ರಾಮಾನುಜ ಅಥವಾ ರಾಮಾನುಜಾಚಾರ್ಯ (ಜೀವಾವಧಿ: 1017 - 1137 ಮಧ್ಯೆ) ವೇದಾಂತದ ಪ್ರಸಿದ್ಧ ಸಿದ್ಧಾಂತಗಳಲ್ಲೊಂದಾದ ವಿಶಿಷ್ಟಾದ್ವೈತದ ಪ್ರತಿಪಾದಕರಲ್ಲಿ ಪ್ರಮುಖರು. ಇವರು ತಮಿಳುನಾಡಿನ ಪೆರಂಬದೂರಿನಲ್ಲಿ ಸುಮಾರು 1017ರಲ್ಲಿ ಹುಟ್ಟಿದರು.
ರಾಮಾನುಜ ಅವರ ಗುರುಗಳು ಯಾದವ ಪ್ರಕಾಶ.ಇವರು ಬಹು ದೊಡ್ಡ ವಿದ್ವಾಂಸರು.ಇವರು ಪ್ರಾಚೀನ ಅದ್ವೈತ ವೇದಾಂತ ಸನ್ಯಾಸ ಸಂಪ್ರದಾಯದ ಭಾಗವಾಗಿದ್ದರು.
ಶ್ರೀ ವೈಷ್ಣವ ಸಂಪ್ರದಾಯದ ಪ್ರಕಾರ ರಾಮಾನುಜನು ತನ್ನ ಗುರುಗಳ ವಿರುದ್ದ ನಿಂತು ಅವನು ಪರಿಪೂರ್ಣ ಅದ್ವೈತ ವೇದಾಂತವನ್ನು ಪಾಲಿಸಿದ ಎಂದು ಹೇಳಲಾಗಿದೆ.
ರಾಮಾನುಜರವರು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು ಇವರ ತಂದೆ ಅಸುರಿ ಕೇಶವ ಸೊಮಯಾಜಿ ದೀಕ್ಷೀತರು. ತಾಯಿಯ ಹೆಸರು ಕಾಂತಿಮತಿ.
ಇಂದಿಗೆ 1000 ವರ್ಷಗಳ ಹಿಂದೆ, ಹಲವಾರು ಸಾಮಾಜಿಕ ಸುಧಾರಣೆಗಳನ್ನು ತಂದ ಶ್ರೀ ರಾಮಾನುಜಾಚಾರ್ಯರು ಜನಿಸಿದ್ದರು.
ಚೈತ್ರ ಮಾಸದ ಆರ್ದ್ರ ನಕ್ಷತ್ರದಲ್ಲಿ ಶ್ರೀ ರಾಮಾನುಜ ಜಯಂತಿಯನ್ನು ಎಲ್ಲಾ ವಿಷ್ಣು ದೇವಾಲಯಗಳಲ್ಲಿ ಮತ್ತು ಇವರ ಜನ್ಮ ಸ್ಥಳವಾದ ಶ್ರೀಪೆರುಂಬುದೂರಿನಲ್ಲಿ ಅದ್ದೂರಿ ಮತ್ತು ಅತ್ಯುತ್ಸಾಹದಿಂದ ಆಚರಿಸಲಾಗುತ್ತದೆ.
ಶ್ರೀ ರಾಮಾನುಜಾಚಾರ್ಯರು ಶ್ರೀರಂಗಂನಿಂದ ತಿರುಕೋಶ್ಟಿಯೂರಿಗೆ ಕಾಲ್ನಡುಗೆ ಮೂಲಕ ತಲುಪಿ ತಿರುಕೋಶ್ಟಿಯೂರು ನಂಬಿಯವರಲ್ಲಿ ಶಿಷ್ಯನನ್ನಾಗಿ ಸ್ವೀಕರಿಸಿ, ಮಂತ್ರ ಸಿದ್ಧಾಂತ ಅವರಿಗೆ ಬೋಧಿಸುವಂತೆ ಪ್ರಸ್ತಾವನೆ ಮಾಡುತ್ತಾರೆ. ಆರಂಭದಲ್ಲಿ ಇದಕ್ಕೆ ನಂಬಿ ಒಪ್ಪಿಕೊಳ್ಳದೆ ನಿರಾಕರಿಸಿ, ಹಲವು ಬಾರಿ ರಾಮಾನುಜರನ್ನು ಕಳುಹಿಸುತ್ತಾರೆ.
