ಮಂಡ್ಯ ಜಿಲ್ಲೆ, ಪಾಂಡವಪುರ ತಾಲೂಕಿನ ಮೇಲುಕೋಟೆ ಕಲೆ, ಸಂಸ್ಕೃತಿ, ಶಿಲ್ಪಕಲೆಯ ತವರು. ಕರ್ನಾಟಕದ ಸುಪ್ರಸಿದ್ಧ ಯಾತ್ರಾಸ್ಥಳ. ಗಿರಿಶಿಖರಗಳಿಂದ ಕಂಗೊಳಿಸುವ ಮೇಲುಕೋಟೆ ಆಚಾರ್ಯ ರಾಮಾನುಜಾಚಾರ್ಯರಿಂದ ಪುನೀತವಾದ ಪುಣ್ಯಕ್ಷೇತ್ರ. ಮಂಡ್ಯದಿಂದ 36 ಕಿ.ಮೀಟರ್ ಹಾಗೂ ಬೆಂಗಳೂರಿನಿಂದ 120 ಕಿ.ಮೀಟರ್ ದೂರದಲ್ಲಿರುವ ಈ ಸುಂದರ ಬೀಡು,ಸಮುದ್ರಮಟ್ಟದಿಂದ 1,013 ಮೀಟರ್ ಎತ್ತರದಲ್ಲಿದೆ. ಮೇಲುಕೋಟೆಯಿಂದ ಮೈಸೂರಿಗೆ ಕೇವಲ 50 ಕಿ.ಮೀಟರ್.

ಸ್ಥಳಪುರಾಣ : ದಕ್ಷಿಣ ಭಾರತದಲ್ಲಿ ಮೇಲುಕೋಟೆ ಕೋಲ, ಪುಷ್ಕರಣಿ ಶ್ರೀವೈಷ್ಣವ ಕ್ಷೇತ್ರಗಳೆಂದು ಖ್ಯಾತವಾಗಿರುವ ನಾಲ್ಕು ಪುಣ್ಯಕ್ಷೇತ್ರಗಳ ಪೈಕಿ ಮೇಲುಕೋಟೆಯೂ ಒಂದು. ಇನ್ನುಳಿದ ಮೂರು ಕ್ಷೇತ್ರಗಳೆಂದರೆ, ಕಂಚಿ, ತಿರುಪತಿ ಮತ್ತು ಶ್ರೀರಂಗಂ.

ಮೇಲುಕೋಟೆಗೆ ಯಾದವಾದ್ರಿ, ವೇದಾದ್ರಿ, ನಾರಾಯಣಾದ್ರಿ, ಯತಿಶೈಲ, ಯದುಗಿರಿ ಎಂಬ ಹೆಸರುಗಳೂ ಇವೆ. ಕೃತಯುಗದಲ್ಲಿ ಸನತ್ಕುಮಾರ ಇಲ್ಲಿ ತಿರುನಾರಾಯಣ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರಿಂದ ನಾರಾಯಣಾದ್ರಿಯೆಂದೂ, ತ್ರೇತಾಯುಗದಲ್ಲಿ ದತ್ತಾತ್ರೇಯರು ಈ ಪರ್ವತದಲ್ಲಿ ವೇದ ಪಾರಾಯಣ ಮಾಡಿದ್ದರಿಂದ ವೇದಾದ್ರಿಯೆಂದೂ, ದ್ವಾಪರದಲ್ಲಿ ಶ್ರೀಕೃಷ್ಣ ಪರಮಾತ್ಮನೇ ಮೊದಲಾದವರಿಂದ ಪೂಜಿಸಲ್ಪಟ್ಟ ಈ ಸ್ಥಳ ಯಾದವಾದ್ರಿಯೆಂದೂ, ಕಲಿಯುಗದಲ್ಲಿ ಆಚಾರ್ಯ ರಾಮಾನುಜಾಚಾರ್ಯರು 12 ವರ್ಷಗಳ ಕಾಲ ಇಲ್ಲಿ ನೆಲೆಸಿ ಈ ಕ್ಷೇತ್ರವನ್ನು ಜೀರ್ಣೋದ್ಧಾರ ಮಾಡಿದ ಕಾರಣ ಯತಿಶೈಲವೆಂದೂ ಹೆಸರು ಪಡೆದಿದೆ ಶಾಸನಗಳಲ್ಲಿ ಈ ಕ್ಷೇತ್ರಕ್ಕೆ ಯಾದವಗಿರಿ, ಯದುಗಿರಿ, ವೈಕುಂಠವರ್ಧನಕ್ಷೇತ್ರ, ದಕ್ಷಿಣ ಬದರಿಕಾಶ್ರಮ,ತಿರುನಾರಾಯಣಪುರ, ಮೇಲುಕೋಟೆ ಎಂಬ ಹೆಸರುಗಳಿರುವ ಉಲ್ಲೇಖವಿದೆ. 1189ರಲ್ಲೇ ಇಲ್ಲಿ ಕೋಟೆ ಇತ್ತು ಎಂಬ ಬಗ್ಗೆಯೂ ಆಧಾರಗಳು ದೊರೆತಿವೆ.  

