ಶ್ರೀವೈಷ್ಣವರು ಭಗವಂತ ಪ್ರಪತ್ತಿ
ಎಂದಾದರೂ, ಯಾರಿಗಾದರೂ ನಾವು ಭಗವಂತನನ್ನು ನೋಡಬೇಕು, ಎಲ್ಲಿದ್ದಾನೆ ? ಹೇಗಿದ್ದಾನೆ ? ನಮಗೆ ಸಿಗುವನೇ ?

ಮುಂತಾದ ಪ್ರಶ್ನೆಗಳು ಉದ್ಭವಿಸಿದ್ದರೆ ಅಲ್ಲಿಯೇ ಉತ್ತರವೂ ಸಿಗುತ್ತದೆ. ಗಮನಿಸಬೇಕು ಅಷ್ಟೇ. ಇಲ್ಲಾ ಸಾಧ್ಯವಿಲ್ಲ, ಭಗವಂತ ನಮಗೆ ಸಿಗುವುದೇ ? ಇದು ಕೇವಲ ಕಲ್ಪನೆಯಲ್ಲಿ ಮಾತ್ರ ಸಾಧ್ಯ ಎನಿಸುತ್ತಿದೆಯಾ ?

ಕಲ್ಪನೆ ಬೇಡಾ ಸರಿಯಾದ ಮಾರ್ಗದಲ್ಲಿ ಹೋದರೆ ಭಗವಂತನ ಸಾಕ್ಷಾತ್ಕಾರ ವಾಗುವುದರಲ್ಲಿ ಸಂಶಯವೇ ಬೇಡಾ. ಹಾಗಾದರೆ ಭಗವಂತನನ್ನು ಕಾಣುವ ಮಾರ್ಗ ಯಾವುದು ? ಒಮ್ಮೆ ಯೋಚಿಸಿ ? ನಾವು ನೋಡುವುದು, ಮಾತನಾಡುವುದು,
ಕೇಳುವುದು, ಉಸಿರಾಡುವುದು ಇವೆಲ್ಲಾ ನಮ್ಮಿಂದಾಗಲು ಹೇಗೆ ಸಾಧ್ಯ ? ಯಾವ ಶಕ್ತಿಯ ಬಲದಿಂದ ಇದನ್ನೆಲ್ಲಾ ನಾವು ಮಾಡುತ್ತಿದ್ದೀವೋ ಅದೊಂದು ಮಹಾನ್ ಶಕ್ತಿ. ಈ ಜಗತ್ತನ್ನು ನಿಯಂತ್ರಿಸುತ್ತಿರುವ, ಎಲ್ಲ ಋತುಗಳೂ ಸರಿಯಾಗಿ ಯಾವ ಶಕ್ತಿಯ ಬಲದಿಂದ ನಡೆಯುತ್ತಿದೆಯೋ ಅದೇ ಶಕ್ತಿ ನಮ್ಮ ಉಸಿರಿಗೆ ಉಸಿರಾಗಿ, ಪ್ರಾಣಕ್ಕೆ ಪ್ರಾಣವಾಗಿ ನಮ್ಮೊಳಗೇ ಹುದುಗಿದೆ.