ರಾಮಾನುಜಾಚಾರ್ಯರು ನಿರಾಶೆ ಹೊಂದದೆ ಹಲವಾರು ಬಾರಿ ಗುರುವಿನಲ್ಲಿ ಬೇಡಿಕೊಂಡಾಗ ತಿರುಕೋಶ್ಟಿಯೂರು ನಂಬಿ ಇವರಿಗೆ ಮಂತ್ರ ಬೋಧನೆ ಮಾಡಲು ಒಪ್ಪಿಕೊಳ್ಳುತ್ತಾರೆ, ಆದರೆ ಇದಕ್ಕೆ ಒಂದು ಷರತ್ತನ್ನು ಹಾಕುತ್ತಾರೆ. ಅವರ ಮಂತ್ರ ಬೋಧನೆಯನ್ನು ಯಾರಿಗೂ ಬಹಿರಂಗ ಮಾಡಬಾರದು, ಇದನ್ನು ಉಲ್ಲಂಘಿಸಿದರೆ ರಾಮಾನುಜಾಚಾರ್ಯರು ನರಕಕ್ಕೆ ಹೋಗುತ್ತಾರೆ ಎಂದು ತಿಳಿಸುತ್ತಾರೆ. ನಂತರ ರಾಮಾನುಜರಿಗೆ ನಂಬಿಯವರು 'ಓಂ ನಮೋ ನಾರಾಯಣ' ಈ ಮಂತ್ರವನ್ನು ಬೋಧಿಸುತ್ತಾರೆ.
ತನ್ನ ಗುರುವಿನಿಂದ ಈ ಮಂತ್ರ ತಿಳಿದ ತಕ್ಷಣವೆ, ರಾಮಾನುಜಾಚಾರ್ಯರು ದೇವಾಲಯದ ವಿಮಾನ ಗೋಪುರವನ್ನೇರಿ ಅಲ್ಲಿದ್ದ ಜನಸಾಮಾನ್ಯರನ್ನು ಕರೆದು ಅವರಿಗೆ ಈ ಮಹಾ ಮಂತ್ರವನ್ನು ತಿಳಿಸುತ್ತಾರೆ. ಇದನ್ನು ಕಂಡ ನಂಬಿ ಗುರುಗಳು ಕೋಪದಿಂದ, ರಾಮಾನುಜರನ್ನು ಖಂಡಿಸಿ, ಈ ರೀತಿ ಮಾಡಿದ್ದರಿಂದ ನರಕಕ್ಕೆ ಹೋಗುವುದು ಖಚಿತ ಎಂದು ನುಡಿಯುತ್ತಾರೆ. ನಂತರ ರಾಮಾನುಜರು ನಯವಾಗಿ ಲಕ್ಷಾಂತರ ಜನರಿಗೆ ಈ ಮಂತ್ರಶಕ್ತಿಯಿಂದ ಪ್ರಯೋಜನವಾಗಿ, ಎಲ್ಲರಿಗೂ ದೇವರ ಅನುಗ್ರಹ ಸಿಗಿವುದಾದರೆ ಅವರು ನರಕಕ್ಕೆ ಹೋಗಲು ಸಿದ್ಧ ಎಂದು ಉತ್ತರಿಸುತ್ತಾರೆ.
ರಾಮಾನುಜಾಚಾರ್ಯರ ಈ ನಿಸ್ವಾರ್ಥ ನಡವಳಿಕೆಯನ್ನು ನಂಬಿಯವರು ಮೆಚ್ಚಿದರು.
ನಂತರ ರಾಮಾನುಜಾಚಾರ್ಯರು ತಮ್ಮ ಕೊನೆಯುಸಿರಿರುವ ತನಕ ವೈಷ್ಣವ ಸಾರ-ವಿಚಾರವನ್ನು ಎಲ್ಲರಿಗು ನೀಡಿ ಕೊನೆಯಲ್ಲಿ ಮೋಕ್ಷ ಹೊಂದಿದರು. ಇಂದು, ವೈಷ್ಣವ ಧರ್ಮದ ಪ್ರಮುಖ ನಿರೂಪಕರೆಂದು ಅವರನ್ನು ಎಲ್ಲರೂ ನೆನಪಿಸಿಕೊಳ್ಳುತ್ತಾರೆ ಹಾಗು ಆದಿಶೇಷನ ಅವತಾರ ಎಂಬ ನಂಬಿಕೆಯಿಂದ ಪೂಜಿಸುತ್ತಾರೆ.