ಅಕ್ಷಯ ತೃತೀಯಾ ಹಬ್ಬದ ಪೌರಾಣಿಕ ಹಿನ್ನೆಲೆ
ವೈಶಾಖ ಮಾಸ, ಹೆಸರೇ ಹೇಳಿದಂತೆ ಶಾಖ ಹೆಚ್ಚು. ಸೆಕೆ, ನೀರಿಗಾಗಿ ದಾಹ ಇಂಥ ಲಕ್ಷಣಗಳು ಕಾಣುತ್ತಲೇ ಬರುವದು ಅಕ್ಷಯ ತೃತೀಯಾ ಅಥವಾ ಆಡುಭಾಷೆಯಲ್ಲಿ ಅಕ್ಷತ್ತದಿಗೆ. ಸಾಮಾನ್ಯವಾಗಿ ಬೇಸಗೆ ಇರುವದರಿಂದ ನೀರಡಿಸಿದ ಜೀವಿಗೆ ಅಲ್ಲಲ್ಲಿ ಅರವಟ್ಟಿಗೆ ಗಳನ್ನು ರಾಜರು ಪಂಚರು ಜಮೀನುದಾರರು ಪಟೇಲರು ಇಟ್ಟು ಪುಣ್ಯದ ಕಾರ್ಯ ಎಂದು ಮಾಡುತ್ತಿದ್ದರು. ಆಧ್ಯಾತ್ಮಿಕವಾಗಿ ಈ ದಿನ ಒಂದು ತಂಬಿಗೆ ಲೋಟ ಯಾವದಾದರಲ್ಲಿ ಪೂರ್ಣ ನೀರು ತುಂಬಿಸಿ ಶ್ರೀಹರಿ ಪ್ರೀತಿಗೆ ಎಂದು ಸಂಕಲ್ಪಿಸಿ ಸತ್ಪಾತ್ರರಿಗೆ ದಾನ ಮಾಡಿದರೆ, ದಾನಿಯ ಪಿತೃಗಳು ಲೌಕಿಕದಲ್ಲಿ ಎಷ್ಟೇ ಪಾಪ ಕರ್ಮ ಮಾಡಿದ್ದರೂ ಮುಕ್ತಿಮಾರ್ಗಕ್ಕೆ ಹೋಗುವರು. ಅಲ್ಲದೇ ಆ ದಿನ ಮಾಡಿದ ಪುಣ್ಯ ಕರ್ಮದ ಫಲವು ಅನಂತವಾಗುವದರಲ್ಲಿ ಸಂಶಯವಿಲ್ಲ. ಇನ್ನು ಮುಖ್ಯವಾಗಿ ಭಕ್ತಿಯಿಂದ ಮಾಡಿದ್ದಾರೆ ಅಕ್ಷಯ ವಾಗುವದು.ಇನ್ನು ಈ ಪರ್ವಕಾಲವು ಸಾಡೆತೀನ್ ಮಹೂರ್ತದಲ್ಲಿ ಒಂದು ಆಗಿದೆ. ಅಂದರೆ ಯಾವದೇ ಶುಭ ಕಾರ್ಯಕ್ಕೆ ನಾವು ಮಹೂರ್ತ ನೋಡುವ ಅಗತ್ಯವಿಲ್ಲ. ಇನ್ನು ಕೆಲವು ಪ್ರಾಂತಗಳಲ್ಲಿ ಈ ದಿನ ಖರೀದಿಸಿದ ಬಂಗಾರಕ್ಕೆ ಯಾವ ದೋಷವು ಇರುವದಿಲ್ಲ. ಏಕೆಂದರೆ ಮಹಾಭಾರತದ ಅಂತಿಮ ವೇಳೆಯಲ್ಲಿ ಪರೀಕ್ಷಿತ ರಾಜನಿಗೆ ಕಲಿಪುರುಷನು ವಿನಂತಿಸಿಕೊಂಡಾಗ ರಾಜನು ಕೊನೆಗೆ ಬಂಗಾರದಲ್ಲಿ ಅತೀ ಹೆಚ್ಚು ಇರುವಲ್ಲಿ ನಿನ್ನ ಒಂದು ಅಂಶ ಇರಲಿ ಎಂದು ಆಶ್ವಾಸನೆ ಕೊಟ್ಟಿದ್ದಪೌರಾಣಿಕವಾಗಿ ನೋಡಿದರೆ ಈ ಪರ್ವಕಾಲದ ದಿನದಂದು ಕೆಲವು ಘಟನೆಗಳು ನಡೆದ ಸಂಗತಿ ತಿಳಿದರೆ ಆಶ್ಚರ್ಯ ಆಗುವದು. ಚಾಕ್ಷುಷ ಮನ್ವಂತರದಲ್ಲಿ ದೇವ ದಾನವರು ಅಮೃತಕ್ಕಾಗಿ ಮೈತ್ರಿ ಮಾಡಿಕೊಂಡು ಸಮುದ್ರ ಮಥನ ಮಾಡಲು ಪ್ರಾರಂಭಿಸಿದ ದಿನವಾಗಿದೆ. ತ್ರೇತಾ ಯುಗದ ಪ್ರಾರಂಭದ ದಿನವೂ ಇದಾಗಿದೆ. ವಸಿಷ್ಠ ಋಷಿಗಳಂತೆ ಆಶ್ರಮದಲ್ಲಿ ಕಾಮಧೇನು ವನ್ನು ಇಟ್ಟುಕೊಂಡು ಸಾವಿರಾರು ಜನರಿಗೆ ನಿತ್ಯ ಅನ್ನದಾನ ಮಾಡಿದ ಪರಮಯೋಗಿ ಜಮದಗ್ನಿ ಮತ್ತು ರೇಣುಕೆಯರ ಪುತ್ರನಾಗಿ ಶ್ರೀಹರಿಯು ಪರಶುರಾಮನಾಗಿ ಅವತರಿಸಿದ ಪರಮ ಪಾವನ ದಿನ ಅಕ್ಷಯ ತೃತೀಯಾ ದಿನವಾಗಿದೆ.