ಕಸ್ತೂರಿ ಮೃಗ ಸುವಾಸನೆಯನ್ನು ಹೀರುತ್ತಾ ತನ್ನಲ್ಲೇ ಬರುತ್ತಿರುವ ಸುಗಂಧದ ಬಗ್ಗೆ ತಿಳಿಯದೇ ಬೇರೆಲ್ಲೂ ಹುಡುಕಾಡುವಂತೆ ನಾವು ಹೊರಗೆ ಭಗವಂತನನ್ನು ಹುಡುಕುತ್ತಿದ್ದೇವೆ. ಆದರೆ ಭಗವಂತ ನಮ್ಮಲ್ಲಿಯೇ ಅಂತರ್ಯಾಮಿಯಾಗಿ ನೆಲೆಸಿದ್ದಾನೆ ಜ್ಯೋತಿಯಾಗಿ ಬೆಳಗುತ್ತಿದ್ದಾನೆ ಹೊರಗಣ್ಣು ಮುಚ್ಚಿ ಒಳಗಣ್ಣು ತೆರೆದು ಪರ, ವ್ಯೂಹ, ವಿಭವ, ಗಳಲ್ಲಿ ನಾವು ಮಾಡಿಕೊಂಡಿರುವ ಕಲ್ಪನೆಯನ್ನು ಮತ್ತಷ್ಟು ಹೃದಯದ ಆಳಕ್ಕೆ ಕೊಂಡೊಯ್ದರೆ ಅವನು ನಮ್ಮಲ್ಲಿಯೇ ಸಾಕಾರವಾಗುತ್ತಾನೆ, ಅವ್ಯಕ್ತನಾಗಿರುವವನು ವ್ಯಕ್ತನಾಗುತ್ತಾನೆ. ಆದರೆ ನಾವು ಈ ಪ್ರಾಪಂಚಿಕ ಬದುಕಿನಲ್ಲಿ ಕಣ್ಣು ಮುಚ್ಚಿ ಧ್ಯಾನದ ಸ್ಥಿತಿಯಲ್ಲಿ ಕುಳಿತುಕೊಳ್ಳಬೇಕು. ಹೀಗೆ ಧ್ಯಾನಾಸಕ್ತರಾಗಲು ನಮ್ಮ ಪಂಚ ಕರ್ಮೇಂದ್ರಿಯಗಳು, ಪಂಚ ಜ್ಞಾನೇಂದ್ರಿಯಗಳು, ಅರಿಷಡ್ವರ್ಗಗಳು, ಬಿಡುತ್ತವೆಯೇ? ಹಾಗಾದರೆ ಭಗವಂತನನ್ನು ನೋಡೋದು ಹೇಗೆ ? ಮತ್ತೆಲ್ಲಿ ಅವನನ್ನ ಹುಡುಕೋದು ? ತುಂಬಾ ಸುಲಭ ಭಗವಂತ ಭಕ್ತರ ಪ್ರೀತಿಗೆ ಕಲ್ಪನೆಗೆ ತಲೆಬಾಗಿ ಅರ್ಚಾ ಮೂರ್ತಿ ಆಗಿ ಪ್ರತಿಯೊಬ್ಬರ ಮನೆಗಳಲ್ಲೂ ಇದ್ದಾನೆ. ಪ್ರೀತಿಸುವ ಭಕ್ತನಿಗೆ ಈ ಅರ್ಚಾ ವಿಗ್ರಹಗಳು ಕೇವಲ ಶಿಲೆ ಅಥವಾ ಲೋಹವಲ್ಲ, ಅವು ಜೀವಂತ ಮೂರ್ತಿಗಳು. ಈ ಮೂರ್ತಿಗಳನ್ನು ನಾವು ಆರಾಧಿಸುವ ಮೂಲಕ, ಸೇವೆ ಮಾಡುವ ಮೂಲಕ ,ಮನ ತುಂಬಿ ಪೂಜಿಸಬಹುದು. ಸೇವಿಸಬಹುದು. ಅದಕ್ಕೆಂದೇ ಮನೆಗಳಲ್ಲಿ ಪೂಜಾ ಮಂದಿರಗಳಿವೆ, ಸಮಾಜದಲ್ಲಿ ದೇವಸ್ಥಾನಗಳಿವೆ. ಈ ರೀತಿ ಶ್ರೀ ವೈಷ್ಣವ ನಾದವನು ಭಗವಂತನನ್ನು ಪರ, ವ್ಯೂಹ, ವಿಭವ ,ಅಂತರ್ಯಾಮಿ, ಅರ್ಚಾ ರೂಪದಲ್ಲಿ ಪೂಜಿಸಬಹುದು.

