ನಮ್ಮಾಳ್ವಾರ್ ವೈಭವಂ - ಭಾಗ -೪ | ಕೊನೆಯ ಕಂತು | Nammalvar
ತಿರುವಾಯ್ಮೊಳಿಯ ಒಂದು ಮುಖ್ಯ ಪದಿಗಂ, ಅದರಲ್ಲಿ ಅಡಗಿರುವ ವಿಷಯದ ಮಹತ್ವ , ಇತ್ಯಾದಿಗಳ ಬಗ್ಗೆ ಕಳೆದ ಕಂತಿನ ಕೊನೆಯಲ್ಲಿ ಉಲ್ಲೇಖವಿತ್ತಲ್ಲವೇ? ಇದರ ಬಗ್ಗೆ ಮತ್ತು ಇನ್ನೂ ಹಲವು ರೋಚಕ ಮಾಹಿತಿಗಳನ್ನು ಈ ಕೊನೆಯ ಕಂತಿನಲ್ಲಿ ನೋಡೋಣ…

ತಿರುವಾಯ್ಮೊಳಿಯ ೧೦ ನೇ ದಶಕದ ೫ನೇ ಪದಿಗಂ ನ ೧೧ ಪಾಶುರಗಳು ಬಹಳ ಐತಿಹ್ಯ ಉಳ್ಳವು.

ಇವುಗಳ ಬಗ್ಗೆ ಬಹು ಪ್ರಚಲಿತವಿರುವ ಕತೆಯೊಂದು ಹೀಗಿದೆ…( ಈ ಕತೆಯಲ್ಲಡಗಿರುವ ವಿಷಯಗಳು ಕೆಲವೆಡೆ ಅಲ್ಲಲ್ಲಿ ಮಾರ್ಪಾಡಾಗಿದ್ದರೂ ಕತೆಯ ಮೂಲ ತಿರುಳು ಮಾತ್ರ ಒಂದೇ… ಹಾಗಾಗಿ ಅದನ್ನು ಮಾತ್ರ ಗ್ರಹಿಸಬೇಕೆಂದು ಓದುಗರಲ್ಲಿ ಕೋರಿಕೆ…)

ನಮ್ಮಾಳ್ವಾರ್ ಅವರು ಪರಮಪದಿಸಿದ ಮೇಲೆ ತಮ್ಮ ಗುರುಗಳು ಮತ್ತು ಅವರ ಪ್ರಬಂಧಗಳಿಂದ ಅವರ ಪಟ್ಟ ಶಿಷ್ಯರಾದ ಮಧುರಕವಿ ಆಳ್ವಾರ್ ಎಷ್ಟು ಪ್ರಭಾವಿತರಾಗಿದ್ದರೆಂದರೆ ತಾವು ಅನುಭವಿಸುತ್ತಿರುವ ಅಮೃತದ ಸವಿ ಎಲ್ಲ ಸಾಮಾನ್ಯರ ತನಕವೂ ತಲುಪಬೇಕೆಂದು ಈ ಪ್ರಬಂಧಗಳ ಪ್ರಚಾರಕ್ಕೆ ಬಹಳ ಶ್ರಮಿಸಿದರು.

ಆದರೆ ಅದು “ಅಂದಿನ ಕಾಲ! “ ಇಂದಿನಂತೆ ಯಾವುದೇ ತರಹದ ಜಾಹೀರಾತುಗಳು, ಸಾಮಾಜಿಕ ಮಾಧ್ಯಮಗಳು, ವಿದ್ಯುನ್ಮಾನ ಜಾಲತಾಣಗಳು ಇತ್ಯಾದಿ ಇರದ ಕಾಲ!

ಹಾಗಾಗಿ, ಸಮಾಜದಲ್ಲಿ ಉನ್ನತ ಜಾತಿಯವರಲ್ಲದವರು ವೇದಗಳ ತಿರುಳು ಎಂದು ಬಿಂಬಿಸಲ್ಪಡುವ ಪ್ರಬಂಧಗಳನ್ನು ಬರೆಯುವುದೆಂದರೇನು? ಭಕ್ತಿಯ ಪರಾಕಾಷ್ಟೆಯಲ್ಲಿರುವ ಒಬ್ಬ ಕವಿ ತಮ್ಮ ದೈವೀಕ ಭಾವನೆಗಳನ್ನು ವರ್ಣಿಸುವ ಪ್ರಬಂಧವಿದು ಅಷ್ಟೇ ! ಎಂದು ಮಧುರಕವಿ ಆಳ್ವಾರ್ ಅವರ ಸಮಕಾಲೀನ ಕವಿಗಳು, , ಗ್ರಂಥಕಾರರು ತಿರುವಾಯ್ಮೊಳಿಗೆ ಹೆಚ್ಚು ಪ್ರಾಧಾನ್ಯ ನೀಡಲಿಲ್ಲ…