ಕೋಟೆ ಕೊತ್ತಲ, ಗಿರಿ ಶಿಖರಗಳಿಂದ ಕಂಗೊಳಿಸುತ್ತಿರುವ ಮೇಲುಕೋಟೆಯಲ್ಲಿ ಸುಂದರನಾದ ಚೆಲುವನಾರಾಯಣ, ಬೆಟ್ಟದ ಯೋಗಾನರಸಿಂಹ, ಅಕ್ಕ-ತೆಂಗಿಯರ ಕೊಳ,ಪುಷ್ಕರಣಿ, ಸುಂದರವಾದ ಭುವನೇಶ್ವರಿ ಮಂಟಪ, ಮನಮೋಹಕವಾದ ಕಲ್ಯಾಣಿ, ಯದುಗಿರಿ ಅಮ್ಮನವರ ದೇಗುಲ, ಸಂಗೀತ, ನೃತ್ಯ, ಸಾಹಿತ್ಯೋತ್ಸವಗಳ ವೇದಿಕೆಯಾದ ಮಂಟಪಗಳೇ ಮೊದಲಾದ ಸುಂದರಾತಿಸುಂದರ ತಾಣಗಳಿವೆ. . ಸಭಾಮಂಟಪದಲ್ಲಿರುವ 100 ಕಲ್ಲು ಗಂಬಗಳಲ್ಲಿ ರಾಮಾಯಣ ಮತ್ತು ಮಹಾಭಾರತದ ಪ್ರಮುಖ ಸನ್ನಿವೇಶಗಳ ಚಿತ್ರಣವಿದೆ.
ಸುಂದರ ತಾಣಗಳು : 280 ಅಡಿ ಚಚ್ಚೌಕಾಕಾರದ ವಿಸ್ತಾರವಾದ ಚೆಲುವನಾರಾಯಣ-ಸ್ವಾಮಿ-ದೇವಸ್ಥಾನ-ಮೇಲ್ಕೋಟೆ ಕಟ್ಟಡ,ಸುತ್ತಲೂ ಕೈಸಾಲೆ, ಮಹಾದ್ವಾರ, 150 ಅಡಿ ಎತ್ತರದ ರಾಜಗೋಪುರ, ಪ್ರಾಕಾರ,ಚಿಕ್ಕಗುಡಿಗಳು, ಯಾಗಶಾಲೆ, ಪಾಕಶಾಲೆ,ನವರಂಗ, ಮಂಟಪಗಳನ್ನೊಳಗೊಂಡ ಬೃಹತ್ ಚೆಲುವನಾರಾಯಣ ಸ್ವಾಮಿ ದೇವಾಲಯವೇ ಮೇಲುಕೋಟೆಯ ಪ್ರಧಾನ ಆಕರ್ಷಣೆ. ಹುತ್ತದಲ್ಲಿ ಹುದುಗಿದ್ದ ನಾರಾಯಣ ದೇವರನ್ನು ತೆಗೆಯಲು ಮತ್ತು ದೇವಾಲಯ ನಿರ್ಮಿಸಲು ದೊರೆ ವಿಷ್ಣುವರ್ಧನ ರಾಮಾನುಜಾಚಾರ್ಯರಿಗೆ ನೆರವಾದನೆಂದು ಹೇಳಲಾಗುತ್ತದೆ. ಈ ಊರ ಹೊರಗೊಂದು ವರನಂದಿಯ ದೇವಾಲಯವಿದೆ. ಇದಕ್ಕೊಂದು ಕಥೆ ಇದೆ. ಇಲ್ಲಿನ ಉತ್ಸವಮೂರ್ತಿ ಶೆಲ್ವಪಿಳ್ಳೆ ಅರ್ಥಾತ್ ಸನತ್ಕುಮಾರನೊಂದಿಗೆ ಬೆಸೆದುಕೊಂಡ ಕತೆಯಿದು. ಈ ಮೂರ್ತಿ ದೆಹಲಿಯ ಸುಲ್ತಾನನ ಅರಮನೆಯಲ್ಲಿತ್ತು. ಸುಲ್ತಾನನ ಮಗಳು ವರನಂದಿಯು ಇದನ್ನು ಅನುಭೋಗಿಸುತ್ತಿದ್ದಳು. ಇದನ್ನು ತಿಳಿದ ರಾಮಾನುಜರು ದೆಹಲಿಗೆ ಹೋಗಿ ವರನಂದಿಯ ವಿಗ್ರಹವನ್ನು ಪಡೆದು ಮೇಲೆಕೋಟೆಗೆ ತಂದರು. ಈ ಅಗಲಿಕೆ ತಾಳಲಾರದೆ ವರನಂದಿ ಶೆಲ್ವಪಿಳ್ಳೈಯನ್ನು ಹಿಂಬಾಲಿಸಿ ಬಂದು ದೇವರಲ್ಲಿ ಐಕ್ಯಳಾದಳು ಎಂದು ಹೇಳಲಾಗುತ್ತದೆ. ಇದರ ಕುರುಹಾಗಿ ನಾರಾಯಣನ ಪಾದದಡಿಯಲ್ಲಿ ವರನಂದಿ ವಿಗ್ರಹ ಇದೆ. ಇವಳನ್ನು ಬೇಬಿನಾಚ್ಚಿಯಾರ್ ಎಂದೂ ಕರೆಯುತ್ತಾರೆ. ರಾಮಾನುಜಾಚಾರ್ಯರು ಈ ವಿಗ್ರಹವನ್ನು ತಂದ ಕುರುಹಾಗಿ ಪ್ರತಿವರ್ಷ ಆಶ್ವಯುಜ ಶುದ್ಧ ಸಪ್ತಮಿಯಂದು ಇಲ್ಲಿ ಡೆಲ್ಲಿ ಉತ್ಸವ ನಡೆಯುತ್ತದೆ.