ಹಾಗಾದರೆ ಭಗವಂತನನ್ನು ಸುಮ್ಮನೆ ಪೂಜಿಸಿದರೆ ಒಲಿಯುವನೇ ?
ಅವನನ್ನು ಪೂಜಿಸಬೇಕಾದರೆ ಯೋಗ್ಯತೆಯನ್ನು ಪಡೆದುಕೊಳ್ಳಬೇಕು. ಆ ಯೋಗ್ಯತೆಗಳೇ ಪಂಚ ಸಂಸ್ಕಾರಗಳು. ತಾಪ -ಪುಂಡ್ರ -ನಾಮ -ಮಂತ್ರ -ಯಾಗ ಇವೇ ಆ ಪಂಚ ಸಂಸ್ಕಾರಗಳು. ಭಗವಂತನನ್ನು ಕಾಣಲು ನಿಷ್ಕಲ್ಮಶ ಮನಸ್ಸಿರಬೇಕು. ಯಾವಾಗಲೂ ನಾವು ಭಗವಂತನ ಭಕ್ತರು, ಅವನಿಗೆ ಇಷ್ಟವಿಲ್ಲದೆ ಇರೋದನ್ನು ಮಾಡಬಾರದು, ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.
ಅದಕ್ಕೆ ಮೊದಲನೆಯದು ತಾಪ

ಭಗವಂತನ ದಿವ್ಯ ಆಯುಧಗಳಾದ ಚಕ್ರ ಮತ್ತು ಶಂಖವನ್ನು ಚಿಹ್ನೆಯಾಗಿ ನಾವು ಧರಿಸಿಕೊಂಡಾಗ ಅವನಿಗೆ ಸೇರಿದವರು ಎಂಬ ಜಾಗೃತಿ ನಮ್ಮಲ್ಲಿ ಉಂಟಾಗುತ್ತದೆ.

ಎರಡನೆಯದು ಪುಂಡ್ರ.