ತಮ್ಮ ಗುರುಗಳ ಗ್ರಂಥಗಳ ಬಗ್ಗೆ ಈ ತರಹದ ಅನಾದರದಿಂದ ಮಧುರಕವಿ ಆಳ್ವಾರ್ ಅವರು ಬಹು ದುಃಖಿತರಾದರು.

ಆದರೆ ಒಂದು ರಾತ್ರಿ ಅವರ ಕನಸಿನಲ್ಲಿ ಒಬ್ಬ ಬಡ, ವೃದ್ಧ ಬ್ರಾಹ್ಮಣನ ರೂಪದಲ್ಲಿ ಬಂದ ನಮ್ಮಾಳ್ವಾರ್ ಇವರಿಗೆ “ ದುಃಖಿಸಬೇಡ, ತಿರುವಾಯ್ಮೊಳಿಯ ೧೦-೫ - ಕಣ್ಣನ್ ಕழಲಿಣೈ ಪಾಶುರಗಳನ್ನು ಅವರುಗಳ ಮುಂದೆ ಇರಿಸು ಅಷ್ಟೇ…” ಎಂದರಂತೆ.

ಅಂದಿನ ಕಾಲದ ತಮಿಳುನಾಡಿನಲ್ಲಿ ಒಂದು ಗ್ರಂಥದ ಹಿರಿಮೆಯನ್ನು ಪ್ರಮಾಣೀಕರಿಸಲು ಒಂದು ವಿಶಿಷ್ಟ ರೀತಿಯ ಪರೀಕ್ಷೆ ಆಚರಣೆಯಲ್ಲಿತ್ತು.

ಆ ಪರೀಕ್ಷೆಗೆ ಅನುಗುಣವಾಗಿ ಮಧುರಕವಿ ಆಳ್ವಾರ್ ಮೇಲೆ ಉಲ್ಲೇಖಿಸಿದ ಪಾಶುರಗಳನ್ನು ಸಂಗ ಪಲಗೈಯ ಮೇಲೆ ( ಈ ಪದವನ್ನು ಕೂಡ ಹಲವಾರು ರೀತಿಯಲ್ಲಿ ಅರ್ಥೈಸುತ್ತಾರೆ… ಒಂದೆರಡು ಅರ್ಥಗಳ ಪ್ರಕಾರ ಸದ್ಯಕ್ಕೆ ಇದನ್ನು ನಾವು ಒಂದು ಎಲೆಯ ದೋಣಿ ಅಥವಾ ಒಂದು ವಿಧದ ಹಲಗೆ ಎಂದು ಗ್ರಹಿಸೋಣ) ಇರಿಸಿ ನೀರಿನ ಮೇಲೆ ಅದನ್ನು ತೇಲಿ ಬಿಟ್ಟಾಗ, ಅಂದಿನ ಕಾಲದ ಹಲವಾರು ಮಹತ್ವದ ಗ್ರಂಥಗಳೆಲ್ಲ ನೀರಿನಲ್ಲಿ ಮುಳುಗಿದವು… ಈ ಪಾಶುರಗಳಿದ್ದ ಸಂಗ ಪಲಗೈ ಮಾತ್ರ ತೇಲುತ್ತಲೇ ಇತ್ತು.

ನಂಬಲಸಾಧ್ಯವಾದ ಈ ಘಟನೆಗೆ ಸಾಕ್ಷಿಯಾದ ತಮಿಳು ಸಂಘಗಳ ಹಲವಾರು ಪ್ರಮುಖ ಕವಿಗಳು ತಾವು ನಮ್ಮಾಳ್ವಾರ್ ಅವರಿಗೆ ಎಸಗಿದ ಅಪಚಾರಕ್ಕೆ ಪ್ರಾಯಶ್ಚಿತ್ತವೋ? ಎಂಬಂತೆ ಒಂದೊಂದು ಪಾಶುರವನ್ನು ರಚಿಸಿದರಂತೆ!