ಇತಿಹಾಸ : ಸಹಸ್ರಾರು ವರ್ಷಗಳ ಇತಿಹಾಸವುಳ್ಳ ಈ ಪುಣ್ಯಕ್ಷೇತ್ರ 14ನೇ ಶತಮಾನದಲ್ಲಿ ಮಹಮದೀಯರ ದಾಳಿಗೆ ಒಳಗಾಗಿತ್ತು. 1460ರಲ್ಲಿ ಹಾಳಾಗಿದ್ದ ದೇವಾಲಯವನ್ನು ವಿಜಯನಗರದರಸರು ಜೀರ್ಣೋದ್ಧಾರ ಮಾಡಿದರು. ಮತ್ತೆ 1771ರಲ್ಲಿ ಮರಾಠರು ಮೇಲುಕೋಟೆಯನ್ನು ಲೂಟಿ ಮಾಡಿದರು. ಆನಂತರ ಮತ್ತೆ ದೇಗುಲ ಜೀರ್ಣೋದ್ಧಾರಗೊಂಡಿತು. ಊರಿನ ಪುನರ್‌ ಸ್ಥಾಪನೆಯಾಯಿತು.
ಮೇಲುಕೋಟೆಯ ಚೆಲುವರಾಯ ಮೈಸೂರು ಅರಸರ ಆರಾಧ್ಯದೈವ. ಹೀಗಾಗೆ ಮೈಸೂರು ಒಡೆಯರು ದೇವಾಲಯಕ್ಕೆ ಹೇರಳವಾಗಿ ದಾನಧರ್ಮ ಮಾಡಿದ್ದಾರೆ. ಕಲಾತ್ಮಕ ಮಂಟಪಗಳನ್ನು ಕಟ್ಟಿಸಿದ್ದಾರೆ. ಹಲವು ಭೂಭಾಗಗಳನ್ನು ಉಂಬಳಿಯಾಗಿ ನೀಡಿದ್ದಾರೆ. ಮೇಲುಕೋಟೆ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಚಿಕ್ಕದೇವರಾಜರು ಯೋಗಾನರಸಿಂಹಸ್ವಾಮಿಯ ಬೆಟ್ಟಕ್ಕೆ ನೂತನ ರಾಜಗೋಪುರವನ್ನೂ , ಮೆಟ್ಟಿಲುಗಳನ್ನು ನಿರ್ಮಿಸಿಕೊಟ್ಟಿದ್ದಲ್ಲದೆ ದೇವರಿಗೆ ಅನೇಕ ಒಡವೆ ಹಾಗೂ ರಾಜಮುಡಿಗಳನ್ನು ನೀಡಿದ್ದಾರೆ. ಪ್ರತಿವರ್ಷ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಶ್ರೀಕೃಷ್ಣ ರಾಜಮುಡಿ, ರಾಜಮುಡಿ, ವೈರಮುಡಿ, ಬ್ರಹ್ಮೋತ್ಸವಗಳು ವೈಭವದಿಂದ ಹತ್ತು ದಿನಗಳ ಕಾಲ ನಡೆಯುತ್ತವೆ.