ರಾಜಾ ಭಗೀರಥನು ತನ್ನ ಪೂರ್ವಜರಾದ ಸಗರ ಪುತ್ರರಿಗೆ ಮುಕ್ತಿಯನ್ನು ಕೊಡಿಸಲು ದೇವಲೋಕದ ಗಂಗೆಯನ್ನು ಒಲಿಸಿಕೊಂಡು ಭೂಲೋಕಕ್ಕಾರ್ ಹರಿದುಬರಲು ವಿನಂತಿಸಿಕೊಳ್ಳುತ್ತಾನೆ. ಆದರೆ ದೇವಲೋಕದಿಂದ ಇಳಿಯುವ ರಭಸವನ್ನು ತಡೆಯಲು ರುದ್ರದೇವನನ್ನು ಕುರಿತು ತಪಸ್ಸು ಮಾಡಿದನು. ರುದ್ರ ತನ್ನ ಜತೆಯಲ್ಲಿ ಗಂಗೆಯನ್ನು ಬಂಧಿಸಿ ಇಟ್ಟುಕೊಳ್ಳುತ್ತಾನೆ. ಇದರಿಂದ ಭಗೀರಥ ಪುನಃ ರುದ್ರನನ್ನು ಒಲಿಸಿಕೊಂಡು ಶಿವನ ಜಟೆಯಿಂದ ಗಂಗೆಯನ್ನು ಭೂಮಿಗೆ ಬಿಡಲು ವಿನಂತಿ ಮಾಡಿಕೊಂಡನು. ಆಗ ಶಿವನು ಈ ದಿನ ಅಕ್ಷಯತೃತೀಯಾ ದಿನ ಭೂಮಿಗೆ ಗಂಗೆಯನ್ನು ಹರಿಸಿದನು.

ಅಕ್ಷಯ ತೃತೀಯಾ ಹಬ್ಬದ ಪೌರಾಣಿಕ ಹಿನ್ನೆಲೆ. - ಭಾಗ 2.

ಇನ್ನು ಈ ದಿನದಲ್ಲಿ ದ್ವಾಪರ ಯುಗದಲ್ಲಿ ಏನಾಯಿತು ತಿಳಿಯೋಣ. ಮಹಾಭಾರತ ಕಥೆಯಲ್ಲಿ ಪಾಂಡವರು ವನವಾಸಕ್ಕೆ ಹೊರಟಾಗ ಅವರ ಹಿಂದಿನಿಂದ 80, 000 ಮುನಿಗಳು 10,000ಸನ್ಯಾಸಿಗಳು ಅದಲ್ಲದೆ ಎಷ್ಟೋ ಜನ ಸಜ್ಜನರು ಹಿಂಬಾಲಿಸಿದ್ದರು. ಅವರ ಉದರಪೋಷಣೆಗಾಗಿ ವಿಚಾರಿಸಿ ಧೌಮ್ಯ ಋಷಿಗಳ ಆದೇಶದಂತೆ ಧರ್ಮರಾಜ ರಥಸಪ್ತಮಿ ದಿನದಿಂದ ಸೂರ್ಯದೇವನ ಉಪಾಸನೆ ಮಾಡಿ, ಈ ದಿನ ಸೂರ್ಯನಿಂದ ಅಕ್ಷಯಪಾತ್ರೆ ಸ್ವೀಕರಿಸಿದ್ದರಿಂದ ಈ ದಿನಕ್ಕೆ ಅಕ್ಷಯ ತೃತೀಯಾ ಎಂದು ಹೆಸರು ಬಂದಿದೆ.