ಆದರೆ ಏನಾಶ್ಚರ್ಯ! ಪರಸ್ಪರರಿಗೆ ತಿಳಿಯದಂತೆಯೇ ಅವರುಗಳು ರಚಿಸಿದ ಪಾಶುರಗಳೆಲ್ಲವೂ ಒಂದೇ ಆಗಿತ್ತು…

ಆ ಪಾಶುರ ಹೀಗಿದೆ…
“ ಸೇಮಂಗು ಕುರುಗೈಯ್ಯೋ? ಸೈಯ್ಯ ತಿರುಪ್ಪಾರ್ ಕಡಲೋ?
ನಾಮಂ ಪರಾಂಕುಶಮೋ? ನಾರಣಮೋ?
ತಾಮನ್ತುಳಮೋ? ವಕುಳಮೋ? ತೋಳಿರಂಡೋ? ನಾನ್ಗುಂ ಉಳವೋ?
ಪೆರುಮಾ ಉಮಕ್ಕು?”

ಈ ಪಾಶುರದ ಸ್ಥೂಲ ಅರ್ಥ ಹೀಗಿದೆ…

“ ನೀವು ವಾಸ್ತವವಾಗಿ ಕ್ಕುರುಹೂರ್ ಪಿರಾನ್ ಅವರೋ? ( ಎರಡು ತೋಳುಳ್ಳ ಮಾನುಷ ರೂಪದ ವಕುಳಮಾಲಾ ಭೂಷಿತ ಪರಾಂಕುಶರೋ?) ಅಥವಾ ಹಾಲ್ಗಡಲಲ್ಲಿ ಪವಡಿಸಿರುವ ಚತುರ್ಭುಜ ನಾರಾಯಣನೋ.”

ಪರತತ್ತ್ವ ನಿರ್ಣಯವನ್ನು ಘಂಟಾಘೋಷವಾಗಿ ಸಾರುವ , ಬರೀ ಎರಡೆರಡೇ ಸಾಲುಗಳ , ಪಠಿಸಲು ಬಹು ಸುಲಭದ, ಆದರೆ ಮಹತ್ತಾದ ಅರ್ಥವನ್ನೊಳಗೊಂಡ ೧೧ ಪಾಶುರಗಳ ಪದಿಗವಿದು…

ತಮಿಳು ಸಾಹಿತ್ಯದಲ್ಲಿ “ ಕೋವಿಲ್ ಅಳಗು” ( ದೇವಸ್ಥಾನದ ಸೌಂದರ್ಯ) ಎನ್ನುವ ಚಾರಿತ್ರಿಕ, ಧಾರ್ಮಿಕ ಕಾವ್ಯದಲ್ಲೂ ತಿರುವಾಯ್ಮೊಳಿಯ ಹಿರಿಮೆಯನ್ನು ಕೊಂಡಾಡುವಂಥ ಒಂದು ಸುಂದರ ಪದ್ಯವಿದೆ…

“ ಈ ಆಡುವುದೋ? ಗರುಡರ್ಕು ಎದಿರೇ?
ಇರವುಕ್ಕ್ ಎದಿರ್ ಮಿನ್ ಮಿನಿಯಾಡುವುದೋ?
ನಾಯ್ ಒಡುವುದೋ? ಒರು ಪುಲಿಕ್ಕ್ ಮುನ್?
ನರಿ ಕೇಸರಿ ಮುನ್ ನಡೆಯಾಡುವುದೋ?
ಪೇಯ್ ಆಡುವುದೋ? ಎಳಿಲ್ ಊರ್ವಶಿ ಮುನ್?
ಪೆರುಮಾನ್ ಅಡಿಶೇರ್ ವಕುಳಾಭರಣನಿನ್ ಓರ್ ಆಯಿರ ಮಾಮರೈಯಿನ್
ತಮಿಳಿನ್ ಒರು ಶೊಲ್ ಪೆರುಮೋ ಉಲಗಿಲ್ ಕವಿಯೇ? “

ಈ ಪದ್ಯದ ಸ್ಥೂಲ ಅರ್ಥ ಹೀಗಿದೆ:

