು ಕೇವಲ ಪವಾಡಗಳ ಕಥೆಯಲ್ಲ. ಒಂದು ಜೀವ ಅನನ್ಯತೆಯಿಂದ, ಅಚಲವಾದ ವಿಶ್ವಾಸದಿಂದ, ತಾನು ನಂಬಿದ್ದನ್ನೇ ಬೆಂಬತ್ತಿದಾಗ ದೊರೆಯುವ ಸಾಧನೆಯ ಫಲ ತೋರುತ್ತದೆ.