ಕಲ್ಯಾಣಿಯ ತೀರದಲ್ಲಿರುವ ಬೆಟ್ಟದ ಮೇಲೆರಿರುವ ಯೋಗಾನರಸಿಂಹ ದೇವಾಲಯ ಮೇಲುಕೋಟೆಯ ಮತ್ತೊಂದು ಮುಖ್ಯತಾಣ. ಇಲ್ಲಿ ಈಗ ರಾಷ್ಟ್ರೀಯ ಸ್ಮಾರಕವಾಗಿರುವ ಪು.ತಿ.ನ.ಅವರ ಮನೆಯನ್ನೂ ನೋಡಬಹುದು.

ಹತ್ತಿರದ ಪ್ರವಾಸಿ ತಾಣಗಳು : ರಾಜ್ಯದ ಹೆಸರಾಂತ ಪಕ್ಷಿಧಾಮ ರಂಗನತಿಟ್ಟು, ಮೈಸೂರು ಹುಲಿ ಟಿಪ್ಪೂಸುಲ್ತಾನರ ಶ್ರೀರಂಗಪಟ್ಟಣ, ಅರಮನೆಗಳ ನಗರಿ ಮೈಸೂರು ಮೇಲುಕೋಟೆ ಸುತ್ತಮುತ್ತಲ ತಾಣಗಳು.

ಮೇಲುಕೋಟೆಗೆ ರಾಜ್ಯದ ಪ್ರಮುಖ ಸ್ಥಳಗಳಿಂದ ನೇರ ಬಸ್ ಸೌಕರ್ಯವಿದೆ. ರಾತ್ರಿ ಉಳಿಯುವುದಾದರೆ, ಮಂಡ್ಯ ಅಥವಾ ಮೈಸೂರಿನಲ್ಲಿ ಉತ್ತಮ ಸೌಕರ್ಯಗಳಿವೆ