ನಮ್ಮ ಹಣೆಯ ಮೇಲೆ ಎರಡು ಬಿಳಿ ಹಾಗೂ ಮಧ್ಯ ಹಳದಿ ಅಥವಾ ಕೆಂಪು ನಾಮವನ್ನು ಧರಿಸಬೇಕು. ಸಾಮಾನ್ಯವಾಗಿ ಎಲ್ಲರೂ ತಿಳಿದಿರುವುದು ಈ ನಾಮವೆಂಬುದು ಭಗವಂತನ ಪಾದವೆಂದು ಹಾಗಾದರೆ ವಿಷ್ಣುವಿಗೆ ಮತ್ತು ವಿಷ್ಣುವಿನ ಅವತಾರಗಳಿಗೆ ನಾಮವನ್ನು ಏಕೆ ಇಡುತ್ತಾರೆ ? ಅವನ ಪಾದಗಳನ್ನು ಅವನೇ ಹಣೆಯ ಮೇಲೆ ಧರಿಸಿಕೊಳ್ಳುವುದೇ? ನಾಮದ ಉದ್ದೇಶ ಅದಲ್ಲ ಶ್ರೀವೈಷ್ಣವರು ಹಣೆಯ ಮೇಲೆ ಧರಿಸುವ ನಾಮಕ್ಕೆ ಬೇರೆ ಅರ್ಥವಿದೆ ಎರಡು ಬಿಳಿಯ ನಾಮಗಳು ಮನುಷ್ಯನ ದೇಹದಲ್ಲಿರುವ ಇಡಾ ಮತ್ತು ಪಿಂಗಳಾ ಎಂಬ ಉಸಿರಿನ ನಾಳಗಳ ಸಂಕೇತ ನಾವು ಉಸಿರಾಡುವಾಗ ಈ ನಾಳಗಳಿಂದ ಉಸಿರಾಡುತ್ತಾ ಆಧ್ಯಾತ್ಮಿಕ ಜ್ಞಾನದತ್ತ ವಿಶೇಷ ಗಮನ ಬಂದಾಗ ಈ ನಾಳಗಳಿಂದ ಎಳೆದುಕೊಂಡ ಉಸಿರು ಮೂಲಾಧಾರವನ್ನು ತಲುಪಿ ಕುಂಡಲಿನೀ ಶಕ್ತಿ ಜಾಗೃತವಾಗುತ್ತದೆ. ಅದು ಜಾಗೃತವಾದ ಕೂಡಲೇ ಇಡಾ ಮತ್ತು ಪಿಂಗಳಾ ನಾಡಿಗಳ ಮಧ್ಯೆ ಇರುವಂತಹ ಸಾಮಾನ್ಯ ವಾಗಿ ತೆರೆಯದೆ ಇರುವಂತಹ ಸುಷುಮ್ನಾ ನಾಡಿ ತೆರೆದುಕೊಳ್ಳುತ್ತದೆ. ಆಗ ನಮ್ಮಲ್ಲಿ ಹುದುಗಿರುವ ಅಪಾರ ಶಕ್ತಿ ಸುಷುಮ್ನಾ ನಾಡಿಯ ಮೂಲಕ ಮೇಲ್ಮುಖವಾಗಿ ಹರಿದು ಷಟ್ ಚಕ್ರಗಳ ಮೂಲಕ ಸಹಸ್ರಾರವನ್ನು ತಲುಪಿ ಭಗವತ್ ದರ್ಶನವಾಗುತ್ತದೆ. ಶಕ್ತಿಯು ಸುಷುಮ್ನಾ ನಾಡಿಯ ಮೂಲಕ ಮೇಲ್ಮುಖವಾಗುವುದನ್ನೇ ಹಳದಿ ಅಥವಾ ಕೆಂಪು ನಾಮ ಪ್ರತಿಬಿಂಬಿಸುತ್ತದೆ. ಈ ನಾಮ ಆತ್ಮವನ್ನು ಪ್ರತಿಬಿಂಬಿಸುತ್ತದೆ.

ಕೇವಲ ತಾಪ ಪುಂಡ್ರಗಳಿಂದಲೇ ಸಂಸ್ಕಾರ ಬರುವುದಿಲ್ಲ ನಾಮವು ಇದಕ್ಕೆ ಪೂರಕ ತಾನು ಶ್ರೀವೈಷ್ಣವ ನಾರಾಯಣನ ಸೇವಕ
ಎಂಬುದನ್ನು ಸೂಚಿಸುವ ನಾಮವನ್ನು ಅಂದರೆ ಹೆಸರನ್ನು ಆತ ಸ್ವೀಕರಿಸಬೇಕು.

ಸಂಸ್ಕಾರದ ಮೂಲಕ ಭಗವಂತನನ್ನು ಜಪಿಸುವುದಕ್ಕೆ ಅವನನ್ನು ಕುರಿತು ಧ್ಯಾನ ಮಾಡುವುದಕ್ಕೆ ಮಂತ್ರದ ಅಗತ್ಯವಿದೆ. ಮಂತ್ರ ಎಂದರೆ ಭಗವಂತನ ನಾಮವನ್ನು ಮನನ ಮಾಡಿ, ಮಥಿಸಿ, ನೂರಾರು ಸಾವಿರಾರು ವರ್ಷಗಳ ಕಾಲ ಅದಕ್ಕೆ ಶಕ್ತಿಯನ್ನು ತುಂಬಿದ್ದು ಅದು ಗುರು ಮುಖೇನ ಸ್ವೀಕೃತವಾದಾಗ ಅದರಲ್ಲಿ ಆಧ್ಯಾತ್ಮಿಕ ಜಾಗೃತಿ ಉಂಟು ಮಾಡುವ ಶಕ್ತಿ ಹುದುಗಿರುತ್ತದೆ. ಆದ್ದರಿಂದ ಆಧ್ಯಾತ್ಮಿಕ ಜೀವನಕ್ಕೆ ಮಂತ್ರ ಅತ್ಯಂತ ಮುಖ್ಯ.