“ ರೆಕ್ಕೆ ಇದ್ದ ಮಾತ್ರಕ್ಕೆ ಒಂದು ನೊಣ ( ಪಕ್ಷಿರಾಜ) ಗರುಡನಿಗೆ ಸಮವಾಗುವುದೇ?
ಪ್ರಕಾಶವಿದ್ದ ಮಾತ್ರಕ್ಕೆ ಒಂದು ಮಿಂಚುಹುಳ ಸೂರ್ಯನಿಗೆ ಸಮವಾಗುವುದೇ?
ಜೋರಾಗಿ ಕೂಗಿದ ಮಾತ್ರಕ್ಕೆ ಒಂದು ನಾಯಿ ಹುಲಿಗೆ ಸಮವಾಗುವುದೇ?
ನರಿಯ ನಡಿಗೆ ಒಂದು ಸಿಂಹದ ನಡೆಗೆ ಸಮವಾಗುವುದೋ?
( ಇಚ್ಛಾ ರೂಪ ಧರಿಸುವ ಶಕ್ತಿ ಇದ್ದ ಮಾತ್ರಕ್ಕೆ) ಒಂದು ದೆವ್ವ ದೇವಲೋಕದ ಅಪ್ಸರೆ ಊರ್ವಶಿಗೆ ಸಮವಾಗುವುದೇ?
ಅಂತೆಯೇ ವಕುಳಾಭರಣರಿಂದ ( ನಮ್ಮಾಳ್ವಾರ್ ಅವರಿಂದ) ಭಗವಂತನನ್ನು ಕುರಿತು ರಚಿತವಾದ ಒಂದು ಸಾವಿರ ವೇದರೂಪೀ ಪ್ರಬಂಧದಲ್ಲಿನ ಒಂದೇ ಒಂದು ಸಾಲಿಗೆ ಮಿಗಿಲಾದ ಬೇರೆ ಯಾವುದಾದರೂ ಸಾಲು ಈ ಪ್ರಪಂಚದಲ್ಲಿದೆಯೇ? ಹೇಳು ಕವಿ!”

ಎಂಥ ಸುಂದರ ಪದ್ಯವಿದು!

ತಿರುವಾಯ್ಮೊಳಿಗೆ ಇನ್ನೊಂದು ವೈಶಿಷ್ಟ್ಯವಿದೆ…
ನಮ್ಮ ಶ್ರೀವೈಷ್ಣವ ಸಂಪ್ರದಾಯದಲ್ಲಿ, ಯಾವುದೇ ಸೇವಾಕಾಲದಲ್ಲಿ ಸಮಯಾಭಾವದಿಂದ ಪೂರ್ತಿ ನಾಲಾಯಿರಂ ಪ್ರಬಂಧಗಳ ಪಾರಾಯಣ ಸಾಧ್ಯವಾಗದಿದ್ದಲ್ಲಿ , ಕೋಯಿಲ್ ತಿರುವಾಯ್ಮೊಳಿ ( ಇದು ತಿರುವಾಯ್ಮೊಳಿಯ ಪ್ರತೀ ದಶಕದ - ಪ್ರಮುಖ ತತ್ವವುಳ್ಳ ಪದಿಗಂ ಗಳನ್ನು ಒಂದಾಗಿ ಪೋಣಿಸಿ, ನೇಯ್ದ ೧೦೦ ಪಾಶುರಗಳ ಬಕುಳಮಾಲೆ.) ಪಾರಾಯಣ ಬಹಳ ಶ್ರೇಷ್ಠ.

ಕೊನೆಯದಾಗಿ…
ನಾವೆಲ್ಲ ವಿಷ್ಣು ದೇವಸ್ಥಾನಕ್ಕೆ ಹೋದಾಗ ದೇವರ ತೀರ್ಥ ಪ್ರಸಾದದ ನಂತರ “ ಶಠಾರಿ” ಎಂದು ನಮ್ಮ ತಲೆಯ ಮೇಲೆ ದೇವರ ಪ್ರಸಾದರೂಪದ ಮುದ್ರೆಯನ್ನು ಒತ್ತುತ್ತಾರಲ್ಲ, ಇದರ ಸಂಕೇತ, ಐತಿಹ್ಯ, ಮಹತ್ವವನ್ನು ಅರಿಯೋಣ.