ಕೃಷ್ಣನ ಗುರುಕುಲದ ಸಹಪಾಠಿ ಸುದಾಮ ಬಡ ಬ್ರಾಹ್ಮಣ ಪತ್ನಿಯ ಆದೇಶದಂತೆ ಶ್ರೀ ಹರಿಯ ಅವತಾರಿಯಾದ ಗೆಳೆಯನಾದ ಕೃಷ್ಣ ನನ್ನು ಕಾಣಲು ಹಿಡಿ ಅವಲಕ್ಕಿಯನ್ನೇ ತೆಗೆದುಕೊಂಡು ಹೋದನು. ಭಕ್ತಿಯಿಂದ ತಂದ ಅವಲಕ್ಕಿಗೆ ತೃಪ್ತನಾದ ಕೃಷ್ಣ ಸುದಾಮನಿಗೆ ಅಕ್ಷಯ ಐಶ್ವರ್ಯ ಕೊಟ್ಟು ದಯಪಾಲಿಸಿದ ದಿನವಿದು. ಈ ಕಲಿಯುಗದಲ್ಲಿ ನಾವಾದರೂ ಪರಮಾತ್ಮನಿಗೆ ಪ್ರೀತ್ಯರ್ಥವಾಗಿ ನಮ್ಮ ಯಥಾಶಕ್ತಿ ಯಥಾಮತಿ ಏನಾದರು ವಸ್ತುವನ್ನು ಸತ್ಪಾತ್ರರಿಗೆ ದಾನ ಮಾಡಿದರೆ ಆದರ ಫಲ ಅಕ್ಷಯವಾಗುವದೆನ್ನುವದಕ್ಕೆ ಈ ಸುಧಾಮನ ಕಥೆ ನಿದರ್ಶನವಾಗಿದೆ.

ಶ್ರೀ ಹರಿಯ ಅವತಾರಿಗಳಾದ ಶ್ರೀ ವೇದವ್ಯಾಸರು ವೇದಗಳನ್ನು ವಿಂಗಡಿಸಿದರು. ಪುರಾಣ ಉಪನಿಷತ್ತು ಬರೆದರೂ. ಕೊನೆಗೆ ನಡೆದುಹೋದ ಇತಿಹಾಸ ಮಹಾಭಾರತ ರೂಪದಲ್ಲಿ ಬರೆದರು. ಅವರೂ ಹೇಳಿದ್ದನ್ನು ತಿಳಿದುಕೊಂಡು ವೇಗವಾಗಿ ಬರೆದುಕೊಳ್ಳುವ ಸಾಮರ್ಥ್ಯ ಕೇವಲ ಉಮಾಸುತ ಗಣಪತಿಗೆ ಮಾತ್ರ ಇತ್ತು . ಕಾರಣ ಆತನನ್ನು ಕರೆದು ಮಹಾಭಾರತ ಪುರಾಣವನ್ನು ಹೇಳಿ ಬರೆಸಿದರು.ವ್ಯಾಸರು ಗಣಪತಿಗೆ ಬರೆದುಕೊಳ್ಳಲು ಹೇಳಿದ ದಿನವೇ ಇಂದಿನ ಅಕ್ಷಯ ತೃತೀಯಾ ಆಗಿದೆ.ಇನ್ನು ಕಲಿಯುಗದಲ್ಲಿ ಭಾಗವತಕ್ಕೆ ವ್ಯಾಖ್ಯಾನ ಬರೆದು ಮಧ್ವ ಸಮಾಜಕ್ಕೆ ಸಮರ್ಪಿಸಿದ, ಮಹಾನುಭಾವರಾದ ಉಡುಪಿ ಪೇಜಾವರ ಮಠದ ಯತಿಗಳಾದ ವಿಜಯಧ್ವಜ ತೀರ್ಥರ ಪುಣ್ಯ ತಿಥಿಯೂ ಇಂದೇ ಅಕ್ಷಯ ತೃತೀಯಾ ದಿನ ಇದೇ ಎಂದು ಬರೆಯಲು ಹೆಮ್ಮೆ ಎನಿಸುವದು.