ನಂತರ ಯಾಗ

ಧರ್ಮಕ್ಕೆ ಅನುಗುಣವಾದ ಕರ್ಮವೇ ಯಾಗ. ನಾವು ಮಾಡುವ ಕರ್ಮವೆಲ್ಲವೂ ಯಾಗವೆನಿಸಿಕೊಳ್ಳಬೇಕಾದರೆ ಅದು ಭಗವಂತನಿಗೆ ಪ್ರಿಯವಾಗಿರಬೇಕು. ಅವನು ಸ್ವೀಕರಿಸುವಂತಿರಬೇಕು.

ಆದ್ದರಿಂದ ಶ್ರೀವೈಷ್ಣವನಾದವನು ತಾಪ, ಪುಂಡ್ರ, ನಾಮ, ಮಂತ್ರ, ಯಾಗ, ಎಂಬ ಪಂಚ ಸಂಸ್ಕಾರಗಳಿಗೆ ಒಳಪಡಬೇಕಾಗುತ್ತದೆ. ಇದುವರೆಗೆ ಪಂಚಸಂಸ್ಕಾರದ ಅಗತ್ಯ ಹಾಗೂ ಭಗವಂತನ ಐದು ಬಗೆಯ ಸ್ಥಿತಿಯನ್ನು ಕಂಡಾಯಿತು.
ಆದರೆ ಭಗವಂತನನ್ನು ಕಾಣುವುದಕ್ಕೆ ದಾರಿ ಯಾವುದು ? ಶ್ರೀವೈಷ್ಣವರಲ್ಲಿ ಅರ್ಥ ಪಂಚಕವೆಂದು ಕರೆಯುವ ದಾರಿ ಇದೆ. ಇದರಲ್ಲಿ ಭಗವಂತನ ಸ್ವರೂಪವೆಂಥದ್ದು ? ಆ ಭಗವಂತನನ್ನು ಅರಿಯಲು ಪ್ರಯತ್ನಿಸುತ್ತಿರುವ ನಾನು ಎನ್ನುವ ಜೀವದ ಸ್ವರೂಪವೇನು? ಈ ಜೀವ ಭಗವಂತನನ್ನು ಪಡೆಯುವ ದಾರಿಯಾವುದು? ಆ ದಾರಿಯಲ್ಲಿ ಹೋದರೆ ಭಗವಂತನನ್ನು ಜೀವ ಅನುಭವಿಸುವ ಫಲದ ಸ್ವರೂಪ ಎಂತದ್ದು? ಆ ದಾರಿಯಲ್ಲಿ ಹೋಗುವಾಗ ಅಡ್ಡಿಯಾಗಿ ಬರುವ ಶತ್ರುಗಳ ಸ್ವರೂಪವೇನು ?ಎಂಬುದನ್ನು ವಿವರಿಸುವುದೇ ಅರ್ಥ ಪಂಚಕ. ಯಾರೇ ಆಗಲಿ ಭಗವಂತನನ್ನು ಹುಡುಕುತ್ತಾ ತನ್ನ ಕುಟುಂಬವನ್ನೂ. ಸಮಾಜವನ್ನೂ ಕಡೆಗಣಿಸಲು ಆಗುವುದಿಲ್ಲ. ಆದ್ದರಿಂದ ಸಾಮಾನ್ಯವಾಗಿ ಶ್ರೀ ವೈಷ್ಣವ ನಾದವನು ಪಂಚಕಾಲ ಕರ್ಮಕ್ಕೆ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ.

ಪಂಚಕಾಲ ಕರ್ಮ ಎಂದರೇನು?