ಈ “ ಶಠಾರಿ” ( ಶಠ+ ಅರಿ) ನಮ್ಮಾಳ್ವಾರ್ ಅವರ ಇನ್ನೊಂದು ಹೆಸರು, ಹಾಗಾಗಿ ಇದು ಅವರ ಒಂದು ಸ್ವರೂಪ ಕೂಡ . ಇದನ್ನು ಭಗವಂತನ ಪವಿತ್ರ ಪಾದಗಳ ಸಂಕೇತವೆಂದೂ ಹೇಳುತ್ತಾರೆ. ಅಂತೆಯೇ ಇದರ ಸ್ಥಾನ ದೇವರ ಗರ್ಭಗುಡಿಯಲ್ಲಿ ಭಗವಂತನ ವಿಗ್ರಹದ ಪಾದದ ಮುಂದೆಯೇ.

ಈ ಶಠಾರಿಯನ್ನು ನಮ್ಮ ತಲೆಯ ಮೇಲೆ ಸ್ವೀಕರಿಸುವುದರಿಂದ, ನಮ್ಮಾಳ್ವಾರ್ ಅವರ ಅನುಗ್ರಹ ನಮ್ಮಂಥವರ ಮೇಲೂ ಒದಗಿ, ಅವರಂತೆಯೇ ಭಗವದನುಗ್ರಹ, ಭಕ್ತಿ ಇತ್ಯಾದಿ ನಮಗೂ ಪ್ರಾಪ್ತವಾಗುವುದು ಎನ್ನುವುದೊಂದು ನಂಬಿಕೆ, ಭಾವನೆ.

ಆದರೆ, ಆತನ ಕೃಪೆ ನಮ್ಮ ಮೇಲೆ ಒಮ್ಮೆಲೇ ಅಪಾರವಾಗಿ ಒದಗಿದರೆ ನಮಗೆ ತಡೆದುಕೊಳ್ಳುವ ಶಕ್ತಿ ಇದೆಯೇ?

ಆಗ ತಾನೇ ಜನಿಸಿ , ಬಾಹ್ಯ ಪ್ರಪಂಚಕ್ಕೆ ತನ್ನನ್ನು ತೆರೆದುಕೊಳ್ಳುತ್ತಿರುವ ಪುಟ್ಟ ಕಂದನಿಗೆ ಒಬ್ಬ ತಾಯಿ ಹೇಗೆ ನಿಧಾನವಾಗಿ ಆಹಾರದ ಅಭ್ಯಾಸ ಮಾಡಿಸುತ್ತಾಳೋ ಅದೇ ರೀತಿಯಲ್ಲಿ ಭಗವಂತ ನಮ್ಮೆಡೆ ನಿಧಾನವಾಗಿ ನಡೆದು ಬರುತ್ತಾ , ಆತನ ಕೃಪೆಗೆ, ಬರುವಿಕೆಗೆ ತಕ್ಕ ಮನಸ್ಥಿತಿಗೆ ನಮ್ಮನ್ನು ಹದಗೊಳಿಸುತ್ತಾ, ಕೊನೆಗೆ ನಮ್ಮನ್ನು ಸೂಕ್ತ ಕಾಲದಲ್ಲಿ ಅನುಗ್ರಹಿಸುತ್ತಾನಂತೆ… ಹೀಗೆಂದು ನಮ್ಮಾಳ್ವಾರ್ ಅವರು ತಮ್ಮ ತಿರುವಾಯ್ಮೊಳಿಯ ೧-೯ ರಲ್ಲಿನ ೧೧ ಪಾಶುರಗಳಲ್ಲಿ ಬಹು ಸುಂದರವಾಗಿ ವರ್ಣಿಸುತ್ತಾರೆ…
೧ ನೇ ಪಾಶುರ- “ ಇವೈಯುಮ್ ಅವೈಯುಮ್ ಉವೈಯುಮ್…. “ ಮೊದಲು ಆತ ನಮ್ಮ ಸುತ್ತಲೂ ಇರುವ ಸೂಚನೆ ನೀಡುತ್ತಾನೆ…
೨ ನೇ ಪಾಶುರ… “ ಶೂಯಲ್ ಪಲಪಲ ವಲ್ಲಾನ್…” ನಂತರ ಮೆಲ್ಲಗೆ ನನ್ನ ಸನಿಹ ಬರುವ…
೩ ನೇ ಪಾಶುರ…” ಅರುಹುಲಿಲಾಯ ಪೆರುಮ್ ಶೀರ್…” ಹೀಗೆ ಸನಿಹ ಬಂದವನು ನಿಧಾನವಾಗಿ ನನ್ನ ಪಕ್ಕದಲ್ಲಿ ಬರುವನು…
೪ ನೇ ಪಾಶುರ…” ಉಡನ್ ಅಮರ್ ಕಾದಲ್…”ಪಕ್ಕದಲ್ಲಿ ಬಂದಾತ ಸಮಯ ನೋಡಿ ಮೆತ್ತಗೆ ನನ್ನ ಮಡಿಲೇರುವನು…
೫ ನೇ ಪಾಶುರ…” ಒಕ್ಕಲೈವೈತ್ತು ಮುಲೈಪ್ಪಾಲ್ ಉಣ್ಣೆನ್ರು…”. ನಿಧಾನವಾಗಿ ಆತ ನನ್ನ ಮಡಿಲಿನಿಂದ ಮೇಲೇರುತ್ತಾ ನನ್ನ ಹೃದಯದಲ್ಲಿ ಕುಳಿತುಬಿಟ್ಟ…
೬ ನೇ ಪಾಶುರ…” ಮಾಯನ್ ಎನ್ ನೆಂಜಿಲುಳ್ಳಾನ್…” ಹೀಗೆ ಕೆಲವರಿಗೆ ದೂರವಾಗಿಯೂ, ಮತ್ತೆ ಕೆಲವರಿಗೆ ಹತ್ತಿರವಾಗ ತೊಡಗುವ ಆತ ( ತನ್ನ ಆಯುಧಗಳಾದ ಶಂಖ, ಚಕ್ರಗಳ ಸಮೇತ) ನನ್ನ ಹೆಗಲೇರಿರುವನು.
೭ ನೇ ಪಾಶುರ- “ ತೋಳಿಣೈ ಮೇಲುಮ್ …” ಹೀಗೆ ಅಡಿಗಡಿಗೂ, ದಿನದಿನಕ್ಕೂ ನನ್ನ ಮೇಲೆ ತನ್ನ ಅಧಿಪತ್ಯ ತೋರುವ ಆತ ಇದೀಗ ನನ್ನ ನಾಲಿಗೆಯ ಮೇಲೆ ಸ್ಥಾಪಿತನಾಗಿರುವ…
೮ ನೇ ಪಾಶುರ…” ನಾವಿನುಳ್ ನಿನ್ಱು ಮಲರುಮ್…”. ನಾಲಿಗೆಯ ಮೇಲೆ ನೆಲೆಸಿರುವ ತನ್ನ ಸೌಂದರ್ಯವನ್ನು ನನಗೆ ತೋರಲೋ ಎಂಬಂತೆ ಈಗ ನನ್ನ ಕಣ್ಣುಗಳನ್ನೇ ಹೊಕ್ಕಿರುವ ( ಇಲ್ಲಿಯವರೆಗೂ ಸಾಮಾನ್ಯ ಕಣ್ಣುಗಳಾಗಿದ್ದವನ್ನು ದಿವ್ಯ ಚಕ್ಷುಗಳನ್ನಾಗಿಸಿರುವ)…
೯ ನೇ ಪಾಶುರ… “ ಕಮಲಕ್ಕಣ್ಣನ್ ಎನ್ ಕಣ್ಣಿನುಳ್ಳಾನ್…”. ( ತನ್ನ ವಿಶ್ವರೂಪವನ್ನು ತೋರುವ ಮೊದಲು ಅರ್ಜುನನಿಗೂ, ಸಂಜಯನಿಗೂ ದಿವ್ಯ ನೇತ್ರಗಳನ್ನು ನೀಡಿದ ಭಗವದ್ಗೀತೆಯ ಪ್ರಸಂಗ ನೆನಪಾಗುವುದಿಲ್ಲವೇ? ) ಇಂಥ ದಿವ್ಯ ನೇತ್ರಗಳಿಂದ ಮತ್ತೂ ಮೇಲೇರುತ್ತಾ ನನ್ನ ಹಣೆಯ ಮೇಲೆ ಈಗ ನೆಲೆಸಿರುವ( ಇಲ್ಲಿಯ ತನಕ ನನ್ನೊಳಗೇ ಅಡಗಿದ್ದ ಆತ ನನ್ನ ಹಣೆಯ ಮುಖೇನ ಪ್ರಕಟವಾಗಿರುವ)…
೧೦ ನೇ ಪಾಶುರ…” ನೆತ್ತಿಯುಳ್ ನಿನ್ರು ಎನ್ನೈ ಆಳುಮ್…”. ಹೀಗೆ ತನ್ನ ಪಾದಗಳನ್ನು ಪ್ರತಿನಿಧಿಸುವ ಲಾಂಛನದ ಮುಖೇನ ನನ್ನ ಹಣೆಯಲ್ಲಿ ವಿರಾಜಿಸುತ್ತಿದ್ದವನು ಸೂಕ್ತ ಸಮಯವನ್ನು ನೋಡಿ ಈಗ ನನ್ನ ಶಿರಸ್ಸಿನ ಒಳ ಹೊಕ್ಕಿ ಬಿಟ್ಟಿರುವನು…

ಹೀಗೆ ಭಗವಂತ ನಿಧಾನವಾಗಿ, ಹಂತ ಹಂತವಾಗಿ ನಮ್ಮೆಡೆ ಬರುವ ಪರಿಯನ್ನು ಸಹಜ ಸುಂದರವಾಗಿ ವರ್ಣಿಸಿರುವ ಆಳ್ವಾರ್ , ಕೊನೆಯ (೧೧ನೇ) ಪಾಶುರದಲ್ಲಿ ಈ ೧೧ ಪಾಶುರಗಳನ್ನು ದಿನವೂ ಪಠಿಸುವವರಿಗೆ ದೊರೆಯುವ ಫಲವನ್ನೂ (ಫಲಶ್ರುತಿ) ಹೇಳಿದ್ದಾರೆ… ನನ್ನ ಶಿರಸ್ಸಿನ ನಂತರ ಮೇಲೇರಲು ಬೇರೆ ಜಾಗವಿಲ್ಲದ ಕಾರಣ, ಭಗವಂತ ಅಲ್ಲೇ ಶಾಶ್ವತವಾಗಿ ನೆಲೆಸಿಬಿಟ್ಟಿರುವ. ಈ ಪಾಶುರಗಳನ್ನು ಒಮ್ಮೆಯಾದರೂ ಪಠಿಸುವವರ ಶಿರಸ್ಸನ್ನೂ ಇದೇ ರೀತಿ ಆತ ಅಲಂಕರಿಸುವ.

ದೇವಸ್ಥಾನದಲ್ಲಿ ಶಠಾರಿ ಪ್ರಸಾದವನ್ನು ಸ್ವೀಕರಿಸುತ್ತ, ಹೀಗಾದರೂ ಹಂತ ಹಂತವಾಗಿ ಆತನ ಕೃಪೆ ನಮಗೆಲ್ಲರಿಗೂ ಒದಗಲೆಂದು ನಾವೆಲ್ಲಾ ಪ್ರಾರ್ಥಿಸೋಣ.

ಆಳ್ವಾರ್ ಗಳಲ್ಲೇ ಅತ್ಯಂತ ವಿಶಿಷ್ಟರಾದ ನಮ್ಮಾಳ್ವಾರ್ ಅವರ ತಿರುನಕ್ಷತ್ರ ವರ್ಷಕ್ಕೊಮ್ಮೆ ಬರುವ ವೈಶಾಖ- ವಿಶಾಖಾ ದಿನದ ಆಚರಣೆಗೆ ಮಾತ್ರ ಸೀಮಿತವಾಗದೇ ಅನುದಿನವೂ ಆಚರಿಸುವ ನಮ್ಮ ದಿನಚರಿಯ ಮುಖ್ಯ ಭಾಗವಾಗಬೇಕು.

ಅಂತೆಯೇ ತಿರುವಾಯ್ಮೊಳಿಯ ೧೦-೫-೮ ರಲ್ಲಿ ಹೇಳುವಂತೆ ( ಶಾರಾ ಏದಂಗಳ್…..) ಈ ಭಕ್ತಾಮೃತದ ಅಮೃತದ ಕನಿಷ್ಟ ಒಂದು ಹನಿಯನ್ನಾದರೂ ಅನುದಿನವೂ ಸೇವಿಸುತ್ತಾ ನಾವೂ ಅಮರರಾಗೋಣ.

ಆಳ್ವಾರ್, ಎಂಬೆರುಮಾನಾರ್, ಜೀಯರ್ ತಿರುವಡಿಗಳೇ ಶರಣಂ.