ದಿನವನ್ನು 5 ಭಾಗ ಮಾಡಿ ಪ್ರತಿಯೊಂದು ಭಾಗದಲ್ಲಿಯೂ ತನಗೆ ನಿಗದಿಪಡಿಸಿರುವ ಕರ್ಮಗಳನ್ನು ಆಚರಿಸುವುದು. ಅವು ಯಾವುವು ?
ದಿನದ ಮೊದಲ ಭಾಗದಲ್ಲಿ ಭಗವಂತನ ಪೂಜೆಗೆ ತಾನು ಶುಚಿಯಾಗಿ ಅವನ ಕಡೆ ಇರುವುದು. ಇದು ಅಭಿಗಮನ,

ಎರಡನೆಯ ಭಾಗದಲ್ಲಿ ಭಗವಂತನ ಆರಾಧನೆಗೆ ಮತ್ತು ತನ್ನ ಬದುಕಿಗೆ ಅಗತ್ಯವಾದಷ್ಟನ್ನು ಸಂಪಾದಿಸುವುದು. ಇದು ಉಪಾದಾನ.

ಮೂರನೆಯ ಭಾಗದಲ್ಲಿ ಉಪಕರಣಗಳ ಮೂಲಕ ಭಗವಂತನ ಆರಾಧನೆ ಇದು ಇಜ್ಯಾ ಪೂಜಾ ಮತ್ತು ದೇವ ಋಣ, ಋಷಿ ಋಣ, ಪಿತೃ ಋಣ, ನರ ಋಣ, ಭೂತ ಋಣ ಎಂಬ 5 ಋಣಗಳನ್ನು ತೀರಿಸಿ ಆಹಾರ ಸೇವಿಸುವುದು. ಇದು ಅನುಯಾಗ.

ನಾಲ್ಕನೆಯ ಭಾಗದಲ್ಲಿ ಅಧ್ಯಯನ ಮತ್ತು ಅಧ್ಯಾಪನ.
ಐದನೆಯ ಭಾಗದಲ್ಲಿ ವಿಶ್ರಾಂತಿ ,ಇದು ಯೋಗ.

ಈ ರೀತಿಯಾಗಿ ಶ್ರೀವೈಷ್ಣವ ನಾದವನು ತನ್ನ ಬದುಕನ್ನು ಕೇವಲ ಭಗವಂತನೆಗಾಗಿ ಅವನ ಸೇವೆಗಾಗಿ ಮುಡುಪಿಡುತ್ತಾನೆ.

ಐದು ಬಗೆಯಾಗಿ ,ಐದು ದಾರಿಗಳಲ್ಲಿ, ಐದು ಸಂಸ್ಕಾರಗಳೊಂದಿಗೆ, ಐದು ಜಿಜ್ಞಾಸೆಗಳೊಂದಿಗೆ, ಐದು ಕಾಲವೂ ಭಗವಂತನಿಗೆ ತನ್ನನ್ನು ತಾನು ತೊಡಗಿಸಿಕೊಳ್ಳುವುದರಿಂದ ಶ್ರೀವೈಷ್ಣವ ನಾದವನು "ಐದು ಅಂಗಗಳವನು "ಅಂದರೆ" ಅಯ್ಯಂಗಾರ್ "ಎನಿಸಿಕೊಳ್ಳುತ್ತಾನೆ.

ಶ್ರೀವೈಷ್ಣವ ನಾದವನು ಮುಖ್ಯವಾಗಿ ತನ್ನ ಬದುಕನ್ನು ಸೇವೆ ಎಂದು ಸ್ವೀಕರಿಸುವುದರಿಂದ ಆ ಸೇವೆಯ ಒಂದು ಮುಖ್ಯ ಅಂಗವಾಗಿ ಸೇವಾಕಾಲವಾಗಿ ತಮಿಳಿನ ದಿವ್ಯ ಪ್ರಬಂಧಗಳು ಹಾಗೂ ವೇದೋಪನಿಷತ್ತುಗಳ ಪಾರಾಯಣ ಮಾಡುವುದು ಅವನ ನಿತ್ಯ ವಿಧಿ ಆಗಬೇಕಾಗುತ್ತದೆ.

ಶ್ರೀವೈಷ್ಣವರಲ್ಲಿಯೂ ಸಹ ರಾಮಾನುಜರ ನಂತರದಲ್ಲಿ ದುರದೃಷ್ಟವಶಾತ್ ಮತ ಭೇದ ಉಂಟಾಗಿ ದಿವ್ಯ ಪ್ರಬಂಧವನ್ನು ಮುಖ್ಯವೆಂದು ಕೊಂಡವರು ದಕ್ಷಿಣ ಕಡೆಯವರು ಅಂದರೆ " ತೆಂಗಲೆ " ಯವರೆಂದೂ, ವೇದೋಪನಿಷತ್ತಿಗೆ ಹೆಚ್ಚು ಪ್ರಾಶಸ್ತ್ಯವನ್ನು ಕೊಟ್ಟವರು ಉತ್ತರ ಕಡೆಯವರು ಅಂದರೆ " ವಡಗಲೆ" ಯವರೆಂದು ಕರೆಸಿಕೊಂಡರು.

ರಾಮಾನುಜರ ನಂತರದವರಾದ " ಶ್ರೀ ವೇದಾಂತ ದೇಶಿಕರು" ವಡಗಲೆ ಸಂಪ್ರದಾಯದವರಿಗೆ ಹಾಗೂ " ಮಣವಾಳ ಮಾಮುನಿಗಳು " ತೆಂಗಲೆ " ಯ ಸಂಪ್ರದಾಯದವರಿಗೆ ಹತ್ತಿರದವರಾದರು.

ಇವತ್ತಿನ ಕಾಲಕ್ಕೆ ಈ ಭೇದ ಸಲ್ಲದು, ನಾವೆಲ್ಲರೂ ಶ್ರೀ ವೈಷ್ಣವರು, ಅಪಾರ ಹೃದಯ ವೈಶಾಲ್ಯತೆಯನ್ನು ಹೊಂದಿದ್ದ ,ದೀನ- ದಲಿತರಿಗಾಗಿ ಪರಿತಪಿಸಿದ ,

" ನಾನು ನರಕಕ್ಕೆ ಹೋದರೂ ಚಿಂತೆ ಇಲ್ಲ ಇಡೀ ಜಗತ್ತು ಉದ್ಧಾರವಾಗಲಿ "
ಎಂಬ ಮನೋಭಾವ ಹೊಂದಿದ್ದ ರಾಮಾನುಜರ ಪರಂಪರೆಯವರು ನಾವು.

ನಮ್ಮ ಮುಖ್ಯ ಉದ್ದೇಶ ಭಗವಂತನ ಸಾಕ್ಷಾತ್ಕಾರ. ತನ್ಮೂಲಕ ಸಮಾಜ ಸೇವೆ ಎಂದುಕೊಂಡಾಗ ಮತ್ತು ಅದನ್ನು ನಮ್ಮ ಬದುಕಿನಲ್ಲಿ ಅನುಷ್ಠಾನಕ್ಕೆ ತಂದಾಗ ಮಾತ್ರ ನಾವು ಶ್ರೀವೈಷ್ಣವ ಎನ್ನುವ ಹೆಸರಿಗೆ ಯೋಗ್ಯರಾಗುತ್ತೇವೆ.ತಪ್ಪದೇ ಎಲ್ಲರೂ ಶ್ರೀ ರಾಮಾನುಜಾಚಾರ್ಯರ ತತ್ವಗಳನ್ನು ಪಾಲಿಸುತ್ತಾ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸೋಣ